ಸಿದ್ದಾಪುರ, ಜೂ 19: ಕಳೆದೆರಡು ದಿನಗಳಿಂದ ಅರಣ್ಯ ಇಲಾಖೆಯ ವತಿಯಿಂದ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಹಿಂಡುಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಯನ್ನು ನಡೆಸಲಾಯಿತು. ನೆಲ್ಯಹುದಿಕೇರಿ, ಅತ್ತಿಮಂಗಲ, ಅಭ್ಯತ್‍ಮಂಗಲ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಅರಣ್ಯ ಇಲಾಖಾ ಅಧಿಕಾರಿಗಳು ಪಟಾಕಿ ಸಿಡಿಸಿ ಕಾಡಿಗೆ ಅಟ್ಟಲು ಪ್ರಯತ್ನಿಸಿದರು. ಆದರೆ ಕಾಡಾನೆಗಳ ಹಿಂಡು 2-3 ಗುಂಪುಗಳಾಗಿದ್ದು, ಒಂದು ಗುಂಪಿನ ಹಿಂಡು ಕಾವೇರಿ ನದಿಯನ್ನು ದಾಟಿ ದುಬಾರೆ ಅರಣ್ಯಕ್ಕೆ ತೆರಳಿತ್ತು.
ಆದರೆ ಇನ್ನೊಂದು ಗುಂಪಿನಲ್ಲಿದ್ದ ಕೆಲವು ಕಾಡಾನೆಗಳು ಹಾಗೂ ಮರಿ ಆನೆಗಳು ಕಾಫಿ ತೋಟಗಳನ್ನು ಬಿಟ್ಟು ಕದಲಲಿಲ್ಲ. ಒಂದು ಗುಂಪಿನಲ್ಲಿದ್ದ ಆನೆಯೊಂದು ನೆಲ್ಯಹುದಿಕೇರಿಯ ಅತ್ತಿಮಂಗಲದ ಕೆ.ಎ ತಿಮ್ಮಯ್ಯ ಅವರ ಮನೆಯ ಬಳಿ ಗುರುವಾರ ರಾತ್ರಿ ಸಮಯದಲ್ಲಿ ಕಾರನ್ನು ಹಾನಿಗೊಳಿಸಿದೆ. ಅಲ್ಲದೇ ಮನೆಯ ಅಂಗಳದಲ್ಲಿದ್ದ ಹೂ ಕುಂಡಗಳನ್ನು ಧ್ವಂಸಗೊಳಿಸಿದೆ. ಇದಾದ ಬಳಿಕ ಅತ್ತಿಮಂಗಲ ಸಮೀಪದಲ್ಲಿ ವಾಸವಿರುವ ಅಶ್ರಫ್ ಅವರ ತೋಟದ ಮನೆಗೆ ತೆರಳುವ ರಸ್ತೆಬದಿಯಲ್ಲಿರುವ ಗೇಟನ್ನು ಹಾನಿಗೊಳಿಸಿದೆ.
ಅಲ್ಲದೆ ತೋಟದ ಕಾಫಿ ಗಿಡಗಳನ್ನು ಧ್ವಂಸಗೊಳಿಸಿದೆ. ಸ್ಥಳಕ್ಕೆ ಕುಶಾಲನಗರ ವಲಯ ಉಪವಲಯ ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೆಲ್ಯಹುದಿಕೇರಿ ಗ್ರಾಮದ ಅತ್ತಿಮಂಗಲ ಸುತ್ತಮುತ್ತಲಿನ ಬೆಟ್ಟದ ಕಾಡು, ಅರೆಕಾಡು ಭಾಗದಲ್ಲಿ ಮಿತಿಮೀರಿದ ಕಾಡಾನೆಗಳಿಗೆ ಮರಿ ಆನೆಗಳು ಸಲಗಗಳು ಸೇರಿದಂತೆ 30ಕ್ಕೂ ಅಧಿಕ ಕಾಡಾನೆಗಳು ಬೀಡುಬಿಟ್ಟು ಕೃಷಿ ಫಸಲುಗಳನ್ನು ನಾಶಪಡಿಸುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.