ಸೋಮವಾರಪೇಟೆ, ಜೂ.19: ಅಕ್ರಮವಾಗಿ ಕಸಾಯಿಖಾನೆಗೆ ಗೋವುಗಳನ್ನು ಸಾಗಾಟಗೊಳಿಸುತ್ತಿದ್ದ ಪ್ರಕರಣವನ್ನು ಸ್ಥಳೀಯರು ಪತ್ತೆಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಕ್ರಮವಾಗಿ ಗೋವುಗಳನ್ನು ಸಾಗಾಟಗೊಳಿಸುತ್ತಿದ್ದ ವಾಹನ ಸಹಿತ ಎರಡು ಗೋವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಬಿಳಿಗೇರಿ ಸಮೀಪದ ನಂದಿಮೊಟ್ಟೆ-ಕಲ್ಲಡಿ ರಸ್ತೆಯಲ್ಲಿ ನಂದಿಮೊಟ್ಟೆ ಗ್ರಾಮದ ರಾಜಾ ಎಂಬವರಿಗೆ ಸೇರಿದ ಎರಡು ಗೋವುಗಳನ್ನು ಮೂರ್ನಾಡು-ಕೋಡಂಬೂರು ನಿವಾಸಿ, ಅಸ್ಗರ್ ಆಲಿ ಎಂಬವರಿಗೆ ಸೇರಿದ ಅಶೋಕ್ ಲೈಲ್ಯಾಂಡ್ ವಾಹನ(ಕೆ.ಎ.12 ಬಿ.5890)ದಲ್ಲಿ ಕಸಾಯಿಖಾನೆಗೆ ಸಾಗಾಟಗೊಳಿಸಲು ಮುಂದಾಗುತ್ತಿದ್ದ ಸಂದರ್ಭ, ಸ್ಥಳೀಯರೊಂದಿಗೆ ಮಾದಾಪುರದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ತಡೆಯೊಡ್ಡಿದ್ದಾರೆ. ಈ ಸಂದರ್ಭ ವಾಹನದ ಚಾಲಕ, ಗೋವುಗಳನ್ನು ವಾಹನದಲ್ಲೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಯಾವದೇ ಅನುಮತಿ ಪಡೆಯದೇ ಅಕ್ರಮವಾಗಿ ಗೋವುಗಳನ್ನು ಸಾಗಾಟಗೊಳಿಸುತ್ತಿದ್ದ ಬಗ್ಗೆ ಸ್ಥಳೀಯರು ಸೋಮವಾರಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಠಾಣಾಧಿಕಾರಿ ಶಿವಶಂಕರ್, ಎಎಸ್‍ಐ ಪೊನ್ನಪ್ಪ, ಸಿಬ್ಬಂದಿಗಳಾದ ಶಿವಕುಮಾರ್, ಶಿವರಾಜ್ ಅವರುಗಳು ಸ್ಥಳಕ್ಕೆ ತೆರಳಿ ವಾಹನ ಸಹಿತ ಗೋವುಗಳನ್ನು ವಶಕ್ಕೆ ಪಡೆದಿದ್ದಾರೆ.
ತಲೆಮರೆಸಿಕೊಂಡ ವಾಹನ ಚಾಲಕನ ವಿರುದ್ಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ವಶಕ್ಕೆ ಪಡೆದ ಎರಡು ಗೋವುಗಳನ್ನು ಭಾಗಮಂಡಲದ ಗೋ ಶಾಲೆಗೆ ಸಾಗಿಸಲಾಗಿದೆ.