ಶನಿವಾರಸಂತೆ, ಜೂ. 21: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಮ್ಮನೆ ಗ್ರಾಮದಲ್ಲಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಇಲ್ಲದೆ ಅಂಗನವಾಡಿ ಕೇಂದ್ರವೊಂದು ಅನಾಥವಾಗಿದೆ. ಶೀಘ್ರ ನೇಮಕಾತಿ ಮಾಡಿಕೊಡಿ ಎಂದು ಶಿವರಾಮೇಗೌಡ ಬಣದ ಕರವೇ ಕಾರ್ಯ ಕರ್ತರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಗ್ರಾಮದಲ್ಲಿ 80 ಕುಟುಂಬಗಳಿದ್ದು, 15ರಿಂದ 20 ಮಕ್ಕಳು ಅಂಗನವಾಡಿಗೆ ದಾಖಲಾಗಿದ್ದು, ಸೌಲಭ್ಯ ವಂಚಿತವಾಗಿದೆ. ದುರಂತವೆಂದರೆ ಅಂಗನವಾಡಿ ಕೇಂದ್ರದಲ್ಲಿ ಯಾವುದೇ ಮಕ್ಕಳು ಇಲ್ಲ ಎಂದು ಸುಳ್ಳು ಮಾಹಿತಿ ನೀಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಯಿಂದ ಇದನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಮೂವರು ಗರ್ಭಿಣಿ ಮಹಿಳೆಯರ ಹೆಸರು ದಾಖಲಿಸಿದ್ದು, ಅವರಿಗೂ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಚಾತುರ್ಯ ನಡೆಸಿದಲ್ಲಿ ಮಕ್ಕಳು, ಪೋಷಕರು ಹಾಗೂ ಗ್ರಾಮಸ್ಥರೊಂದಿಗೆ ಕರವೇ ಕಾರ್ಯಕರ್ತರು ಸೋಮವಾರಪೇಟೆ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರವೇ ತಾಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಹಾಗೂ ಕಾರ್ಯಕರ್ತರು ಪತ್ರಿಕಾ ಹೇಳಿಕೆ ನೀಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.