‘ನನ್ನ ತಂದೆ ಮತ್ತು ತಾಯಿ ಸೇರಿದಂತೆ ನನ್ನ ಜನ್ಮಭೂಮಿ ಕೊಡಗಿನ ಮಣ್ಣಿನೊಂದಿಗೆ ನನಗೆ ಅವಿನಾಭಾವ ಸಂಬಂಧವಿದೆ. ಇದನ್ನು ಯಾವುದೇ ಕಾರಣಕ್ಕೂ ಕಡಿದುಗೊಳ್ಳಲು ಸಾಧ್ಯವಿಲ್ಲ. ಈ ಭಾವನಾತ್ಮಕ ನಂಟು ಮಾತೃಜಿಲ್ಲೆಯಲ್ಲಿ ಏನಾದರೂ ಕಿಂಚಿತ್ ಸೇವೆ ಸಲ್ಲಿಸಬೇಕೆಂಬ ಒಡಲಾಳದ ಆಸೆಗೆ ಪ್ರೇರಣೆಯಾಗಿದೆ’ ಎಂದು ರಾಜ್ಯ ಸರಕಾರದ ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅಜ್ಜಿಕುಟ್ಟೀರ ಎಸ್. ಪೆÇನ್ನಣ್ಣ ನುಡಿದಿದ್ದಾರೆ.

ತಮ್ಮ ಪೋಷಕರ ನೆನಪಿಗಾಗಿ ‘ಎ. ಕೆ. ಸುಬ್ಬಯ್ಯ-ಪೆÇನ್ನಮ್ಮ ದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್’ ಸ್ಥಾಪಿಸಿ ಅದರ ವತಿಯಿಂದ ಕೊಡಗಿನಲ್ಲಿ ಮೊದಲ ಬಾರಿಗೆ ರೂ. 35 ಲಕ್ಷಕ್ಕೂ ಹೆಚ್ಚು ಮೌಲ್ಯದ ದಿನಸಿ ಕಿಟ್‍ಗಳನ್ನು ಬಡವರಿಗೆ ವಿತರಿಸುವ ಗುರಿ ಹೊಂದಿರುವ ಈ ಟ್ರಸ್ಟಿನ ವ್ಯವಸ್ಥಾಪಕ ಟ್ರಸ್ಟಿಗಳೂ ಆಗಿರುವ, ದಿ. ಎ. ಕೆ. ಸುಬ್ಬಯ್ಯ ಅವರ ಪುತ್ರ ಹೈಕೋರ್ಟ್‍ನ ಹಿರಿಯ ವಕೀಲರಾದ ಎ.ಎಸ್. ಪೆÇನ್ನಣ್ಣ ಅವರನ್ನು ‘ಶಕ್ತಿ’ ಪರವಾಗಿ ಸಂದರ್ಶಿಸಿದಾಗ ಅವರು ತಮ್ಮ ಮನದಾಳದ ಮಾತುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

‘ಸಮಾನತೆ ಮತ್ತು ಸೌಹಾರ್ದಯುತ ಸಮಾಜ ನಿರ್ಮಾಣ ಪ್ರತಿಯೊಬ್ಬರ ಆದ್ಯತೆಯಾಗಬೇಕು. ಸಮಾಜದಲ್ಲಿ ಬಡವರನ್ನು ಕೇವಲ ಒಂದು ಜಾತಿಗೆ ಅಥವಾ ಸಮುದಾಯಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಎಲ್ಲ ಸಮುದಾಯಗಳಲ್ಲೂ ಬಡ ವರ್ಗದವರಿದ್ದಾರೆ. ಅವರನ್ನು ಪ್ರತ್ಯೇಕಿಸಿ ನವಸಮಾಜ ನಿರ್ಮಾಣ ಮಾಡಲು ಸಾಧ್ಯವೇ ಇಲ್ಲ. ಆದ್ದರಿಂದ, ಬಡವರನ್ನು ನಿರ್ಲಕ್ಷಿಸದೆ ಅವರನ್ನು ಗೌರವಿಸುವ ಮನೋಭಾವ ಬೆಳೆಯಬೇಕು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಶಕ್ತಿ’ : ಟ್ರಸ್ಟ್ ರಚನೆಯ ಉದ್ದೇಶ ಏನು?

ಪೆÇನ್ನಣ್ಣ: ತಂದೆ ದಿ. ಸುಬ್ಬಯ್ಯನವರು ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಿ ದ್ದವರು. ಹೈಕೋರ್ಟ್ ನ ಹಿರಿಯ ವಕೀಲರಾಗಿ ಖ್ಯಾತಿ ಹೊಂದಿದ್ದವರು. ಸಮಾಜದ ಆಗು-ಹೋಗುಗಳಿಗೆ ಸ್ಪಂದಿಸುವ ಮತ್ತು ಸಹಾಯ ಮಾಡುವ ಪ್ರವೃತ್ತಿ ಅವರಲ್ಲಿತ್ತು. ತಾಯಿ ಕೂಡಾ ಸಾಕಷ್ಟು ಜನರಿಗೆ ತಮ್ಮದೇ ವ್ಯಾಪ್ತಿಯಲ್ಲಿ ನೆರವು ನೀಡುತ್ತಾ ಪ್ರಚಾರದಿಂದ ತುಂಬಾ ದೂರ ಉಳಿದಿದ್ದರು. ಆದ್ದರಿಂದ, ಅವರಂತೆ ನನಗೂ ಜನಸೇವೆ ಮಾಡಲು ವೇದಿಕೆಯೊಂದರ ಅಗತ್ಯವಿತ್ತು. ಆದ್ದರಿಂದಲೇ ಪೋಷಕರ ಹೆಸರಿನಲ್ಲಿ ಸಹೋದರರೊಂದಿಗೆ ಚರ್ಚಿಸಿ ಈ ಟ್ರಸ್ಟ್ ರಚಿಸಲಾಯಿತು.

‘ಶಕ್ತಿ’: ಟ್ರಸ್ಟ್ ಅನ್ನು ಹೇಗೆ ಮುನ್ನಡೆಸಲು ಬಯಸಿದ್ದೀರಿ ?. ಟ್ರಸ್ಟ್ ವತಿಯಿಂದ ಜನರಿಗೆ ಯಾವ ರೀತಿಯ ಪ್ರಯೋಜನ ದೊರೆಯಲಿದೆ ?

ಪೆÇನ್ನಣ್ಣ: ಈ ಟ್ರಸ್ಟನ್ನು ಭವಿಷ್ಯದ ದೂರ ದೃಷ್ಟಿಯಿಂದ ಇದನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಕಾನೂನಿನಂತೆ ಇದನ್ನು ಸರ್ಕಾರಿ ವ್ಯವಸ್ಥೆಯಲ್ಲಿ ನೋಂದಾಯಿಸಲಾಗಿದೆ. ಟ್ರಸ್ಟನ್ನು ಶಾಶ್ವತವಾಗಿ ಮತ್ತು ಜೀವಂತವಾಗಿರಿಸಬೇಕು ಎಂಬ ಬಯಕೆ ಇದೆ. ಟ್ರಸ್ಟಿನ ಹೆಸರೇ ಸೂಚಿಸುವಂತೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೂ ಮೊದಲ ಆದ್ಯತೆ ನೀಡಲಾಗುವುದು. ಇದನ್ನು ಹಂತ ಹಂತವಾಗಿ ಇತರ ಕ್ಷೇತ್ರಗಳಿಗೂ ವಿಸ್ತರಿಸಲಾಗುವುದು. ಇದರ ಪ್ರಯೋಜನ ಪಡೆಯಲು ಎಲ್ಲಾ ವರ್ಗದ ಜನತೆ ಅರ್ಹರಾಗಿರುತ್ತಾರೆ.

‘ಶಕ್ತಿ’: ಟ್ರಸ್ಟ್ ವತಿಯಿಂದ ಇದುವರೆಗೂ ಮಾಡಿದ ಕಾರ್ಯಗಳೇನಾದರೂ ಇವೆಯೇ ?

ಪೆÇನ್ನಣ್ಣ: ನೂತನವಾಗಿ ಅಸ್ತಿತ್ವಕ್ಕೆ ಬಂದ ಈ ಟ್ರಸ್ಟನ್ನು ತಂದೆಯವರ ಮೊದಲ ವರ್ಷದ ‘ಸ್ಮರಣಾದಿನ’ವಾದ ಆಗಸ್ಟ್ 27ರಂದು ಕೊಡಗಿನಲ್ಲಿ ಉದ್ಘಾಟಿಸುವ ಆಲೋಚನೆ ಇತ್ತು. ಆದರೆ ಮಹಾಮಾರಿ ಕೋವಿಡ್-19ರ ಭೀತಿಯಿಂದ ಎದುರಾದ ಲಾಕ್‍ಡೌನ್ ತಲ್ಲಣದಿಂದ ಬೆಂಗಳೂರಿನಲ್ಲಿ ವಲಸೆ ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಅನುಭವಿಸುತ್ತಿದ್ದ ಯಾತನೆಯನ್ನು ನೋಡಿದಾಗ ಏನಾದರೂ ನೆರವು ನೀಡಬೇಕೆಂದು ನಿರ್ಧರಿಸಿ ಟ್ರಸ್ಟ್ ವತಿಯಿಂದ ಬೆಂಗಳೂರಿನಲ್ಲಿ ಸಾಕಷ್ಟು ಆರ್ಥಿಕ ಸಹಾಯ ನೀಡಲಾಗಿದೆ. ಬೆಂಗಳೂರಿನಲ್ಲಿ ಈ ಕುರಿತ ಕಾರ್ಯ ನಡೆಯುತ್ತಿದ್ದಂತೆ ಕೊಡಗಿನಲ್ಲೂ ಲಾಕ್‍ಡೌನ್‍ನಿಂದ ಜನತೆ ತೊಂದರೆ ಅನುಭವಿಸುತ್ತಿರುವ ವಿಷಯ ತಿಳಿದು, ಟ್ರಸ್ಟ್ ವತಿಯಿಂದ ನೆರವು ಕಾರ್ಯ ಕೊಡಗಿನಲ್ಲಿಯೂ ವ್ಯಾಪಕವಾಗಿ ವಿಸ್ತರಿಸಲು ನಿರ್ಧರಿಸಲಾಯಿತು. ಇದರ ಮೊದಲ ಹಂತವಾಗಿ ರೂ. 20 ಲಕ್ಷ ವೆಚ್ಚದಲ್ಲಿ ಅಗತ್ಯ ದಿನಬಳಕೆಯ ವಸ್ತುಗಳನ್ನು ಒಳಗೊಂಡ 2000 ದಿನಸಿ ಕಿಟ್ ಮತ್ತು ಮಾಸ್ಕ್‍ಗಳನ್ನು ಎಲ್ಲ ವರ್ಗದವರಿಗೆ ಉಚಿತವಾಗಿ ನೀಡಲು ತೀರ್ಮಾನಿಸಿ ಅದನ್ನು ಈಗಾಗಲೇ ಅನುಷ್ಠಾನಗೊಳಿಸಲಾಗಿದೆ.

ಹುದಿಕೇರಿ, ಪೆÇನ್ನಂಪೇಟೆ, ಶ್ರೀಮಂಗಲ, ಕುಟ್ಟ, ದೇವರಪುರ, ಮಾಯಮುಡಿ, ಕಾನೂರು ಭಾಗದಲ್ಲಿ ಈಗಾಗಲೇ 2000 ದಿನಸಿ ಕಿಟ್‍ಗಳನ್ನು ವಿತರಿಸಲಾಗಿದೆ. ಈ ಕಾರ್ಯಕ್ರಮವನ್ನು ಜನರಿಗೆ ತಲುಪಿಸುವಲ್ಲಿ ಟ್ರಸ್ಟ್‍ನೊಂದಿಗೆ ಜನರ ಸಹಭಾಗಿತ್ವವೂ ಇದೆ. ಅದರಲ್ಲೂ ವಿಶೇಷವಾಗಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಶ್ರಮ ಮರೆಯಲು ಸಾಧ್ಯವಿಲ್ಲ.

ಎರಡನೇ ಹಂತವಾಗಿ ರೂ. 15 ಲಕ್ಷ ವೆಚ್ಚದಲ್ಲಿ 2,500 ದಿನಸಿ ಕಿಟ್‍ಗಳನ್ನು ವಿತರಿಸುವ ಗುರಿ ಹೊಂದಿದ್ದು, ಈಗಾಗಲೇ ಇದರ ತಯಾರಿ ನಡೆಯುತ್ತಿದೆ. ಇದೇ ತಿಂಗಳ 27 ಮತ್ತು 28ರಂದು ಇದನ್ನು ವಿತರಿಸಲಾಗುವುದು. ಹೀಗೆ ಒಟ್ಟು ರೂ.35 ಲಕ್ಷ ವೆಚ್ಚದಲ್ಲಿ ಒಟ್ಟು 4,500 ದಿನಸಿ ಕಿಟ್‍ಗಳನ್ನು ವಿತರಿಸುವ ಗುರಿ ಟ್ರಸ್ಟ್‍ಗಿದೆ.

‘ಶಕ್ತಿ’: ಟ್ರಸ್ಟಿನ ಮುಂದಿನ ಕಾರ್ಯ ಯೋಜನೆಗಳೇನು ?.

ಪೆÇನ್ನಣ್ಣ: ಮುಂದಿನ ದಿನಗಳಲ್ಲಿ ಟ್ರಸ್ಟ್ ವತಿಯಿಂದ ಪರಿಣಾಮಕಾರಿ ಯಾದ ಕಾರ್ಯಯೋಜನೆಗಳನ್ನು ರೂಪಿಸಲು ನಿರ್ಧರಿಸಲಾಗಿದೆ. ವಿಶೇಷವಾಗಿ ಗ್ರಾಮೀಣ ಜನತೆಗೆ ನೆರವು ದೊರೆಯಬೇಕೆಂಬುದು ಟ್ರಸ್ಟ್‍ನ ಮೂಲ ಆಶಯ. ನನ್ನ ತವರು ನೆಲದ ಜನತೆಗೆ ನೆರವಾಗುವ ಉದ್ದೇಶದಿಂದ ದೊಡ್ಡಮೊತ್ತದ ವೈದ್ಯಕೀಯ ಘಟಕವೊಂದನ್ನು ನೀಡುವ ಆಲೋಚನೆಯೂ ಇದೆ. ಅಲ್ಲದೆ ಅರ್ಹ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ವೇತನದ ಮೂಲಕ ಶೈಕ್ಷಣಿಕವಾಗಿ ಉತ್ತೇಜಿಸುವ ಕಾರ್ಯವನ್ನು ಮಾಡಲಾಗುವುದು. ಒಟ್ಟಿನಲ್ಲಿ ಜನರಿಗೆ ನೇರವಾಗಿ ಇದರ ಪ್ರಯೋಜನ ದೊರೆಯಬೇಕೆಂಬುದು ಟ್ರಸ್ಟ್ ನ ಅಂತಿಮ ಆಶಯವಾಗಿದೆ.

‘ಶಕ್ತಿ’: ನೀವು ಹಿರಿಯ ವಕೀಲರಾಗಿ ನಂತರ ‘ನ್ಯಾಯಮೂರ್ತಿ’ಯಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದೀರಿ. ಅಲ್ಲದೆ ನೀವು ಇದೇ ಹಾದಿಯಲ್ಲಿ ಸಾಗುತ್ತೀರಿ ಎಂದೂ ಜನ ಚರ್ಚಿಸುತ್ತಿದ್ದರು. ಈಗ ನಿಮ್ಮ ಆಲೋಚನೆ ಬದಲಾಗಿದೆಯೇ ?

ಪೆÇನ್ನಣ್ಣ: ನಾನು ಸದಾ ಜನರೊಂದಿಗೆ ಬೆರೆಯಲು ಬಯಸುತ್ತೇನೆ. ನನ್ನ ತಂದೆ ಜನರಿಂದಲೇ ಮೇಲೆ ಬಂದವರು. ವಿವಿಧ ಆಯಾಮಗಳಿಂದ ಜನಸೇವೆ ಮಾಡಲು ಸಾಧ್ಯವಿದ್ದರೂ ಜನರ ಮಧ್ಯೆ ಇದ್ದು ಅವರ ಸೇವೆ ಮಾಡುವ ಅನುಭವವೇ ಬೇರೆಯಾಗಿರುತ್ತದೆ.

‘ಶಕ್ತಿ’: ನೀವು ಕರ್ನಾಟಕ ಹೈಕೋರ್ಟ್‍ನ ಹಿರಿಯ ವಕೀಲರಲ್ಲಿ ಒಬ್ಬರಾಗಿದ್ದೀರಿ. ಜನಸೇವೆಗೆ ನಿಮ್ಮ ಬಿಡುವಿಲ್ಲದ ಕೆಲಸ ಅಡ್ಡಿಯಾಗುವುದಿಲ್ಲವೇ ?

ಪೆÇನ್ನಣ್ಣ: ಜನಸೇವೆಯೇ ಬೇರೆ, ವಕೀಲಿ ವೃತ್ತಿಯೇ ಬೇರೆ. ಅದನ್ನು ಒಂದಕ್ಕೊಂದು ಜೋಡಿಸಲು ನಾನು ಬಯಸುವುದಿಲ್ಲ. ರಾಜ್ಯದ ಹಿರಿಯ ರಾಜಕಾರಣಿಗಳು ಸೇರಿದಂತೆ ಹಾಲಿ ಮತ್ತು ಮಾಜಿ ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು ಸಾಕಷ್ಟು ಸಂಖ್ಯೆಯಲ್ಲಿ ನನ್ನ ಕಕ್ಷಿದಾರರಿದ್ದಾರೆ. ಇದು ನನ್ನ ವೃತ್ತಿಜೀವನದ ಭಾಗವಾಗಿದೆ. ಹೀಗಿದ್ದಾಗ ಇದರಲ್ಲೇ ಸಂತೃಪ್ತಿ ಪಡೆದು ಸುಮ್ಮನಿರಬಹುದಿತ್ತು. ಆದರೆ ಜನಸೇವೆ ವಿಚಾರ ಬಂದಾಗ ಸಾಮಾನ್ಯನಾಗಿ ಜನರೊಂದಿಗೆ ಗುರುತಿಸಿಕೊಳ್ಳಲು ಬಯಸುತ್ತೇನೆ. ನನ್ನ ಜನಸೇವೆಗೆ ವೃತ್ತಿ ಬದುಕು ಅಡ್ಡಿಯಾಗುವುದಿಲ್ಲ.

ವಿಶೇಷ ಸಂದರ್ಶನ: ರಫೀಕ್

ತೂಚಮಕೇರಿ