ಮುಳ್ಳೂರು, ಜೂ. 19: ಕೊಡಗು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಜಿಲ್ಲಾ ಮಕ್ಕಳ ಸಹಾಯವಾಣಿ ಕೇಂದ್ರ ಮತ್ತು ನಿಡ್ತ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಹಾರೆಹೊಸೂರು ಗಿರಿಜನ ಹಾಡಿಯಲ್ಲಿ ಹಾಡಿ ನಿವಾಸಿಗಳಿಗೆ ಕೋವಿಡ್-19 ಸೋಂಕಿನ ಅರಿವು, ಬಾಲ ಕಾರ್ಮಿಕ ವಿರೋಧಿ ಮತ್ತು ಬಾಲ್ಯ ವಿವಾಹ ವಿರೋಧಿ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಬಾಲ ಕಾರ್ಮಿಕ ಮತ್ತು ಬಾಲ್ಯ ವಿವಾಹ ವಿರೋಧಿ ಕಾಯ್ದೆ ಕುರಿತು ಮಕ್ಕಳ ಸಹಾಯವಾಣಿ ಕೇಂದ್ರದ ಸೋಮವಾರಪೇಟೆ ತಾಲೂಕು ಕಾರ್ಯಕರ್ತೆ ಬಿ.ಕೆ. ಕುಮಾರಿ ಮಾಹಿತಿ ನೀಡಿ, ಬಾಲ ಕಾರ್ಮಿಕರನ್ನು ಮಾಲೀಕರು ದುಡಿಸಿಕೊಳ್ಳಬಾರದು. 14 ವರ್ಷದೊಳಗಿನ ಮಕ್ಕಳನ್ನು ದುಡಿಸಿಕೊಳ್ಳುವುದು ಅಪರಾಧವಾಗುತ್ತದೆ. ಸರಕಾರ ಬಾಲ ಕಾರ್ಮಿಕ ಪದ್ಧತಿ ತಡೆಯಲು ಬಾಲ ಕಾರ್ಮಿಕ ವಿರೋಧಿ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ ಎಂದರು. ಬಾಲ್ಯ ವಿವಾಹ ಮಾಡುವುದು ಕಾನೂನಿನಲ್ಲಿ ಅಪರಾಧವಾಗುತ್ತದೆ. 18 ವರ್ಷದೊಳಗಿನ ಬಾಲಕಿಗೆ ಮತ್ತು 21 ವರ್ಷದೊಳಗಿನ ಬಾಲಕರಿಗೆ ವಿವಾಹ ಮಾಡುವುದು ಅಪರಾಧವಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ಬಾಲ್ಯ ವಿವಾಹ ನಿರ್ಮೂಲನೆ ಮಾಡುವ ಸಲುವಾಗಿ ಬಾಲ್ಯ ವಿವಾಹ ವಿರೋಧಿ ಕಾಯ್ದೆಯನ್ನು ಜಾರಿಗೊಳಿಸಿದ್ದು ಈ ದಿಸೆಯಲ್ಲಿ ಪೋಷಕರು ಜಾಗೃತಗೊಂಡು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ರೂಪಿಸುವಂತೆ ಸಲಹೆ ನೀಡಿದರು.
ಕೋವಿಡ್-19 ಸೋಂಕು ಹರಡುವಿಕೆ, ಮಾಸ್ಕ್ ಧರಿಸುವ ಉದ್ದೇಶ, ವ್ಯಕ್ತಿಗತ ಮತ್ತು ಸಾಮಾಜಿಕ ಅಂತರದಿಂದ ಕೊರೊನಾ ತಡೆಗಟ್ಟುವ ಕುರಿತು ಆಶಾ ಕಾರ್ಯಕರ್ತೆ ಬಿ.ಎಸ್. ಪಾರ್ವತಿ ಮಾಹಿತಿ ನೀಡಿದರು. ಹಾರೆ ಹೊಸೂರು ಸ.ಪ್ರಾ. ಶಾಲೆಯ ಶಿಕ್ಷಕ ಸುಂದರ್, ಮಕ್ಕಳ ಸಹಾಯವಾಣಿ ಕೇಂದ್ರದ ತಾಲೂಕು ಕಾರ್ಯಕರ್ತ ಯೋಗೇಶ್, ಅಂಗನವಾಡಿ ಶಿಕ್ಷಕಿ ವರ ಮುಂತಾದವರಿದ್ದರು.
- ಭಾಸ್ಕರ್‍ಸುಂಟಿಕೊಪ್ಪ: ಜಿಲ್ಲಾಡಳಿತ, ಜಿ. ಪಂ., ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಆಶ್ರಯದಲ್ಲಿ ‘ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ’ ಅಂಗವಾಗಿ ವಾಹನ ನಿಲ್ದಾಣದಲ್ಲಿ ಹೋಬಳಿ ವ್ಯಾಪ್ತಿಯ ಸಂಚಾರದ ‘ಜನಜಾಗೃತಿ’ ವಾಹನಕ್ಕೆ ಪಿಡಿಓ ವೇಣುಗೋಪಾಲ್ ಮತ್ತು ಕಸಾಪ ಹೋಬಳಿ ಅಧ್ಯಕ್ಷ ಎಂ.ಎಸ್. ಸುನಿಲ್ ಚಾಲನೆ ನೀಡಿದರು. ನಂತರ ಮಾತನಾಡಿದ ಕಾರ್ಮಿಕ ಇಲಾಖೆಯ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಸಿರಾಜ್ ಆಹ್ಮದ್, ಮಡಿಕೇರಿಯ ಜಿಲ್ಲಾಡಳಿತ ಭವನದ ಆವರಣದಲ್ಲಿ 10 ದಿನಗಳ ಜಾಗೃತಿ ಜಾಥಾಕ್ಕೆ ಚಾಲನೆ ದೊರಕಿದೆ. ಈ ಜಾಗೃತಿ ವಾಹನ ಕೊಡಗಿನಾದ್ಯಂತ ಸಂಚರಿಸುತ್ತದೆ. ಬಾಲ್ಯವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರ ಪದ್ಧತಿಯು ಮಕ್ಕಳನ್ನು ದೈಹಿಕವಾಗಿ, ಮಾನಸಿಕವಾಗಿ, ನೈತಿಕವಾಗಿ ಶೋಷಣೆಗೆ ಒಳಪಡಿಸಿ ಅವರ ಶಿಕ್ಷಣಕ್ಕೆ ಅಡ್ಡಿ ಉಂಟಾಗುತ್ತದೆ. ಅಲ್ಲದೇ ಅಪಾಯಕಾರಿ ಉದ್ದಿಮೆಗಳಲ್ಲಿ ನೇಮಿಸಿಕೊಳ್ಳದಂತೆ ಜಾಗೃತಿ ಮೂಡಿಸಲಾಗು ವುದು. ಮುಂದಿನ ದಿನಗಳಲ್ಲಿ ಬಾಲ ಕಾರ್ಮಿಕರನ್ನು ಬಳಸಿಕೊಂಡಾಗ ದಿಢೀರನೇ ದಾಳಿ ನಡೆಸಿದಾಗ ಅಂತಹ ಮಾಲೀಕರ ಮೇಲೆ ಕಾನೂನು ಕ್ರಮ ಮತ್ತು ದಂಡ ವಿಧಿಸಲಾಗುವುದು ಎಂದರು. ಸುಂಟಿಕೊಪ್ಪ ಗ್ರಾ.ಪಂ. ಪಿಡಿಒ ವೇಣುಗೋಪಾಲ್, ಸಿಬ್ಬಂದಿಗಳಾದ ಪುನಿತ್, ಮಂದಣ್ಣ ಇದ್ದರು.ಕೊಡಗರಹಳ್ಳಿ: ಕೊಡಗರಹಳ್ಳಿ ಗಾ.ಪಂ. ವ್ಯಾಪ್ತಿಯಲ್ಲಿ ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ ಜಿಲ್ಲಾ ಬಾಲ ಕಾರ್ಮಿಕ ಯೋಜನೆ ಸೊಸೈಟಿ ಇವರ ಆಶ್ರಯದಲ್ಲಿ ಬಾಲ ಕಾರ್ಮಿಕ ನಿಷೇಧ ನಿಯಂತ್ರಣ ಸಂಬಂಧ ರಥ ಜಾಥಾಕ್ಕೆ ಚಾಲನೆ ನೀಡಲಾಯಿತು. ಆರ್. ಶಿರಾಜ್ ಅಹ್ಮದ್ ಯೋಜನೆ ನಿರ್ದೇಶಕರು ಜಿಲ್ಲಾ ಬಾಲ ಕಾರ್ಮಿಕ ಯೋಜನೆ ಸೊಸೈಟಿ (ಕಾರ್ಮಿಕ ಇಲಾಖೆ), ಗ್ರಾ.ಪಂ.ಕಾರ್ಯದರ್ಶಿ ಪಿ.ಕೆ. ಸುಕುಮಾರ ಹಾಗೂ ಸ.ಹಿ.ಪ್ರಾ. ಶಾಲೆಯ ಶಿಕ್ಷಕಿ ವಿಜಯಲಕ್ಷ್ಮೀ, ಸುನಿತಾ, ಆರೋಗ್ಯ ಕಾರ್ಯಕರ್ತೆ, ಗ್ರಾಮ ಪಂಚಾಯಿತಿ ಸಿಬ್ಬಂದಿ ಅಣ್ಣಪ್ಪ, ಧನಂಜಯ, ಶ್ರುತಿ, ಸ.ಹಿ.ಪ್ರಾ. ಶಾಲೆಯ ಶಿಕ್ಷಕಿಯರಾದ ಭಾಗಿರಥಿ, ಸುಮಾ, ಯಶೋದ, ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಶಿಕ್ಷಕ ದಿನೇಶ್ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.