ಸೋಮವಾರಪೇಟೆ, ಜೂ. 21: ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಸಾಮಾಜಿಕ ಅಂತರ ಹಾಗೂ ಶುಚಿತ್ವ ಕಾಪಾಡಿಕೊಳ್ಳುವಂತೆ ಸಮರೋಪಾದಿ ಜಾಗೃತಿ ಮೂಡಿಸುವ ಕಾರ್ಯಗಳು ನಡೆಯುತ್ತಿರುವ ಮಧ್ಯೆಯೇ ಸೋಮವಾರಪೇಟೆಯ ಬಹುತೇಕ ಅಂಗಡಿಗಳಲ್ಲಿ ಶುಚಿತ್ವ ಮರೆಯಾಗಿದೆ.

ಪಟ್ಟಣದ ಬಹುತೇಕ ಅಂಗಡಿಗಳಲ್ಲಿ ಸ್ಯಾನಿಟೈಸರ್ ಇಲ್ಲದೇ ವ್ಯಾಪಾರ ನಿರಾತಂಕವಾಗಿ ನಡೆಯುತ್ತಿದೆ. ಬಹುತೇಕ ತರಕಾರಿ ಅಂಗಡಿ, ಹೊಟೇಲ್, ಬಟ್ಟೆ ಮಾರಾಟ ಮಳಿಗೆಗಳಲ್ಲಿ ಸಾಮಾಜಿಕ ಅಂತರವೂ ಇಲ್ಲದಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ.

ಇಲ್ಲಿನ ಪೊಲೀಸ್ ಠಾಣಾ ಸಿಬ್ಬಂದಿಯೋರ್ವರು ಬಟ್ಟೆ ಅಂಗಡಿಗೆ ತೆರಳಿ ಸ್ಯಾನಿಟೈಸರ್ ಇಲ್ಲದನ್ನು ಗಮನಿಸಿ, ಅಂಗಡಿ ಮಾಲೀಕರಿಗೆ ತಿಳುವಳಿಕೆ ನೀಡಿದ ನಂತರ ಸ್ಯಾನಿಟೈಸರ್ ವ್ಯವಸ್ಥೆಗೊಳಿಸಿದ್ದು, ಪ್ರತಿಯೊಂದು ಅಂಗಡಿಗಳಲ್ಲೂ ಇಂತಹ ವ್ಯವಸ್ಥೆಯಾಗಬೇಕು ಎಂದು ಅಭಿಪ್ರಾಯಿಸಿದ್ದಾರೆ.

ಇನ್ನು ಸೋಮವಾರಪೇಟೆ ಪಟ್ಟಣದಲ್ಲಿ ನಡೆಯುವ ಸಂತೆಯಲ್ಲಿಯೂ ಸಾಮಾಜಿಕ ಅಂತರ ಕಣ್ಮರೆಯಾಗಿದ್ದು, ಕೊರೊನಾ ಬಗ್ಗೆ ಆತಂಕವಿಲ್ಲದಂತೆ ಸಾರ್ವಜನಿಕರು ನಡೆದುಕೊಳ್ಳುತ್ತಿದ್ದಾರೆ. ಪೊಲೀಸರನ್ನು ಕಂಡರೆ ಮಾತ್ರ ಮಾಸ್ಕ್ ಧರಿಸುವದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವದು ಕಂಡುಬರುತ್ತಿದ್ದು, ನಂತರ ಯಥಾಸ್ಥಿತಿ ಮುಂದುವರೆಯುತ್ತಿದೆ. ಹೀಗಾದಲ್ಲಿ ಕೊರೊನಾ ವಿರುದ್ಧ ಹೋರಾಡುವದು ಹೇಗೆ? ಎಂದು ಕೊರೊನಾ ವಾರಿಯರ್ಸ್ ತಂಡದ ಪೊಲೀಸ್ ಸಿಬ್ಬಂದಿ ಪ್ರಶ್ನಿಸಿದ್ದು, ಪ್ರತಿಯೋರ್ವರೂ ಜಾಗೃತರಾಗಿರಬೇಕೆಂದು ಮನವಿ ಮಾಡಿದ್ದಾರೆ.