ಪಾಕ್ ಅಪ್ರಚೋದಿತ ದಾಳಿ
ಶ್ರೀನಗರ, ಜೂ. 23: ಜಮ್ಮು-ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಮಾಚಲ್ ಸೆಕ್ಟರ್‍ನಲ್ಲಿ ಕದನ ವಿರಾಮ ಉಲ್ಲಂಘಿಸಿರುವ ಪಾಕಿಸ್ತಾನ ಎಲ್‍ಒಸಿ ಉದ್ದಕ್ಕೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಪಾಕಿಸ್ತಾನವುದ ಶೆಲ್ ದಾಳಿ ನಡೆಸಿದೆ. ಪಾಕ್ ಅಪ್ರಚೋದಿತ ದಾಳಿಗೆ ಭಾರತೀಯ ಸೇನೆಯು ಸೂಕ್ತವಾಗಿ ಉತ್ತರಿಸುತ್ತಿದೆ ಎಂದು ಮೂಲಗಳು ಹೇಳಿದೆ. ಕಳೆದ ಒಂದು ತಿಂಗಳಲ್ಲಿ ಪಾಕಿಸ್ತಾನವು ಜಮ್ಮು-ಕಾಶ್ಮೀರ ನಿಯಂತ್ರಣ ರೇಖೆಯಲ್ಲಿ ಪದೇ ಪದೇ ದ್ವಿಪಕ್ಷೀಯ ಕದನ ವಿರಾಮ ಉಲ್ಲಂಘಿಸುತ್ತಿದೆ. ಇದರಿಂದ ಗಡಿಯಲ್ಲಿ ವಾಸವಿರುವ ಅನೇಕರಿಗೆ ಜೀವನಕ್ಕೆ ತೊಂದರೆಯಾಗಿದೆ.
ಸೇನೆ ಹಿಂಪಡೆಯಲು ನಿರ್ಧಾರ
ನವದೆಹಲಿ, ಜೂ. 23: ಗಲ್ವಾನ್ ಕಣಿವೆ ಸಂಘರ್ಷದ ಬಳಿಕ ಲಡಾಖ್ ಗಡಿಯಲ್ಲಿ ಉಂಟಾಗಿದ್ದ ಗಂಭೀರ ಪರಿಸ್ಥಿತಿಯನ್ನು ತಿಳಿಗೊಳಿಸುವ ಭಾರತ ಮತ್ತು ಚೀನಾ ಸೇನಾ ಮುಖ್ಯಸ್ಥರ ಪ್ರಯತ್ನಕ್ಕೆ ಮಹತ್ವದ ಜಯ ಲಭಿಸಿದ್ದು, ಎರಡೂ ಸೇನಾ ಮುಖ್ಯಸ್ಥರು ತಮ್ಮ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧರಿಸಿದ್ದಾರೆ. ಲಡಾಖ್‍ನ ಪೂರ್ವ ಭಾಗದ ನಾಲ್ಕು ಪ್ರದೇಶಗಳಲ್ಲಿ ಬೀಡು ಬಿಟ್ಟಿರುವ ಚೀನಾ ಮತ್ತು ಭಾರತದ ಸೈನಿಕರು ಕೂಡಲೇ ಬಿಕ್ಕಟ್ಟಿನ ಪ್ರದೇಶವನ್ನು ಬಿಟ್ಟು ಹಿಂದಕ್ಕೆ ಸರಿಯುವ ಕುರಿತು ಮಹತ್ವದ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಂಬಂಧ ಸತತ ಒಂದು ವಾರದಿಂದ ನಡೆಯುತ್ತಿರುವ ಸೇನಾ ಮುಖ್ಯಸ್ಥರ ಸಭೆಯಲ್ಲಿ ಇಂದು ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ವಿರೋಧ
ಬೆಂಗಳೂರು, ಜೂ. 23: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಿಯೇ ಸಿದ್ಧ ಎಂಬ ಹಠಕ್ಕೆ ಬಿದ್ದಿರುವುದು ಶಿಕ್ಷಣ ತಜ್ಞರು, ಪೋಷಕರ ಆತಂಕ, ಆಕ್ರೋಶಕ್ಕೆ ಕಾರಣವಾಗಿದೆ. ರಾಜಧಾನಿ ಬೆಂಗಳೂರು ನಗರದಲ್ಲಿ ಸೋಂಕು ಸಮುದಾಯಕ್ಕೆ ಹರಡಿದೆ ಎಂದು ಹಿರಿಯ ವೈದ್ಯರು ಬಹಿರಂಗ ಹೇಳಿಕೆ ನೀಡಿದ್ದಾರೆ. ಇತರ ಜಿಲ್ಲೆಗಳಲ್ಲಿ ಕೂಡ ಕೋವಿಡ್ -19 ಪ್ರಕರಣಗಳು ಏರಿಕೆಯಾಗುತ್ತಿದೆ. ಈ ಹಿನ್ನೆಲೆ ತಾ. 25 ರಿಂದ ನಿಗದಿಯಾಗಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ಪೋಷಕರು ಒತ್ತಾಯಿಸುತ್ತಿದ್ದಾರೆ. ಕೊರೊನಾ ಸಾಂಕ್ರಾಮಿಕ ಮತ್ತು ಪರೀಕ್ಷೆ ನಡೆಸಿಯೇ ಸಿದ್ಧ ಎಂಬ ಸರ್ಕಾರದ ಹಠದಿಂದ 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಆರೋಗ್ಯ ಆತಂಕಕ್ಕೆ ಸಿಲುಕಿದೆ.
ಮತ್ತೆ ಲಾಕ್‍ಡೌನ್ ಬಗ್ಗೆ ಚಿಂತನೆ
ಬೆಂಗಳೂರು, ಜೂ. 23: ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಬಗ್ಗೆ ಸರ್ಕಾರ ಚಿಂತನೆ ನಡೆಸಿರುವ ಸೂಚನೆಯನ್ನು ಆರೋಗ್ಯ ಸಚಿವ ಬಿ. ಶ್ರೀರಾಮುಲು ನೀಡಿದ್ದಾರೆ. ನಗರದಲ್ಲಿಂದು ಕೆ.ಸಿ. ಜನರಲ್ ಆಸ್ಪತ್ರೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ಈಗಾಗಲೇ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿವೆ. ಈ ಸಂಬಂಧ ಆರೋಗ್ಯ ಇಲಾಖೆ ಅಧಿಕಾರಿಗಳು ವೈದ್ಯರು ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಇನ್ನೊಮ್ಮೆ ಲಾಕ್‍ಡೌನ್ ಮಾಡುವ ಬಗ್ಗೆಯೂ ಚರ್ಚೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಪ್ರತಿ ಜಿಲ್ಲೆಗೂ ಲ್ಯಾಬ್ ಸ್ಥಾಪಿಸುವ ಬಗ್ಗೆ ನಿರ್ಧಾರ ಮಾಡಲಾಗಿದೆ. ಬೆಂಗಳೂರಿನಲ್ಲಿ ಕೋವಿಡ್ ರೋಗಿಗಳಿಗಾಗಿ 1330 ಹಾಸಿಗೆಯ ಸೌಲಭ್ಯವಿದೆ. ಹಿರಿಯ ನಾಗರೀಕರಿಗೆ ಹೆಚ್ಚಿನ ಪರೀಕ್ಷೆ ಮಾಡಲಾಗುವುದು. ಕೊರೊನಾ ಪರೀಕ್ಷಾ ಸಂಖ್ಯೆಗಳು ಹೆಚ್ಚಾಗುತ್ತಿರುವುದರಿಂದ ಲ್ಯಾಬ್‍ಗಳ ಸಂಖ್ಯೆಯನ್ನೂ ಸಹ ಹೆಚ್ಚಿಸಬೇಕಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗಾಗಿ ದರ ನಿಗದಿಪಡಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಮೊದಲ ಆದ್ಯತೆ. ರೋಗಿಗಳು ಇಂತಹ ಖಾಸಗಿ ಆಸ್ಪತ್ರೆಗೆ ಹೋಗಬೇಕು. ಆದ್ಯತೆ ನೀಡಿ ಎಂದು ಮನವಿ ಮಾಡಿದರೆ ಮಾತ್ರ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ಶಿಫಾರಸು ಮಾಡಲಾಗುವುದು. “ಎ” ಲಕ್ಷಣ ಇರುವ ಪ್ರಕರಣಗಳೇ ಹೆಚ್ಚಾಗಿದ್ದು, ಇವರನ್ನು ಕೋವಿಡ್ ಕೇರ್ ಸೆಂಟರ್‍ಗೆ ಕಳುಹಿಸಲಾಗುವುದು.
ಕೊರೊನಾಗೆ ಪತಂಜಲಿ ಔಷಧಿ ಸಿದ್ಧ
ನವದೆಹಲಿ, ಜೂ. 23: ದೇಶಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೊನಾ ವೈರಸ್‍ಗೆ ಯೋಗ ಗುರು ಬಾಬಾ ರಾಮ್ ದೇವ್ ನೇತೃತ್ವದ ಪತಂಜಲಿ ಯೋಗ ಪೀಠ ಇಂದು ಔಷಧಿ ಬಿಡುಗಡೆ ಮಾಡಿದೆ. ಕೊರೊನಾ ವೈರಸ್ ಚಿಕಿತ್ಸೆಗೆ ಇಂದು ಬಾಬಾ ರಾಮದೇವ್ ಅವರ ಪತಂಜಲಿ ಯೋಗಪೀಠ ಇಂದು ಔಷಧಿ ಬಿಡುಗಡೆಗೊಳಿಸಿದೆ. ಪತಂಜಲಿ ಬಿಡುಗಡೆಗೊಳಸಿರುವ ಔಷಧಿಗೆ ಕೊರೊನಿಲ್ ಎಂಬ ಹೆಸರು ನೀಡಲಾಗಿದ್ದು, ಕೊರೊನಾ ವೈರಸ್ ಚಿಕಿತ್ಸೆಗೆ ಇದು ಪ್ರಭಾವಶಾಲಿಯಾಗಿದೆ ಎಂದು ಸಂಸ್ಥೆ ಹೇಳಿದೆ. ಈ ಕುರಿತಂತೆ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯೋಗ ಗುರು ಬಾಬಾ ರಾಮ್ ದೇವ್ ಅವರು, ಪತಂಜಲಿ ರಿಸರ್ಚ್ ಇನ್ಸ್ಟಿಟ್ಯೂಟ್ ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಜೈಪುರ್ ಸಂಶೋಧಕರು ಜಂಟಿಯಾಗಿ ಈ ಔಷಧಿಯನ್ನು ಸಿದ್ಧಪಡಿಸಿದ್ದಾರೆ. ಔಷಧಿಯನ್ನು ತಯಾರಿಸುವ ಕೆಲಸ ಪತಂಜಲಿ ಹಾಗೂ ದಿವ್ಯ ಫಾರ್ಮಸಿ ಜಂಟಿಯಾಗಿ ನಡೆಸಲಿವೆ ಎಂದು ಹೇಳಿದರು. ಕೋವಿಡ್-19 ರೋಗದ ವಿರುದ್ಧ ಹೋರಾಡಲು ಮೊದಲ ಭಾರಿಗೆ ಆಯುರ್ವೇದದಲ್ಲಿ ಔಷಧಿ ಕಂಡುಹಿಡಿದಿದ್ದೇವೆ. ಈ ಔಷಧಿಗಳನ್ನು ಈಗಾಗಲೇ ಕ್ಲಿನಿಕಲ್ ಟ್ರಯಲ್ ಮಾಡಲಾಗಿದ್ದು, ಈ ವೇಳೆ ಚಿಕಿತ್ಸೆ ನಡೆಸಿದ ಒಟ್ಟಾರೆ ಸೋಂಕಿತರ ಪೈಕಿ ಶೇ. 69 ಮಂದಿ ಸೋಂಕಿತರು ಮೂರೇ ದಿನದಲ್ಲಿ ಗುಣಮುಖರಾಗಿದ್ದು, 7 ದಿನದಲ್ಲಿ ಶೇ. 100 ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ. ಈ ಔಷಧಿ ಕೊರೊನಾ ವೈರಸ್ ಸಾವಿನ ಪ್ರಮಾಣವನ್ನು ಶೂನ್ಯಗೊಳಿಸಲಿದೆ ಎಂದು ಬಾಬಾ ರಾಮ್ ದೇವ್ ಹೇಳಿದ್ದಾರೆ.