ಮಡಿಕೇರಿ, ಜೂ. 21: ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಮಾಸ್ಕ್ ಧರಿಸದವರಿಗೆ ದಂಡವನ್ನೂ ಕೂಡ ವಿಧಿಸಲಾಗುತ್ತಿದೆ. ಆದರೆ ಇಲ್ಲೊಬ್ಬರು ಮಾಸ್ಕ್ ಧರಿಸದೇ ಕೆ.ಎಸ್.ಆರ್.ಟಿ.ಸಿ. ಬಸ್ ಹತ್ತಿದ್ದು, ಪಾಠ ಕಲಿಯಲಿ ಎಂಬ ಉದ್ದೇಶದಿಂದ ಅವರನ್ನು ನಡುರಸ್ತೆಯಲ್ಲಿ ಇಳಿಸಿರುವುದಾಗಿ ವರದಿಯಾಗಿದೆ. ನಿನ್ನೆ ದಿನ ಬೆಳಗ್ಗೆ ಸುಂಟಿಕೊಪ್ಪದಿಂದ ವ್ಯಕ್ತಿಯೊಬ್ಬರು ಮಡಿಕೇರಿ ಕಡೆಗೆ ಹೋಗುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ಸನ್ನೇರಿದ್ದಾರೆ. ಆದರೆ ಅವರು ಮಾಸ್ಕ್ ಧರಿಸದಿರುವುದನ್ನು ಕಂಡ ಕಂಡಕ್ಟರ್ ಟಿಕೆಟ್ ನೀಡಲು ನಿರಾಕರಿಸಿ ಬಸ್‍ನಿಂದ ಇಳಿಯುವಂತೆ ತಾಕೀತು ಮಾಡಿದ್ದಾರೆ. ಕಂಡಕ್ಟರ್‍ಗೆ ಸಹ ಪ್ರಯಾಣಿಕರು ಸಾಥ್ ನೀಡಿದ್ದಾರೆ. ಏನೇನೋ ಸಬೂಬು ನೀಡಲು ಮುಂದಾದ ಮಾಸ್ಕ್ ಧರಿಸದ ಪ್ರಯಾಣಿಕನ ಮಾತನ್ನು ಒಪ್ಪದ ಕಂಡಕ್ಟರ್ ಮತ್ತು ಡ್ರೈವರ್ ಮಾರ್ಗ ಮಧ್ಯದ ಕೆ.ಇ.ಬಿ. ಬಳಿ ಇಳಿಸಿದ್ದಾರೆ. ಅಲ್ಲದೇ ಇನ್ನು ಮುಂದಕ್ಕೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಿಳಿಹೇಳಿದ್ದಾರೆ. ಮಾಸ್ಕ್ ಇಲ್ಲದ ಕಾರಣ ತನ್ನ ಪ್ರಯಾಣ ಅರ್ಧಕ್ಕೆ ಮೊಟಕುಗೊಂಡಿದ್ದರಿಂದ ಈ ಪ್ರಯಾಣಿಕ ಕೊರೊನಾ ವೈರಸನ್ನು ಶಪಿಸಿಕೊಂಡು ಮುಂದಿನ ಪ್ರಯಾಣಕ್ಕೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕಾಯಿತು.

-ಕ್ಯೂಟ್ ಕೂರ್ಗ್ ನ್ಯೂಸ್