ನಾಪೋಕ್ಲು, ಜೂ. 23: ಕೊಡಗಿನಲ್ಲಿ ನಾಪೋಕ್ಲುವಿನಲ್ಲೀಗ ಬೆಳ್ಳಕ್ಕಿಗಳ ಕಲರವ. ಪಟ್ಟಣದಲ್ಲಿನ ಮರಗಳಲ್ಲಿ ಶ್ವೇತಧಾರಿಯಾಗಿ ಕಂಗೊಳಿಸುತ್ತಿರುವ ಬೆಳ್ಳಕ್ಕಿಗಳು ಗೂಡು ಕಟ್ಟುವ, ಮೊಟ್ಟೆಯಿಟ್ಟು ಕಾವು ನೀಡುವ ಕಾರ್ಯದಲ್ಲಿ ನಿರತವಾಗಿವೆ. ಹಾಗಾಗಿ ನಾಪೋಕ್ಲು ವ್ಯಾಪ್ತಿಯ ಪರಿಸರದಲ್ಲಿ ಎಲ್ಲಿ ನೋಡಿದರಲ್ಲಿ ಬೆಳ್ಳಕ್ಕಿಗಳ ದಂಡೇ ಕಂಡು ಬರುತ್ತಿದೆ.
ಮುಂಗಾರು ಪ್ರಾರಂಭವಾಗುತ್ತಿ ದ್ದಂತೆಯೇ ಬೆಳ್ಳಕ್ಕಿಗಳು ಕೊಡಗಿನತ್ತ ಬರುವುದು ಹೊಸದೇನೂ ಅಲ್ಲ. ಈ ಹಿಂದಿನಿಂದಲೂ ಬರುತ್ತಲೇ ಇವೆ. ಮೊದಲೆಲ್ಲಾ ಚೆರಿಯ ಪರಂಬುವಿನ ನದಿ ತೀರದ ಬಿದಿರು ಮೆಳೆಗಳಲ್ಲಿ ಆಶ್ರಯ ಪಡೆಯುತ್ತಿದ್ದವು. ಇತ್ತೀಚೆಗೆ ನಗರಗಳ ಹೃದಯ ಭಾಗದಲ್ಲಿಯೇ ಬೀಡು ಬಿಡುತ್ತಿವೆ. ನಾಪೋಕ್ಲು ಸಮೀಪದ ಕಾವೇರಿ ನದಿ ತೀರದ ಹೆಮ್ಮರಗಳಲ್ಲಿ ನೆಲೆನಿಂತು ತಮ್ಮ ಸಂತಾನೋತ್ಪತ್ತಿಯ ಬಳಿಕ ಹಿಂತಿರುಗುತ್ತವೆ. ಅವುಗಳು ಗೂಡು ಕಟ್ಟುವ, ಮೊಟ್ಟೆ ಇಡುವ, ಕಾವು ನೀಡುವ, ಮರಿಗಳಿಗೆ ಗುಟುಕು ನೀಡುವುದನ್ನು ನೋಡಲು ಪಕ್ಷಿ ಪ್ರೇಮಿಗಳು ಇತ್ತ ಬರುತ್ತಾರೆ. ಈಗ ಎಲ್ಲಿ ನೋಡಿದರಲ್ಲಿ ಬೆಳ್ಳಕ್ಕಿಗಳದ್ದೇ ಕಾರುಬಾರು.
ಸಾಮಾನ್ಯವಾಗಿ ಕೊಡಗಿನಲ್ಲಿ ಮಳೆಗಾಲ ಪ್ರಾರಂಭವಾಗಿ ಮಳೆಯ ರಭಸ ಹೆಚ್ಚಾಗುತ್ತಿದ್ದಂತೆಯೇ ಚಳಿ, ಗಾಳಿಯ ಹೊಡೆತ ಸಹಿಸಲಾರದ ಕೆಲವು ಪಕ್ಷಿಗಳು ಬಿಸಿಲನ್ನು ಹುಡುಕಿಕೊಂಡು ರಂಗನತಿಟ್ಟು ಪಕ್ಷಿಧಾಮದತ್ತ ಹಾರುತ್ತವೆ. ಇವು ಮತ್ತೆ ಬರುವುದು ಮಳೆ ಕಡಿಮೆ ಆದ ಬಳಿಕ. ಆದರೆ ಬೆಳ್ಳಕ್ಕಿಗಳು ಇವುಗಳಿಗೆ ತದ್ವಿರುದ್ಧ ಮಳೆಗಾಲ ಪ್ರಾರಂಭವಾಗುವ ಮುನ್ಸೂಚನೆ ಸಿಗುತ್ತಿದ್ದಂತೆಯೇ ನಿಧಾನವಾಗಿ ಕೊಡಗಿನತ್ತ ಹೆಜ್ಜೆಯಿಡ ಲಾರಂಭಿಸುತ್ತವೆ. ಸೂಕ್ತವಾದ ಕೆಲವು ಸ್ಥಳಗಳಲ್ಲಷ್ಟೇ ಇವು ಬೀಡು ಬಿಡುತ್ತವೆ. ಸಂತಾನೋತ್ಪತ್ತಿಯ ಬಳಿಕ ಅಲ್ಲಿಂದ ಹಾರಿ ಹೋಗುತ್ತವೆಯಾದರೂ ಮತ್ತೆ ಮಾರನೆಯ ವರ್ಷ ಬಂದಾಗ ಅದೇ ಸ್ಥಳವನ್ನು ಆಶ್ರಯಿಸುತ್ತವೆ.
ಕಾವೇರಿ ಕೊಳ್ಳದಲ್ಲಿ ಮಳೆಯಾದಾಗ ನದಿಗಳು ತುಂಬಿ ಹರಿಯುತ್ತವೆ. ಈ ಸಂದರ್ಭ ಮಳೆಯಿಂದಾಗಿ ರಂಗನತಿಟ್ಟು ಪಕ್ಷಿಧಾಮದಲ್ಲಿ ನೀರು ತುಂಬಿ ಹರಿದಾಗ ಇಲ್ಲಿ ಅಪಾಯ ಎದುರಾಗುವ ಸಾಧ್ಯತೆ ಇರುವು ದರಿಂದ ಸೂಕ್ತ ಸ್ಥಳ ಹುಡುಕಿಕೊಂಡು ಕೊಡಗಿನತ್ತ ಬರುತ್ತವೆ. ಎಂಬುದು ಸ್ಥಳೀಯರ ಅಭಿಪ್ರಾಯ. ಇನ್ನು ಕೆಲವರು ಮಳೆಗಾಲದಲ್ಲಿ ದೇಶ ವಿದೇಶಗಳಿಂದ ಸಾವಿರಾರು ಬಗೆಯ ಪಕ್ಷಿಗಳು ರಂಗನತಿಟ್ಟಿಗೆ ಬರುವು ದರಿಂದ ಅಲ್ಲಿ ಸಂತಾನೋತ್ಪತ್ತಿಗೆ ತೊಂದರೆಯಾಗಬಹುದೆಂದು ಸೂಕ್ತ ಸ್ಥಳಗಳನ್ನು ಅರಸಿಕೊಂಡು ಇಲ್ಲಿಗೆ ಬರುತ್ತವೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅದು ಏನೇ ಇರಲಿ ಇದೀಗ ಕೊಡಗಿನಲ್ಲಿ ಬೆಳ್ಳಕ್ಕಿಗಳು ಬರುತ್ತಿರುವುದರಿಂದ ಜಿಲ್ಲೆಯಲ್ಲಿ ಪಕ್ಷಿಧಾಮವಿಲ್ಲ ಎಂಬ ಕೊರತೆ ನೀಗಿದಂತಾಗಿದೆ. ಅಷ್ಟೇ ಅಲ್ಲ ಈಗಿರುವ ಪ್ರವಾಸಿ ತಾಣಗಳ ಪಟ್ಟಿಗೆ ಇದೂ ಸೇರ್ಪಡೆಯಾಗಿದೆ.
ನಾಪೋಕ್ಲು ಪಟ್ಟಣದ ತೋಟದ ಮರಗಳಲ್ಲಿ ಬೆಳ್ಳಕ್ಕಿಗಳು ಬೀಡು ಬಿಟ್ಟಿರುವುದು ಈಗ ಗೋಚರಿಸುತ್ತವೆ. ಇದೀಗ ಕೆಲವು ಬೆಳ್ಳಕ್ಕಿಗಳು ಮೊಟ್ಟೆಯಿಡುವ , ಗೂಡು ಕಟ್ಟುವುದರಲ್ಲಿ ನಿರತವಾಗಿರುವುದು ಕಂಡು ಬರುತ್ತದೆ. ಬೆಳಿಗ್ಗೆ ಗೂಡು ಬಿಟ್ಟು ಹಾರಿದರೆ ಸಂಜೆಯೇ ಗೂಡು ಸೇರುತ್ತವೆ. ಹತ್ತಾರು ಕಿ.ಮೀ. ವರೆಗೆ ಹಾರಿ ಹೋಗುವ ಇವು ಗದ್ದೆಗಳಲ್ಲಿ, ನದಿ ಬದಿಗಳಲ್ಲಿ ಕಪ್ಪೆ ಹುಳುಗಳನ್ನು ಹಿಡಿದು ತಿನ್ನುತ್ತಾ ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಹಸಿರು ಗದ್ದೆಗಳ ನಡುವೆ ಕತ್ತೆತ್ತಿ ಅತ್ತಿತ್ತ ನೋಡುತ್ತಾ ಹೊಂಚು ಹಾಕಿ ಹುಳು ಹುಪ್ಪಟೆಗಳನ್ನು ಹಿಡಿಯುವುದನ್ನು ವೀಕ್ಷಿಸುವುದೇ ಮಜಾ. ಕೊಡಗಿನವರು ಮಾಂಸಾಹಾರಿಗಳಾದರೂ ಬೆಳ್ಳಕ್ಕಿಗಳಿಗೆ ಯಾವುದೇ ರೀತಿಯ ತೊಂದರೆ ನೀಡದಿರುವುದು ಅವುಗಳ ಮೇಲೆ ಅವರಿಟ್ಟಿರುವ ಪ್ರೀತಿಗೆ ಸಾಕ್ಷಿ. ಇದರಿಂದ ಅವು ಮತ್ತೆ ಇಲ್ಲಿಗೆ ಬರಲು ಕಾರಣವಾಗಿದೆ. ಕೆಲವೊಮ್ಮೆ ಸುರಿದ ಭಾರೀ ಮಳೆಯಿಂದಾಗಿ ಇವುಗಳು ತೊಂದರೆ ಅನುಭವಿಸು ವಂತಾಗಿತ್ತು. ಕೆಲವು ಮರಿಗಳು ಮಳೆಯ ರಭಸಕ್ಕೆ ಸಿಕ್ಕಿ ನೀರಿನಲ್ಲಿ ಕೊಚ್ಚಿಹೋಗಿದ್ದವು. ಹೀಗಾಗಿ ನದಿ ದಡದಿಂದ ಪಟ್ಟಣದತ್ತ ತಮ್ಮ ವಾಸ್ತವ್ಯವನ್ನು ವಿಸ್ತರಿಸುತ್ತಿವೆ. ಬೆಳ್ಳಕ್ಕಿಗಳ ಕಲರವ, ಹಾರಾಟ ಎಲ್ಲವೂ ಮುದ ನೀಡುತ್ತವೆ. ಆದರೆ ಪಟ್ಟಣದಲ್ಲಿ ಅವುಗಳು ಎಲ್ಲೆಂದರಲ್ಲಿ ಪಿಕ್ಕೆಗಳನ್ನು ಹಾಕುವುದರಿಂದ ಸಾರ್ವಜನಿಕರಿಗೆ ಕಿರಿಕಿರಿಯುಂಟಾ ಗುತ್ತಿದೆ. ಆದರೂ ಅದನ್ನೆಲ್ಲಾ ಸಹಿಸಿಕೊಂಡು ಇಲ್ಲಿನವರು ಬೆಳ್ಳಕ್ಕಿಗಳ ಸಂತಾನೋತ್ಪತ್ತಿಗೆ ಸಹಕರಿಸುತ್ತಿದ್ದಾರೆ ಪ್ರತಿವರ್ಷವೂ ಮಿಸ್ ಮಾಡದೆ ಈ ಸ್ಥಳಗಳಿಗೆ ಆಗಮಿಸುತ್ತಿದ್ದು ಆ ಮೂಲಕ ಕೊಡಗಿನಲ್ಲಿಯೂ ಪಕ್ಷಿಧಾಮದ ನಿರ್ಮಾಣಕ್ಕೆ ಮುನ್ನುಡಿ ಬರೆಯುತ್ತಿವೆ.
-ದುಗ್ಗಳ ಸದಾನಂದ