ಸೋಮವಾರಪೇಟೆ,ಜೂ.23: ಗದ್ದೆಯಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ಸಂದರ್ಭ ನಾಗರಹಾವು ಕಚ್ಚಿ ಕೃಷಿಕ ಮಹಿಳೆಯೋರ್ವರು ಸಾವನ್ನಪ್ಪಿರುವ ಘಟನೆ ಪಟ್ಟಣ ಸಮೀಪದ ಹಾನಗಲ್ಲು ಗ್ರಾಮದಲ್ಲಿ ನಡೆದಿದೆ.

ಹಾನಗಲ್ಲು ಗ್ರಾಮದ ಅವಿವಾಹಿತೆ ಕೃಷಿಕ ಮಹಿಳೆ ಪಾರ್ವತಮ್ಮ (67) ಎಂಬವರೇ ಮೃತಪಟ್ಟವರಾಗಿದ್ದು, ಸಹೋದರಿ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ತಂಗಮ್ಮ ಸೇರಿದಂತೆ ಸಹೋದರನನ್ನು ಅಗಲಿದ್ದಾರೆ.

ಪಾರ್ವತಮ್ಮ ಅವರು ಸಹೋದರ ಕುಶಾಲಪ್ಪ ಅವರೊಂದಿಗೆ ಇಂದು ಬೆಳಿಗ್ಗೆ 6 ಗಂಟೆಗೆ ಗದ್ದೆಯಲ್ಲಿ ಉಳುಮೆ ಕಾರ್ಯ ಮಾಡಲು ತೆರಳಿದ್ದರು. ಉಳುಮೆಯ ಮಧ್ಯದಲ್ಲಿ ದನಗಳಿಗೆ ಹುಲ್ಲು ನೀಡಲು ಮುಂದಾದ ಸಂದರ್ಭ ಪಾರ್ವತಮ್ಮ ಅವರ ಕೈಗೆ ಹಾವು ಕಚ್ಚಿದೆ.

ಬೆಳಿಗ್ಗೆ 6.20ಕ್ಕೆ ಘಟನೆ ಸಂಭವಿಸಿದ್ದು, ತಕ್ಷಣ ಕೈಗೆ ಹಗ್ಗ ಕಟ್ಟಿ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಯಲ್ಲಿ ಆಕ್ಸಿಜನ್ ಸೇರಿದಂತೆ ಪ್ರಾಥಮಿಕ ಚಿಕಿತ್ಸೆ ನೀಡುತ್ತಿರುವಂತೆಯೇ ಪಾರ್ವತಮ್ಮ ಅವರ ಪ್ರಾಣ ಪಕ್ಷಿ ಹಾರಿದೆ. ಇಲ್ಲಿನ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಘಟನೆಯ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಲಿ ಪಡೆದ ಹಾವು ಸೆರೆ: ಕೃಷಿಕ ಮಹಿಳೆಯನ್ನು ಬಲಿ ಪಡೆದ ನಾಗರ ಹಾವನ್ನು ಸೋಮವಾರಪೇಟೆಯ ಸ್ನೇಕ್ ರಘು ಅವರು ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟರು.