ನವಮೋಧ್ಯಾಯ: ಪಾರ್ವತಿ ದೇವಿಯು ಪ್ರಶ್ನಿಸುತ್ತಾಳೆ:-ಪರಮೇಶ್ವರನೆ, ಒಂದರಲ್ಲಿಯೇ ಸಮಸ್ತ ತೀರ್ಥಗಳು ಇರಲು ಹೇಗೆ ಸಾಧ್ಯ ? ಅವು ಪ್ರಮುಖವಾದವುಗಳೋ ಅಥವಾ ನಗಣ್ಯವಾದವು ಗಳೋ ಎಂಬ ಕುರಿತು ತಿಳಿಸು.

ಪರಮೇಶ್ವರನು ಪಾರ್ವತಿಯ ಸಂಶಯ ಪರಿಹರಿಸುತ್ತಾ ಹೇಳುತ್ತಾನೆ:-ಪಾರ್ವತಿಯೇ, ಸ್ವರ್ಗ ಲೋಕ, ಭೂಲೋಕ ಮತ್ತು ಅಂತರಿಕ್ಷ ಮಂಡಲದಲ್ಲಿ ಯಾವ ತೀರ್ಥಗಳೆಲ್ಲ ಇರುವವೋ ಅವೆಲ್ಲವೂ ಒಂದೆಡೆ ಕಾವೇರಿಯಲ್ಲಿ ಸರ್ವತ್ರ ಸೇರಿವೆ. ಬೇರೆ ನದಿಗಳಲ್ಲಿ ಇರಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಸ್ನಾನ ಎನ್ನುವದು ಮಾನವನ ನಿತ್ಯ ಕಟ್ಟು ಪಾಡಾಗಿಬಿಟ್ಟಿದೆ. ಸ್ನಾನ ಮಾಡದಿದ್ದರೆ ಮನಸ್ಸಿನ ಶುದ್ಧಿಯಾಗಲಿ, ದೇಹದ ಶುದ್ಧಿಯಾಗಲೀ ಆಗುವದಿಲ್ಲ. ಮಾನವನಿಗೆ ವಿವಿಧ ರೀತಿಯ ಸ್ನಾನ ಮಾಡುವ ಅವಕಾಶವಿದೆ. ಅವುಗಳೆಂದರೆ: ಭಸ್ಮ ಸ್ನಾನ, ಜಲಸ್ನಾನ, ಉತ್ತಮವಾದ ಮಂತ್ರಸ್ನಾನ, ಶ್ರೀ ಹರಿಯ ಪಾದಜಲದಲ್ಲಿ ಸ್ನಾನ ಹಾಗೂ ಬ್ರಹ್ಮಜ್ಞಾನ ಸ್ನಾನ. ಅಂದರೆ ಇದರ ವಿವರಣೆ ಹೀಗಿದೆ: ಭಸ್ಮವನ್ನೇ ಮೈಗೆ ಲೇಪಿಸಿಕೊಂಡಾಗ ಅದು ಭಸ್ಮ ಸ್ನಾನ ಎನಿಸುತ್ತದೆ. ಜಲವನ್ನು ಮೈಗೆ ಸುರಿದುಕೊಂಡು ಮಾಡುವ ಸ್ನಾನ ಜಲಸ್ನಾನ ಎನಿಸುತ್ತದೆ. ದೈವೀ ಮಂತ್ರಗಳ ಪಠಣವನ್ನು ಮಂತ್ರ ಸ್ನಾನ ಎನ್ನುತ್ತಾರೆ. ಅದೇ ರೀತಿ ಶ್ರೀ ಹರಿಯ ದೇಗುಲಗಳಲ್ಲಿ ಅಥವಾ ಮನೆಗಳಲ್ಲಿ ಹರಿಯ ಮೂರ್ತಿ, ವಿಷ್ಣುಪಾದ ಅಥವಾ ಸಾಲಿಗ್ರಾಮಗಳನ್ನು ಶುದ್ಧೀಕರಿಸಿದ ಜಲವನ್ನು ಒಯ್ದು ಸ್ನಾನ ಮಾಡಿದಾಗ ಅದು ಶ್ರೀಹರಿಯ ಪಾದೋದಕ ಸ್ನಾನ ಎನಿಸಿಕೊಳ್ಳುತ್ತದೆ. ಬ್ರಹ್ಮ ಅಂದರೆ ಅಂತರಾತ್ಮನ ಧ್ಯಾನದ ಮೂಲಕ “ ಏಕಮೇವಾದ್ವಿತೀಯಂ” ಎಂಬಂತೆ ಜಗತ್ತಿನ ಏಕ ಶಕ್ತಿಯನ್ನು ಧ್ಯಾನದ ಮೂಲಕ ಶೋಧಿಸುವದನ್ನು ಬ್ರಹ್ಮಜ್ಞಾನ ಸ್ನಾನ ಎಂದು ಕರೆಯಲಾಗಿದೆ. ಈ ಎಲ್ಲ ಸ್ನಾನಗಳ ಮಹತ್ವವನ್ನು ಪರಮೇಶ್ವರನು ಪಾರ್ವತಿ ದೇವಿಗೆ ಹೀಗೆ ವಿವರಿಸುತ್ತಾನೆ:-ಜಲಸ್ನಾನಕ್ಕಿಂತಲೂ ಭಸ್ಮ ಸ್ನಾನವು ದಶಪಾಲು ಮೇಲಾಗಿದೆ. ಮಂತ್ರ ಸ್ನಾನವು ಭಸ್ಮ ಸ್ನಾನಕ್ಕಿಂತ ಹತ್ತು ಪಾಲು ಮಿಗಿಲಾದುದು. ದಿವ್ಯವಾದ ವಿಷ್ಣು ಪಾದೋದಕ ಸ್ನಾನವು ಮಂತ್ರ ಸ್ನಾನಕ್ಕಿಂತಲೂ ಶತಪಾಲು ಮಿಗಿಲಾದುದಾಗಿದೆ. ಬ್ರಹ್ಮ ಜ್ಞಾನ ಸ್ನಾನವು ಅಂದರೆ ಬ್ರಹ್ಮ ಜ್ಞಾನ ಪ್ರಾಪ್ತಿಯು ವಿಷ್ಣು ಪಾದೋದಕ ಸ್ನಾನಕ್ಕಿಂತಲೂ ಶ್ರೇಷ್ಠ ಎನ್ನುತ್ತಾರೆ. ಜಲದಲ್ಲಿ ಸ್ನಾನ ಮಾಡುವದರಿಂದ ಶರೀರದ ಶುಚಿತ್ವವುಂಟಾಗುತ್ತದೆ. ಮಂತ್ರಸ್ನಾನದಿಂದ ಮನಸ್ಸು ಶುದ್ದಿಗೊಳ್ಳುತ್ತದೆ. ಭಸ್ಮ ಸ್ನಾನದಿಂದ ವಾಕ್ ಶುದ್ಧಿಗೊಳ್ಳುತ್ತದೆ. ವಿಷ್ಣು ಪಾದೋದಕದಿಂದ ದೇಹ ಮನಸ್ಸು ಮತ್ತು ಮಾತುಗಳೆಂಬ ಮೂರು ತರಹದ ಶುದ್ಧಿಗಳೂ ಉಂಟಾಗುತ್ತವೆ. ಬ್ರಹ್ಮಜ್ಞಾನವು ಉಂಟಾದರೆ ಸಕಲ ಶುದ್ಧಿಗಳೂ ಉಂಟಾಗುವದರಲ್ಲಿ ಸಂದೇಹವಿಲ್ಲ.

ಈ ಎಲ್ಲ ಸ್ನಾನಗಳನ್ನೂ ಮೀರಿಸುತ್ತದೆ ತೀರ್ಥ ಸ್ನಾನವೆನ್ನುವದು. ಧಾರ್ಮಿಕ ಪುಣ್ಯಕ್ಷೇತ್ರಗಳಲ್ಲಿ ಹರಿಯುವ ಪವಿತ್ರ ನದಿಗಳನ್ನು ತೀರ್ಥವೆಂದು ಕರೆಯತ್ತಾರೆ. ದೇವಾಲಯಗಳಲ್ಲಿ, ಮನೆಗಳಲ್ಲಿ ಪೂಜೆಯಾದ ಬಳಿಕ ಅಭಿಷೇಕ ಜಲವನ್ನು ತೀರ್ಥ ಎಂದು ಭಾವಿಸಿ ಸೇವಿಸುತ್ತೇವೆ. ಆದರೆ ನಿಂತ ನೀರಾಗಿರದೆ ನಿರಂತರ ಹರಿಯುವಂತಹ ನದಿಗಳನ್ನು ನದೀ ನೀರೆಂದು ಪರಿಗಣಿಸುತ್ತೇವೆ. ಪವಿತ್ರ ನದಿಗಳು ಧಾರ್ಮಿಕ ಪುಣ್ಯಕ್ಷೇತ್ರದ ಆವರಣದಲ್ಲಿ ಹರಿಯುವಾಗ ಅಂತಹುಗಳು ಪರಮ ಪವಿತ್ರ ನೈಸರ್ಗಿಕ ತೀರ್ಥಗಳೆಂದೂ ಸರ್ವ ಶ್ರೇಷ್ಠ ಪಾಪಹಾರೀ ತೀರ್ಥಗಳೆಂದೂ ಪರಿಗಣಿತವಾಗಿವೆ. ಇಂತಹ ತೀರ್ಥಗಳಲ್ಲಿ ಸ್ನಾನ ಮಾಡುವದೆಂದರೆ ಇತರ ಎಲ್ಲ ಸ್ನಾನಗಳಿಗಿಂತಲೂ ಶ್ರೇಷ್ಠತಮವಾದುದು ಎಂದು ಮಾನ್ಯತೆ ಪಡೆದಿದೆ. ಸಕಲ ಪಾಪರಾಶಿಯನ್ನು ಪರಿಹಾರ ಮಾಡುವ ತೀರ್ಥ ಸ್ನಾನವು ಜೀವಿಗಳ ಬಾಹ್ಯಶುದ್ಧಿಯನ್ನೂ, ಅಂತಃಶುದ್ಧಿಯನ್ನೂ ಉಂಟುಮಾಡುತ್ತವೆ. ಇಂತಹ ಪವಿತ್ರ ತೀರ್ಥಗಳ ಪೈಕಿ ಪ್ರಮುಖಳಾದ ಕಾವೇರಿಯಲ್ಲಿ ಸ್ನಾನ ಮಾಡುವ ಬಯಕೆ ಬಂದಾಗ ಮೊದಲು ಸಂಕಲ್ಪಿತರಾಗಿ ತೀರ್ಥ ಸ್ನಾನ ಮಾಡುತ್ತೇವೆ ಎಂದು ಮನೆಯಿಂದ ಹೊರಡಬೇಕು. ಪ್ರಯಾಣ ಸಂದರ್ಭ “ ಓಂ ನಮೋ ನಾರಾಯಣಾಯ” ಎನ್ನುವ ಅಷ್ಟಾಕ್ಷರೀ ಮಂತ್ರವನ್ನು ಜಪಿಸುತ್ತಿರಬೇಕು. ಭಾಗಮಂಡಲ ಸಂಗಮಕ್ಕೆ ತೆರಳಿ ಸ್ನಾನದ ವಸ್ತ್ರವನ್ನು ಉಟ್ಟುಕೊಂಡು ಕಾವೇರಿಯ ತ್ರಿವೇಣೀ ಸಂಗಮದಲ್ಲಿ ಸ್ನಾನ ಮಾಡಬೇಕು.

ಪಿಂಡಪ್ರದಾನ ಮಾಡುವವರು ಕ್ಷೇತ್ರ ಪುರೋಹಿತರ ಮಾರ್ಗದರ್ಶನ ಪಡೆದು ಕ್ಷೇತ್ರೋಪಾಸ ಮಾಡಬೇಕು. ರಾತ್ರಿ ಕಳೆದು ಬೆಳಗಾಗುತ್ತಲೇ ಪ್ರಾತಃಕಾಲದಲ್ಲಿ ಮತ್ತೆ ಕಾವೇರಿ ತೀರ್ಥಸ್ನಾನವನ್ನು ಮಾಡಬೇಕು. ಕ್ಷೇತ್ರದ ದೇವತೆಗಳಿಗೆ ನಮಸ್ಕಾರ ಮಾಡಿ ಶ್ರೇಷ್ಠವಾದ ತೀರ್ಥದಿಂದ ಅಘ್ರ್ಯವನ್ನು ಬಿಡಬೇಕು.

ವಿನಾಯಕಂ ಕ್ಷೇತ್ರಪಾಲಂ ಶಿವಂ ಸ್ಕಂದಂ ಹರಿಂ ಶಿವಾಂ

ಕಾವೇರೀಂ ಕನಕಾಂ ದುರ್ಗಾಂ ತಕ್ಷಕಂ ತು ಕ್ರಮೇಣ ತು

ವಿನಾಯಕ ನಮಸ್ತುಭ್ಯಂ ಭಕ್ತಾನಾಮಭಯಪ್ರದ

ತ್ವತ್ಪ್ರಸಾದಾತ್ಫಲಂ ಸರ್ವಂ ಯಾಚಯಾಮಿ ಗಣಾಧಿಪ

ಕ್ಷೇತ್ರಪಾಲ ಮಹಾಬಾಹೋ ಮಂಗಲಾಖ್ಯ ಚತುರ್ಭುಜ

ನಮಸ್ಕರೋಮಿ ತ್ವಾಂ ದೇವ ತೀರ್ಥಂ ದೇಹಿ ಮಮ ಪ್ರಭೋ

ವೃಷಧ್ವಜ ವಿರೂಪಾಕ್ಷ ಭಗಂಡಾಧಿಪ ಶಂಕರ

ಸರ್ವಪಾಪ ವಿನಾಶಾಯತೀರ್ಥಂ ದೇಹಿ ಮಹೇಶ್ವÀರ

ಮಯೂರಧ್ವಜ ದೇವೇಶ ದ್ವಾದಶಾಕ್ಷ ದ್ವಿಷಡ್ಭುಜ

ಸುಬ್ರಹ್ಮಣ್ಯ ನಮಸ್ತೇಸ್ತು ತೀರ್ಥಂ ಮೇ ದಾತುಮರ್ಹಸಿ

ವಾಸುದೇವ ಹರೇ ವಿಷ್ಣೋ ಭೂತಭಾವನ ಕೇಶವ

ತೀರ್ಥಸ್ಯತು ಫಲಂ ಸರ್ವಂ ದೇಹಿ ಮೇ ಶಂಕರ ಪ್ರಿಯ

ಅಂಬಿಕೇ ತ್ವಾಂ ಅಹಂ ವಂದೇ ಶಿವಸ್ಯ ದಯಿತೇ ಶಿವೇ

ಸರ್ವಪಾಪವಿನಾಶಾಯ ತೀರ್ಥಂ ದೇಹಿ ಶಿವಪ್ರಿಯೇ

ಕಮಲೋದ್ಭವಜೇ ದೇವಿ ಕಾವೇರಿ ಗಿರಿಸಂಭವೇ

ನಮಾಮಿತ್ವಾಮಹಂ ಭದ್ರೇ ತೀರ್ಥಂ ದೇಹಿ ಕವೇರಜೇ

ಸುಜ್ಯೋತಿಕಾ ಸಖೀ ದೇವಿ ಕನಕೇ ತ್ವಾಂ ನಮಾಮ್ಯಹಂ

ಸರ್ವಾಘೌಘ ವಿನಾಶಾಯ ತೀರ್ಥಂ ಮೇ ದಾತುಮರ್ಹಸಿ

ಮಹಿಷಘ್ನೇ ಮಹಾಮಾಯೇ ವಾಸುದೇವ ಸಹೋದರಿ

ನಮಸ್ತೇ ಸರ್ವ ಮಾಂಗಲ್ಯೇ ತೀರ್ಥಂ ದೇಹಿ ಶುಭೇ ಮಮ

ಮಮಪಿಂಗಾಕ್ಷ ಪನ್ನಗಶ್ರೇಷ್ಠ ಪುಣ್ಯಕ್ಷೇತ್ರಸ್ಯ ಪಾಲಕ

ದೇಹಿತೀರ್ಥಂ ಪ್ರಸಾದಾನ್ಮೇ ವರದೋಭವ ತಕ್ಷಕ

ಇಂದ್ರಮಗ್ನಿಂ ಯಮಂ ರಕ್ಷೋ ವರುಣಂ ವಾಯುಮೇವಚ

ಧನದಂ ಶಂಕರಮಜಮನಂತಂ ಪೃಥಿವೀಪತಿಂ

ಸಪ್ತರ್ಷೀನ್ ಭಾಸ್ಕರಂ ಗಂಗಾಂ ಕಾವೇರೀಂ ಕನಕಾಂ ದ್ವಿಜಾನ್

ಏತಾನ್ ಪ್ರಣಮ್ಯ ಕಾವೇರ್ಯಾಸ್ಸಚೇಲಂ ಜಲಮಾವಿಶೇತ್

ಧ್ಯಾಯನ್ನಾರಾಯಣಂ ದೇವಂ ವಿಧಿವತ್ ಸ್ನಾನಮಾಚರೇತ್

ದೇವಾನ್ ಋಷೀನ್ ಪಿತೃನ್ ಭಕ್ತ್ಯಾ ವಿಪ್ರಾನ್ ಸಂತರ್ಪಯೇದ್ಧನೈಃ

ಕ್ಷೇತ್ರ ಪಿಂಡ ಪ್ರದಾನಂ ಚ ಕುರ್ಯಾತ್ತೀರ್ಥ ತಟೇ ಬುಧಃ

ವಿನಾಯಕ, ಕ್ಷೇತ್ರಪಾಲ ಶಿವ, ಸುಬ್ರಹ್ಮಣ್ಯ, ಮಹಾವಿಷ್ಣು, ಕಾವೇರಿ, ಕನ್ನಿಕೆ, ದುರ್ಗೆ, ತಕ್ಷಕ ಇವರು ಭಾಗಮಂಡಲ ಕ್ಷೇತ್ರದ ದೇವತೆಗಳಾಗಿದ್ದಾರೆ. ಬೆಳಿಗ್ಗೆ ಒಮ್ಮೆ ಸ್ನಾನವಾದ ಬಳಿಕ ಪಿಂಡ ಪ್ರದಾನ ಮಾಡುವವರು ಈ ದೇವತೆಗಳಲ್ಲಿ ಹೀಗೆ ಪ್ರಾರ್ಥಿಸಬೇಕು:- ಭsಕ್ತರಿಗೆ ಅಭಯವನ್ನು ನೀಡುವ ಮಹಾಗಣಪತಿ ದೇವತೆಗೆ ನಮಸ್ಕಾರ. ನಿನ್ನ ಅನುಗ್ರಹದಿಂದ ಸಕಲ ಫಲವೂ ಲಭಿಸಲಿ ಎಂದು ಬೇಡುವೆನು. ಮಹಾಭುಜನೆ, ಮಂಗಳಕರವಾದ ಹೆಸರುಳ್ಳವನೇ, ಚತುರ್ಭುಜನೂ, ಯಜಮಾನನೂ ಆದ ಕ್ಷೇತ್ರಪಾಲನೇ, ನಿನಗೆ ನಮಸ್ಕಾರವನ್ನು ಮಾಡುವೆನು ನನಗೆ ತೀರ್ಥವನ್ನು ಕೊಡು. ನಂದಿವಾಹನನೂ, ವಿರೂಪಾಕ್ಷನೂ, ಭಗಂಡ ಕ್ಷೇತ್ರದ ಒಡೆಯನೂ , ಮಂಗಳಕರನೂ ಆದ ಮಹೇಶ್ವರನೇ, ಸಕಲ ಪಾಪಗಳೂ ಪರಿಹಾರವಾಗಲು ನನಗೆ ತೀರ್ಥವನ್ನು ದಯಪಾಲಿಸು. ಮಯೂರವಾಹನನೂ, ದೇವೇಶನೂ, ದ್ವಾದಶ ನೇತ್ರಗಳುಳ್ಳವನೂ ಹನ್ನೆರಡು ಭುಜಗಳುಳ್ಳವನೂ ಆದ ಸುಬ್ರಹ್ಮಣ್ಯನೇ, ನಿನಗೆ ನಮಸ್ಕಾರ. ನನಗೆ ತೀರ್ಥವನ್ನು ನೀಡು.

ವಸುದೇವಸುತನೇ, ಶ್ರೀ ಹರಿಯೇ, ವಿಷ್ಣುವೇ, ಜೀವಿಗಳಿಂದ ಧ್ಯಾನಿಸಲ್ಪಡತಕ್ಕವನೇ, ಕೇಶವನೇ, ಶಂಕರಪ್ರಿಯನೇ, ಸಕಲ ತೀರ್ಥ ಫಲವನ್ನು ನನಗೆ ದಯಪಾಲಿಸು. ಪರಮೇಶ್ವರನ ಪ್ರಾಣ ಕಾಂತೆಯೂ, ಮಂಗಳಕಾರಿಣಿಯೂ ಆದ ಅಂಬಿಕೆಯೇ ನಿನಗೆ ನಾನು ನಮಸ್ಕರಿಸು ತ್ತೇನೆ, ಈಶ್ವರನ ವಲ್ಲಭೆಯೇ, ಸಮಸ್ತ ಪಾಪ ವಿಮೋಚನೆಗಾಗಿ ನನಗೆ ತೀರ್ಥವನ್ನು ಅನುಗ್ರಹಿಸು. ಬ್ರಹ್ಮಪುತ್ರಿಯೇ, ಪೂಜ್ಯಳೇ, ಸಹ್ಯಾದ್ರಿ ಕುವರಿಯೇ, ಮಂಗಲಕಾರಿಣಿಯೇ, ಕವೇರಪುತ್ರಿಯೇ ನಾನು ನಿನ್ನನ್ನು ನಮಸ್ಕರಿಸುವೆನು ನೀನು ತೀರ್ಥವನ್ನು ನನಗೆ ದಯಪಾಲಿಸು. ಸುಜ್ಯೋತಿಕೆಯ ಸಂಗಾತಿಯಾದ ಕನ್ನಿಕಾ ದೇವಿಯೇ ನಿನಗೆ ವಂದಿಸುತ್ತೇನೆ. ನನ್ನ ಸರ್ವ ಪಾಪ ನಿವೃತ್ತಿಗಾಗಿ ತೀರ್ಥವನ್ನು ಕೊಡು. ಮಹಿಷಾಸುರ ಮರ್ದಿನಿಯೆ, ಮಹಾಮಾಯೆಯೇ, ಶ್ರೀ ಕೃಷ್ಣನ ಸಹೋದರಿಯೂ, ಶುಭಕರಳೂ ಆದ ಸರ್ವಮಂಗಳೆಯೇ ನಿನಗೆ ವಂದಿಸುವೆನು ನನಗೆ ತೀರ್ಥವನ್ನು ಅನುಗ್ರಹಿಸು.

ಹೊಂಗಣ್ಣನೂ, ಹಾವುಗಳಲ್ಲಿ ಶ್ರೇಷ್ಠನೂ, ಪುಣ್ಯಕ್ಷೇತ್ರದ ಪರಿಪಾಲಕನೂ ಆದ ತಕ್ಷಕನೇ, ತೀರ್ಥವನ್ನು ಕೊಡು. ನನ್ನಲ್ಲಿ ಅನುಗ್ರಹವಿಟ್ಟು ವರಗಳನ್ನು ಕೊಡುವವನಾಗು.

ಹೀಗೆ ಪ್ರಾರ್ಥನೆ ಮಾಡಿದ ಬಳಿಕ ಇಂದ್ರನನ್ನೂ, ಅಗ್ನಿಯನ್ನೂ, ಯಮನನ್ನೂ, ನಿಋತನನ್ನೂ, ವರುಣನನ್ನೂ, ವಾಯುವನ್ನೂ, ಕುಬೇರನನ್ನೂ, ಶಂಕರನನ್ನೂ, ಬ್ರಹ್ಮನನ್ನೂ, ಭೂಪತಿಯಾದ ವಿಷ್ಣುವನ್ನೂ, ಸಪ್ತಋಷಿಗಳನ್ನೂ, ಸೂರ್ಯನನ್ನೂ, ಗಂಗೆಯನ್ನೂ, ಕಾವೇರಿಯನ್ನೂ, ಕನ್ನಿಕೆಯನ್ನೂ, ಬ್ರಾಹ್ಮಣರನ್ನೂ ನಮಸ್ಕರಿಸಿ ವಸ್ತ್ರವನ್ನುಟ್ಟುಕೊಂಡು ಕಾವೇರಿ ನದಿಯನ್ನು ಪ್ರವೇಶಿಸಬೇಕು. ನಾರಾಯಣನನ್ನು ಧ್ಯಾನಿಸುತ್ತ ನಿಯಮದಿಂದ ಸ್ನಾನ ಮಾಡಬೇಕು. ಬುದ್ಧಿವಂತನಾದವನು ದೇವತೆಗಳನ್ನೂ, ಋಷಿಗಳನ್ನೂ, ಪಿತೃಗಳನ್ನೂ, ದ್ವಿಜರನ್ನೂ ಭಕ್ತಿಯಿಂದ ದ್ರವ್ಯಗಳೊಂದಿಗೆ ತೃಪ್ತಿಪಡಿಸಬೇಕು. ನದಿಯ ದಡದಲ್ಲಿ ಕ್ಷೇತ್ರಪಿಂಡಪ್ರದಾನವನ್ನು ಮಾಡಬೇಕು. ಈ ರೀತಿ ಸ್ನಾನದಿಂದ ಸಂದೇಹವಿಲ್ಲದೆ ಪಾಪಗಳು ನಾಶವಾಗುವವು. ಋಷಿಗಳೂ, ದೇವತೆಗಳೂ, ಪಿತೃಗಳೂ ತರ್ಪಣದಿಂದ ತೃಪ್ತರಾಗುವರು.

(ನವಮೋಧ್ಯಾಯ ಮುಂದುವರಿಯು ವದು. ಕೃಪೆ: ಶ್ರೀ ಸ್ಕಾಂದ ಪುರಾಣಾಂತರ್ಗತ ಶ್ರೀ ಕಾವೇರೀ ಮಾಹಾತ್ಮೈ. ಅನುವಾದಕರು: ದಿ.ಟಿ.ಪಿ ನಾರಾಯಣಾಚಾರ್ಯರು)