ಸೋಮವಾರಪೇಟೆ, ಜೂ. 22: ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಶಕಗಳು ಕಳೆದರೂ ವಿದ್ಯುತ್ ಸಮಸ್ಯೆ ಬಗೆಹರಿಯುತ್ತಿಲ್ಲ. ತೋಟ-ಅರಣ್ಯದ ನಡುವೆ ಕಂಬಗಳ ಮೂಲಕ ವಿದ್ಯುತ್ ತಂತಿ ಅಳವಡಿಸಿದ್ದು, ಮಳೆಗಾಲದಲ್ಲಿ ಕತ್ತಲೆಯ ಬದುಕು ತಪ್ಪುತ್ತಿಲ್ಲ.ಕತ್ತಲ ಬದುಕಿನಿಂದ ಮುಕ್ತಿ ನೀಡುವಂತೆ ಸ್ಥಳೀಯ ಶಾಸಕರಿಂದ ಹಿಡಿದು ಎಂಎಲ್‍ಸಿ, ಸಂಸದರು ಮಾತ್ರವಲ್ಲ; ಪ್ರಧಾನಿ ಕಚೇರಿಗೆ ಪತ್ರ ಬರೆದರೂ ಸಮಸ್ಯೆ ಇಂದಿಗೂ ಜೀವಂತವಾಗಿದೆ. ಪ್ರತಿ ಮಳೆಗಾಲ ಬಂತೆಂದರೆ ತೋಳೂರು ಶೆಟ್ಟಳ್ಳಿಯಲ್ಲಿ ಕತ್ತಲೆಯ ಸಾಮ್ರಾಜ್ಯ ನಿರ್ಮಾಣವಾಗುತ್ತದೆ. ಸಾಧಾರಣದ ಗಾಳಿ ಮಳೆಗೆ ಮರದ ಕೊಂಬೆಗಳು ವಿದ್ಯುತ್ ತಂತಿಯ ಮೇಲೆ ಬಿದ್ದರೆ ವಾರಗಟ್ಟಲೆ ದುರಸ್ತಿಗಾಗಿ ಕಾಯಬೇಕು.ಕಾಫಿ ತೋಟ, ಅರಣ್ಯದ ನಡುವೆ ವಿದ್ಯುತ್ ಮಾರ್ಗ ಇರುವದರಿಂದ ಯಾವ ಸ್ಥಳದಲ್ಲಿ ಸಮಸ್ಯೆಯಾಗಿದೆ ಎಂದು ಹುಡುಕುವದೇ ಹರಸಾಹಸ. ಅಂತಹ ಸಂದರ್ಭದಲ್ಲಿ ಸ್ಥಳೀಯರೇ ಅರಣ್ಯದಲ್ಲಿ ಸುತ್ತಾಡಿ ಸಮಸ್ಯೆಯ ಮೂಲ ಹುಡುಕಬೇಕು.

(ಮೊದಲ ಪುಟದಿಂದ) ಆ ನಂತರ ವಿದ್ಯುತ್ ಇಲಾಖೆಯ ಲೈನ್‍ಮೆನ್‍ಗಳಿಗೆ ದುಂಬಾಲು ಬಿದ್ದು ಸರಿಪಡಿಸಿಕೊಳ್ಳಬೇಕು.

ಇನ್ನು ಕಂಬಗಳು ಮುರಿದರೆ ತಿಂಗಳ ಕಾಲ ವಿದ್ಯುತ್ ಇಲ್ಲದೇ ಜೀವನ ಸಾಗಿಸಬೇಕು. ಅರಣ್ಯದ ನಡುವೆ ಕಂಬಗಳನ್ನು ಎಳೆದೊಯ್ಯುವದೇ ಸಾಹಸವಾಗಿದ್ದು, ಸ್ಥಳೀಯರೇ ಕೆಲಸ ಕಾರ್ಯ ಬಿಟ್ಟು ಇಲಾಖೆಯ ಸಿಬ್ಬಂದಿಗಳೊಂದಿಗೆ ಕಂಬಗಳನ್ನು ಎಳೆಯಬೇಕು.

ಪ್ರಸ್ತುತ ಶಾಂತಳ್ಳಿಯ ಜೇಡಿಗುಂಡಿ ಬಳಿಯಿಂದ ಅರಣ್ಯ ಪ್ರದೇಶದೊಳಗೆ ಹಾದು ಹೋಗಿ ಕಂಬಳ್ಳಿ ಮೂಲಕ ತೋಳೂರುಶೆಟ್ಟಳ್ಳಿಗೆ ವಿದ್ಯುತ್ ಸರಬರಾಜಾಗುತ್ತಿದೆ. ಈ ವಿದ್ಯುತ್ ಲೈನ್ ಹಾದುಹೋಗಿರುವ ಕಡೆಗಳಲ್ಲಿ ಸಾವಿರಾರು ಗಿಡಮರಗಳಿದ್ದು, ಪ್ರತಿ ವರ್ಷದ ಮಳೆಗಾಲದಲ್ಲಿ ಸಮಸ್ಯೆ ಸೃಷ್ಟಿಯಾಗುತ್ತಲೇ ಇದೆ.

ಪ್ರತಿ ವರ್ಷ ಕತ್ತಲೆಯಲ್ಲಿಯೇ ಮಳೆಗಾಲ ಕಳೆಯುತ್ತಿರುವ ತೊಳೂರುಶೆಟ್ಟಳ್ಳಿಯ ನಿವಾಸಿಗಳು, ಈ ವಿದ್ಯುತ್ ಮಾರ್ಗವನ್ನು ರಾಜ್ಯ ಹೆದ್ದಾರಿಯ ಬದಿಗಾಗಿ ಹೊಸಬೀಡು ಗ್ರಾಮದ ಮೂಲಕ ತೋಳೂರುಶೆಟ್ಟಳ್ಳಿಗೆ ಸ್ಥಳಾಂತರಿಸುವಂತೆ ಅನೇಕ ಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನ ಶೂನ್ಯವಾಗಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1100 ಕುಟುಂಬಗಳಿದ್ದು, ಬಹುತೇಕ ರೈತಾಪಿ ವರ್ಗವೇ ಆಗಿದೆ. ಇವರೊಂದಿಗೆ ಕೂಲಿ ಕಾರ್ಮಿಕರೂ ಅಧಿಕ ಸಂಖ್ಯೆಯಲ್ಲಿದ್ದಾರೆ. ಸಕಲೇಶಪುರ ಗಡಿಯನ್ನು ಹೊಂದಿರುವ ತೋಳೂರುಶೆಟ್ಟಳ್ಳಿ ಗ್ರಾಮ ಸೋಮವಾರಪೇಟೆ ಪಟ್ಟಣದಿಂದ ಕೇವಲ 9 ಕಿ.ಮೀ. ದೂರದಲ್ಲಿದೆ.

ಮಳೆಗಾಲದಲ್ಲಿ ವಿದ್ಯುತ್ ಕಂಬಗಳು, ತಂತಿಗಳು ಮುರಿದು ಬಿದ್ದರೆ ತಿಂಗಳುಗಳ ಕಾಲ ವಿದ್ಯುತ್ ಸ್ಥಗಿತಗೊಳ್ಳುತ್ತಿದ್ದು, ಈ ಸಂದರ್ಭ ಸಾರ್ವಜನಿಕರ ವ್ಯವಹಾರಗಳಿಗೂ ಕತ್ತರಿ ಬೀಳುತ್ತವೆ. ಮೊಬೈಲ್ ಚಾರ್ಜ್ ಮಾಡಿಕೊಳ್ಳಲೂ ಸಹ ಪಟ್ಟಣಕ್ಕೆ ಬರಬೇಕಾದ ದುಸ್ಥಿತಿ ಎದುರಾಗುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಭಾಗದಲ್ಲಿ ಬಿಎಸ್‍ಎನ್‍ಎಲ್‍ನ ಏಕೈಕ ಮೊಬೈಲ್ ಟವರ್ ಇದ್ದು, ವಿದ್ಯುತ್ ಸ್ಥಗಿತಗೊಂಡರೆ ಮೊಬೈಲ್ ನೆಟ್‍ವರ್ಕ್ ಇಲ್ಲವಾಗುತ್ತದೆ. ಇದರೊಂದಿಗೆ ಗ್ರಾ.ಪಂ. ಕಚೇರಿ, ಬ್ಯಾಂಕ್, ಆಸ್ಪತ್ರೆ ಸೇರಿದಂತೆ ಇನ್ನಿತರ ಕಚೇರಿ ಕೆಲಸಗಳೂ ಸ್ಥಗಿತಗೊಳ್ಳುತ್ತವೆ.

ಕಳೆದ 2 ದಶಕದಿಂದಲೂ ವಿದ್ಯುತ್ ಸಮಸ್ಯೆ ನಿವಾರಿಸುವಂತೆ ಇಲಾಖೆಗೆ ಮನವಿ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಪ್ರಧಾನ ಮಂತ್ರಿಗಳ ಕಚೇರಿಗೂ ಪತ್ರ ಬರೆಯಲಾಗಿದ್ದು, ಸುಮಾರು 300 ಪೋಸ್ಟ್ ಕಾರ್ಡ್‍ಗಳನ್ನು ಸಂಬಂಧಪಟ್ಟವರಿಗೆ ಕಳುಹಿಸಲಾಗಿದೆ.

ಇದರಲ್ಲಿ ಎಂಎಲ್‍ಸಿ ಸುನಿಲ್ ಸುಬ್ರಮಣಿ ಅವರು ಚೆಸ್ಕಾಂನ ಕಾರ್ಯಪಾಲಕ ಅಭಿಯಂತರರಿಗೆ ಕಳೆದ ತಾ. 03.06.2016ರಂದು ಪತ್ರ ಬರೆದು ವಿದ್ಯುತ್ ಮಾರ್ಗದ ಬಗ್ಗೆ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು. ಆದರೆ ಈ ಸೂಚನೆಯನ್ನು ಅಭಿಯಂತರರು ಗಂಭೀರವಾಗಿ ಪಾಲಿಸಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕುತ್ತಿದ್ದಾರೆ. ಇದರೊಂದಿಗೆ ಗ್ರಾಮ ಪಂಚಾಯಿತಿ ಸದಸ್ಯ ಎ.ಆರ್. ರಜಿತ್ ಅವರು, ಪ್ರಧಾನಿ ಕಾರ್ಯಾಲಯದ ಇ-ಸ್ಪಂದನದಲ್ಲಿ ಈ ಬಗ್ಗೆ ದೂರು ನೀಡಿದ ಹಿನ್ನೆಲೆ, ಕ್ರಮ ಕೈಗೊಳ್ಳುವಂತೆ ಸೋಮವಾರಪೇಟೆ ಚೆಸ್ಕಾಂಗೆ ಸೂಚನೆ ಬಂದಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಈಗಿರುವ ವಿದ್ಯುತ್ ಲೈನ್‍ನ್ನು ಹೆದ್ದಾರಿ ಬದಿಗೆ ಸ್ಥಳಾಂತರಿಸಿದರೂ ಮರಗಳು ಬೀಳುವ ಸಾಧ್ಯತೆ ಇರುತ್ತದೆ. ಆದಾಗ್ಯೂ ಈಗಿರುವ ಲೈನ್‍ನ್ನು ಸ್ಥಳಾಂತರಿಸಲು ರೂ. 28 ಲಕ್ಷ ವೆಚ್ಚದ ಅಂದಾಜುಪಟ್ಟಿಯನ್ನು ತಯಾರಿಸಿ ಮೇಲಧಿಕಾರಿಗಳಿಗೆ ಸಲ್ಲಿಸಲಾಗಿತ್ತು. ಆದರೆ ಅನುದಾನದ ಕೊರತೆಯಿಂದ ಅಂದಾಜು ಪಟ್ಟಿ ವಾಪಸ್ ಬಂದಿದೆ. ಇದೀಗ ನೂತನವಾಗಿ ಅಂದಾಜು ಪಟ್ಟಿ ತಯಾರಿಸಿ, ಅನುದಾನ ಲಭ್ಯವಾದರೆ ಕಾಮಗಾರಿ ಕೈಗೊಳ್ಳಲಾಗುವದು ಎಂದು ಭರವಸೆ ನೀಡಿದ್ದಾರೆ.

ಒಟ್ಟಾರೆ ಗ್ರಾಮಸ್ಥರ ದಶಕಗಳ ಬೇಡಿಕೆ ಸದ್ಯಕ್ಕೆ ಈಡೇರುವಂತೆ ಕಾಣುತ್ತಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈವರೆಗೆ ಭರವಸೆಯ ಸೌಧವನ್ನು ಕಟ್ಟಿದ್ದಾರೆಯೇ ಹೊರತು ಇಚ್ಛಾಶಕ್ತಿಯಿಂದ ಈ ಬಗ್ಗೆ ಕಾರ್ಯೋನ್ಮುಖವಾಗಿಲ್ಲ. ಉಗ್ರ ಪ್ರತಿಭಟನೆ ನಡೆಯದ ಹೊರತು ನ್ಯಾಯ ಲಭಿಸಲು ಸಾಧ್ಯವಿಲ್ಲ. ಈ ಬಗ್ಗೆ ಗ್ರಾಮಸ್ಥರೆಲ್ಲರೂ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವದು ಎಂದು ಸ್ಥಳೀಯ ಮುಖಂಡರು ತಿಳಿಸಿದ್ದಾರೆ.

- ವಿಜಯ್ ಹಾನಗಲ್