ಸೋಮವಾರಪೇಟೆ, ಜೂ. 22: ಕೇಂದ್ರ ಸರ್ಕಾರದ ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡುತ್ತಿದೆ ಎಂದು ಆರೋಪಿಸಿ ಸೋಮವಾರಪೇಟೆ ಯಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು.ಕಚ್ಚಾ ತೈಲ ಬೆಲೆ ಇಳಿಕೆಯಿದ್ದರೂ ಕಳೆದ 12 ದಿನಗಳಿಂದ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗುತ್ತಿರುವದು ಕೇಂದ್ರ ಸರ್ಕಾರದ ಆಡಳಿತ ನೀತಿಗೆ ಕಾರಣವಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿ, ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ಮಾಡಿದರು.ನೋಟ್ ಬ್ಯಾನ್, ಕೋವಿಡ್-19 ವೈರಸ್ ಹಿನ್ನೆಲೆ ಲಾಕ್‍ಡೌನ್ ನಿಂದ ದೇಶದ ಜನಸಾಮಾನ್ಯರು ಉದ್ಯೋಗವಿಲ್ಲದೆ ತೀವ್ರ ಸಂಕಷ್ಟದಲ್ಲಿ ದ್ದಾರೆ. ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾತೈಲ ಬೆಲೆ ಒಂದು ಬ್ಯಾರೆಲ್‍ಗೆ 35ರಿಂದ40 ಡಾಲರ್‍ಗೆ ಇಳಿದಿದೆ. ಆದರೂ ಡಿಸೇಲ್ 72 ರೂ. ಹಾಗೂ (ಮೊದಲ ಪುಟದಿಂದ) ಪೆಟ್ರೋಲ್ 83 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರ ಜನವಿರೋಧಿ ನೀತಿಗಳನ್ನು ಹೇರುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್ ಆರೋಪಿಸಿದರು. ಕೂಡಲೇ ಇಂಧನ ಬೆಲೆಗಳನ್ನು ಇಳಿಕೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯ ನಂತರ ಮನವಿ ಪತ್ರವನ್ನು ಶಿರಸ್ತೇದಾರ್ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಲಾಯಿತು. ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಹಿಂದಿನ ಸರ್ಕಾರ ಅನುಮತಿ ನೀಡಿದ್ದು, ಕಟ್ಟಡ ಕಾಮಗಾರಿಯೂ ಪ್ರಾರಂಭವಾಗಿತ್ತು. ಆದರೆ ಈಗ ಕ್ಯಾಂಟೀನ್ ಪ್ರಾರಂಭಕ್ಕೆ ಪಟ್ಟಣ ಪಂಚಾಯಿತಿ ಮುಂದಾಗುತ್ತಿಲ್ಲ. ಕೂಡಲೇ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಬೇಕೆಂದು ಪ್ರತಿಭಟನಾ ಕಾರರು ಒತ್ತಾಯಿಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಕೊರೊನಾ ಹಿನ್ನೆಲೆಯಲ್ಲಿ ಪೊಲೀಸರ ಮನವಿ ಮೇರೆಗೆ ಪ್ರತಿಭಟನೆಯನ್ನು ಕೆಲ ಸಮಯದಲ್ಲಿ ಅಂತ್ಯಗೊಳಿಸಲಾಯಿತು.

ಪ್ರತಿಭಟನೆಗೂ ಮೊದಲು ಕಾಂಗ್ರೆಸ್ ಕಚೇರಿಯಲ್ಲಿ, ಗಡಿಯಲ್ಲಿ ಹುತಾತ್ಮರಾದ ಭಾರತೀಯ ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಚೀನಾ ವಸ್ತುಗಳನ್ನು ಕೊಳ್ಳಬಾರದೆಂದು ಕಾರ್ಯಕರ್ತರಿಗೆ ಕರೆ ನೀಡಲಾಯಿತು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಚಂಗಪ್ಪ, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಶೀಲಾ ಡಿಸೋಜ, ಮಡಿಕೇರಿ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಹಾನಗಲ್, ಬ್ಲಾಕ್ ಮಾಜಿ ಅಧ್ಯಕ್ಷ ಕೆ.ಎಂ.ಲೋಕೇಶ್, ಜಿಲ್ಲಾ ವಕ್ತಾರ ಟಿ.ಈ. ಸುರೇಶ್, ಎಸ್.ಸಿ. ಘಟಕದ ರಾಜ್ಯ ಸಂಚಾಲಕ ಬಿ.ಇ. ಜಯೇಂದ್ರ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಎನ್.ಎಸ್.ಯು.ಐ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಪಂಡ ಬಿಪಿನ್, ಬ್ಲಾಕ್ ಕಾರ್ಯದರ್ಶಿ ಸುನಿಲ್, ಹಿರಿಯ ಮುಖಂಡರಾದ ಎಚ್.ಸಿ. ನಾಗೇಶ್, ಎಚ್.ಎ. ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.