ಮಡಿಕೇರಿ, ಜೂ. 23: ಜಿಲ್ಲೆಯ ಕೊಡ್ಲಿಪೇಟೆ ಹೋಬಳಿ ಶಿರಂಗಾಲದ 45 ವರ್ಷದ ನಿವಾಸಿ(ಜಿಲ್ಲೆಯ 5ನೇ ಸೋಂಕಿತ) (P-9215) ಹಣ್ಣಿನ ವ್ಯಾಪಾರಿಯೊಬ್ಬರಿಗೆ ನಿನ್ನೆ ಕೊರೊನಾ ಸೋಂಕು ದೃಢವಾಗಿದ್ದು, ಅವರ ಮಕ್ಕಳಿಗೂ ಸೋಂಕು ಇರುವುದಾಗಿ ತಾ.23 ರಂದು (ಇಂದು) ದೃಢಪಟ್ಟಿದೆ. ಮಕ್ಕಳ ವಯಸ್ಸು 17 ಹಾಗೂ 14 ಆಗಿದ್ದು, ಇವರಿಬ್ಬರೂ ಕೂಡ ತಾ.22 ರಂದೇ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ 2 ಹೊಸ ಪ್ರಕರಣಗಳನ್ನು ಜಿಲ್ಲೆಯ 7 ಹಾಗೂ 8ನೇ ಸೋಂಕಿತರು ಎಂದು ಗುರುತಿಸಲಾಗಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ ನೀಡಿದರು.ಶನಿವಾರಸಂತೆ ವ್ಯಾಪ್ತಿಯಲ್ಲಿ ಈ ಹಣ್ಣಿನ ವ್ಯಾಪಾರಿ (P-9215)ಯೊಂದಿಗೆ ಸಂಪರ್ಕ ಹೊಂದಿದವರ ಪತ್ತೆಗಾಗಿ ಕೊಡಗು ಜಿಲ್ಲಾಡಳಿತ ಕ್ರಮ ಕೈಗೊಂಡಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು. ಹಣ್ಣಿನ ವ್ಯಾಪಾರಿ ಕೊಡಗು ಜಿಲ್ಲೆ ಮಾತ್ರವಲ್ಲದೇ ಗದಗ, ಬೆಂಗಳೂರು, ಹುಣಸೂರಿಗೂ ತೆರಳಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆತನ 14 ವರ್ಷದ ಮಗ ಮತ್ತು ಪಿಯು ವ್ಯಾಸಂಗ ಮಾಡುತ್ತಿರುವ 17 ವರ್ಷದ ಮಗಳು, ತಂದೆಯೊಂದಿಗೆ ಹಲವೆಡೆ ಸಂಚರಿಸಿದ್ದು, ಇವರಿಬ್ಬರಿಗೂ ಸೋಂಕು ತಗಲಿರುವುದನ್ನು ಖಚಿತಪಡಿಸಲಾಗಿದೆ. ಆತನ ಪತ್ನಿ ಹಾಗೂ ಇನ್ನೋರ್ವ ಮಗನ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಿದ್ದು, ಇವರಿಬ್ಬರ ವರದಿ ನೆಗೆಟಿವ್ ಬಂದಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು. ಈಗಾಗಲೇ ಈ ಕುಟುಂಬ ವಾಸವಿದ್ದ ಪ್ರದೇಶವನ್ನು ಕಂಟೈನ್‍ಮೆಂಟ್ ವಲಯ ಎಂದು ಘೋಷಿಸಿರುವುದರಿಂದ ಈ 2 ಪ್ರಕರಣಗಳಲ್ಲಿ ಹೊಸ ಕಂಟೈನ್‍ಮೆಂಟ್ ವಲಯವನ್ನು ಘೋಷಿಸಿಲ್ಲ ಎಂದು ಅವರು ತಿಳಿಸಿದರು. ಈ ಇಬ್ಬರು ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು
(ಮೊದಲ ಪುಟದಿಂದ) ಸಾಂಸ್ಥಿಕ ಸಂಪರ್ಕ ತಡೆ ಕೇಂದ್ರದಲ್ಲಿರಿಸಲಾಗಿದೆ. ದ್ವಿತೀಯ ಸಂಪರ್ಕಕ್ಕೆ ಬಂದವರನ್ನು ಗೃಹ ಸಂಪರ್ಕ ತಡೆಯಲ್ಲಿರಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ಮಾಹಿತಿ ನೀಡಿದರು.
ಸೀಲ್‍ಡೌನ್
ಜಿಲ್ಲೆಯ 5 ನೇ ಸೋಂಕಿತ, ಹಣ್ಣಿನ ವ್ಯಾಪಾರಿಗೆ ಶನಿವಾರಸಂತೆಯ ಗುಂಡೂರಾವ್ ಬಡಾವಣೆಯಲ್ಲಿ ಸ್ವಂತ ಮನೆಯಿದ್ದು, ಇದನ್ನು ಭೋಗ್ಯಕ್ಕೆ ಕೊಡುವ ನಿಟ್ಟಿನಲ್ಲಿ ಸಿದ್ಧತೆ ಮಾಡುವ ಸಂಬಂಧ ಅಲ್ಲಿಗೆ ಭೇಟಿ ನೀಡಿದ್ದ. ಈ ಮನೆ ಸೇರಿದಂತೆ ಅವರ ಸಂಬಂಧಿಕರ ಮನೆ ಹಾಗೂ ಸಮೀಪದ ಅಂಗನವಾಡಿಯನ್ನೂ ಸೋಮವಾರಪೇಟೆ ತಾಲೂಕಿನ ತಹಶೀಲ್ದಾರ್ ಆರ್.ಗೋವಿಂದರಾಜ್ ನೇತೃತ್ವದಲ್ಲಿ ಸೀಲ್‍ಡೌನ್ ಮಾಡಲಾಗಿದೆ.
ಹಣ್ಣು ವ್ಯಾಪಾರಿಯ ಮಗ, ಜಿಲ್ಲೆಯ 8ನೇ ಸೋಂಕಿತ ಗುಂಡೂರಾವ್ ಬಡಾವಣೆಯ ಸುತ್ತ-ಮುತ್ತಲಿನ ಕೆಲ ಮಕ್ಕಳೊಂದಿಗೆ ಸಂಪರ್ಕಕ್ಕೆ ಬಂದಿದ್ದು ಅವರ ಮಾಹಿತಿಯನ್ನು ಪತ್ತೆ ಹಚ್ಚಲಾಗುತ್ತಿದೆ. ನಂತರ ಅವರನ್ನೂ ಸಹ ಕೋವಿಡ್-19 ತಪಾಸಣೆಗೊಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕಂಟೈನ್‍ಮೆಂಟ್ ವಲಯದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ
ಜಿಲ್ಲೆಯಲ್ಲಿ ಕಂಟೈನ್‍ಮೆಂಟ್ ವಲಯದಿಂದ 2 ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುತ್ತಿದ್ದು, ಸರ್ಕಾರದ ನಿಯಮಾವಳಿಯಂತೆ ಇತರ ವಿದ್ಯಾರ್ಥಿಗಳ ಸಂಪರ್ಕಕ್ಕೆ ಬಾರದೆ ಪ್ರತ್ಯೇಕ ಕೊಠಡಿಯಲ್ಲಿ ಆ ವಿದ್ಯಾರ್ಥಿ ಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಲಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಮಾರ್ಚ್ 19 ರಂದು ವರದಿಯಾದ ಮೊದಲನೆಯ ಕೊರೊನಾ ಸೋಂಕು ಪ್ರಕರಣ ಸೇರಿದಂತೆ ಇಲ್ಲಿಯವರೆಗೆ ಒಟ್ಟು 8 ಕೊರೊನಾ ಪ್ರಕರಣಗಳು ದಾಖಲಾಗಿವೆ. ಈ ಮೊದಲನೆಯ ಸೋಂಕಿತ ವ್ಯಕ್ತಿ ಏಪ್ರಿಲ್ ತಿಂಗಳಿನಲ್ಲಿ ಗುಣಮುಖರಾಗಿದ್ದು, ಸದರಿ ವ್ಯಕ್ತಿಯನ್ನು ಒಳಗೊಂಡಂತೆ ತಾ.22 ರಂದು (ನಿನ್ನೆ) ಗುಣಮುಖರಾದ ಇಬ್ಬರು ಸೇರಿದಂತೆ ಒಟ್ಟು 3 ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಕೊರೊನಾ ಪ್ರಕರಣಗಳು 5 ಆಗಿದ್ದು, ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಸಂಪರ್ಕದಲ್ಲಿದ್ದವರ ಆರೋಗ್ಯ ತಪಾಸಣೆ
ಕೊರೊನಾ ವೈರಸ್ ಸೋಂಕಿತ ಹಣ್ಣಿನ ವ್ಯಾಪಾರಿ ತಂಗಿದ್ದ ಕರ್ಕಳ್ಳಿ ಗ್ರಾಮದ ಪತ್ನಿ ಹಾಗೂ ದೊಡ್ಡಮ್ಮನ ಮನೆಯ ಸದಸ್ಯರಿಗೆ ಇಂದು ಆರೋಗ್ಯ ತಪಾಸಣೆ ನಡೆಸಲಾಯಿತು.
ಸೋಂಕಿತ ವ್ಯಕ್ತಿ ಪತ್ನಿಯ ಮನೆಯಲ್ಲಿ ವಾಸ್ತವ್ಯ ಹೂಡಿದ್ದ ಕಾರಣ, ಪ್ರಾಥಮಿಕ ಸಂಪರ್ಕದಲ್ಲಿದ್ದ 10 ಮಂದಿ, ಎರಡನೇ ಸಂಪರ್ಕದಲ್ಲಿದ್ದ 19ಮಂದಿಯ ಆರೋಗ್ಯ ತಪಾಸಣೆ ನಡೆಸಲಾಯಿತು. ಕರ್ಕಳ್ಳಿಯ ದೊಡ್ಡಮ್ಮನ ಮನೆಗೂ ತೆರಳಿದ್ದರಿಂದ ಆ ವ್ಯಾಪ್ತಿಯಲ್ಲೂ ಕುಟುಂಬ ಸದಸ್ಯರ ಆರೋಗ್ಯ ತಪಾಸಣೆ ನಡೆಯಿತು.
ಸೋಮವಾರಪೇಟೆ ಪಟ್ಟಣ, ಆರ್‍ಎಂಸಿ ಮಾರುಕಟ್ಟೆ, ಕರ್ಕಳ್ಳಿ ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೈಸ್ ಮಾಡಲಾಯಿತು. ಕರ್ಕಳ್ಳಿಯಲ್ಲಿ ನಡೆದ ತಪಾಸಣಾ ಕಾರ್ಯದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುನೀಲ್‍ಕುಮಾರ್, ಠಾಣಾಧಿಕಾರಿ ಶಿವಶಂಕರ್, ಕಂದಾಯ ಇಲಾಖಾಧಿಕಾರಿಗಳು, ಆರೋಗ್ಯ ಇಲಾಖಾಧಿಕಾರಿಗಳು ಪಾಲ್ಗೊಂಡಿದ್ದರು.
ಸೋಂಕಿತರ ಸ್ವಗ್ರಾಮಗಳಾದ ಶಿರಂಗಾಲ, ದೊಡ್ಡಳ್ಳಿ ಗ್ರಾಮಗಳನ್ನು ಕಂಟೈನ್‍ಮಂಟ್ ವಲಯಗಳಾಗಿ ಘೋಷಿಸಿ ಈ ಗ್ರಾಮಗಳನ್ನು ಸೀಲ್‍ಡೌನ್ ಮಾಡಲಾಗಿದೆ. ಅಲ್ಲಿನ ಗ್ರಾಮಸ್ಥರಿಗೆ ಅಗತ್ಯವಾದ ದಿನಸಿ, ತರಕಾರಿಗಳನ್ನು 28 ದಿನಗಳವರೆಗೆ ಜಿಲ್ಲಾಡಳಿತದಿಂದಲೇ ಒದಗಿಸಲಾಗುತ್ತದೆ.