ಸೋಮವಾರಪೇಟೆ,ಜೂ.23: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರವಾಸಿ ತಾಣವಾದ ಕೋಟೆಬೆಟ್ಟಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಆಗ್ರಹಿಸಿದ್ದಾರೆ.

ಕೋಟೆಬೆಟ್ಟಕ್ಕೆ ದಿನನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಿದ್ದು, ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಹೊರಭಾಗದಿಂದ ಪ್ರವಾಸಿಗರು ಬರುತ್ತಿರುವದರಿಂದ ಗ್ರಾಮಸ್ಥರಿಗೂ ಕೋವಿಡ್ ವೈರಸ್ ಹರಡುವ ಆತಂಕ ಎದುರಾಗಿದೆ. ಈ ಹಿನ್ನೆಲೆ ಕೋಟೆಬೆಟ್ಟಕ್ಕೆ ಪ್ರವಾಸಿಗರು ಬರದಂತೆ ತಾತ್ಕಾಲಿಕವಾಗಿ ತಡೆಹಿಡಿಯಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂಬಂಧಿತ ಗ್ರಾಮಸ್ಥರು ಸೂಚನಾ ಫಲಕವನ್ನು ಅಳವಡಿಸಿದ್ದು, ಇದನ್ನೂ ಮೀರಿ ಪ್ರವಾಸಿಗರು ಆಗಮಿಸಬಾರದು. ಈ ಬಗ್ಗೆ ಜಿಲ್ಲಾಡಳಿತದಿಂದಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಮನವಿ ಸಲ್ಲಿಕೆ ಸಂದರ್ಭ ಗರ್ವಾಲೆ ಗ್ರಾ.ಪಂ. ಅಧ್ಯಕ್ಷ ಕನ್ನಿಗಂಡ ಸುಭಾಷ್, ಗ್ರಾಮಾಧ್ಯಕ್ಷ ಡಿ.ಎನ್. ಪೊನ್ನಪ್ಪ, ಉಪಾಧ್ಯಕ್ಷ ಡಿ.ಕೆ. ಬೆಳ್ಯಪ್ಪ, ಕಾರ್ಯದರ್ಶಿ ಮಾಚಯ್ಯ, ದೇವಾಲಯ ತಕ್ಕರಾದ ಟಿ.ಎನ್. ಈರಪ್ಪ ಇದ್ದರು.