ಮಡಿಕೇರಿ, ಜೂ.19 : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಇವರ ವತಿಯಿಂದ ಶುಕ್ರವಾರ ಸೋಮವಾರ ಪೇಟೆಯ ಪ್ರಮುಖ ಬೀದಿಗಳಲ್ಲಿ ವಿವಿಧ ತಂಬಾಕಿನ ಅಂಗಡಿಗಳು ಪಾನ್ ಶಾಪ್, ಹೋಟೆಲ್, ಕಿರಾಣಿ ಅಂಗಡಿಗಳ ಮೇಲೆ ಕೋಟ್ಪಾ 2003ರ ದಾಳಿ ನಡೆಸಲಾಯಿತು.

ಹೊಟೇಲ್, ಬಾರ್, ಅಂಗಡಿ ಮತ್ತು ಪಾನ್‍ಶಾಪ್‍ಗಳಲ್ಲಿ ಕೋವಿಡ್ ವೈರಸ್ ಹರಡುವುದಕ್ಕೆ ಪ್ರಮುಖ ಕಾರಣವಾದ ಜಗಿಯುವ ತಂಬಾಕಿನ ಪದಾರ್ಥಗಳನ್ನು ಮಾರಾಟ ಮಾಡದಂತೆ ಸೂಚನೆ ನೀಡಲಾಯಿತು. ಸೆಕ್ಷನ್ 4 (60*45) ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ನಿಷೇಧಿಸಲಾಗಿದೆ. ಅಂಗಡಿಗಳಲ್ಲಿ ತಂಬಾಕು ಉತ್ಪನ್ನ ಹಾಗೂ ಗುಟ್ಕಾ ಪ್ಯಾಕೆಟ್‍ಗಳನ್ನು ಬಹಿರಂಗವಾಗಿ ಪ್ರದರ್ಶಿಸಿ ಮಾರಾಟ ಮಾಡುತ್ತಿರುವುದು( ಸೆಕ್ಷನ್ 5) ಕಂಡುಬಂದು ಇದಕ್ಕೆ ಕಡಿವಾಣ ಹಾಕಲು ಅಂಗಡಿಗಳ ಮಾಲೀಕರಿಗೆ ಎಚ್ಚರಿಕೆ ನೀಡಿ ನೋಟೀಸ್ ಜಾರಿ ಮಾಡಲಾಗಿದೆ ಮತ್ತು ಕಾನೂನು ಉಲ್ಲಂಘನೆ ಮಾಡಿದವರ ವಿರುದ್ದ ದಂಡ ವಿಧಿಸಲಾಯಿತು. ಮತ್ತು 18 ವಯಸ್ಸಿನ ಒಳಗಿನ ಮಕ್ಕಳು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಅಪರಾಧ (ಸೆಕ್ಷನ್ 6ಎ) ಬಗ್ಗೆ ನಾಮಫಲಕ ಹಾಕುವುದು ಕಡ್ಡಾಯವಾಗಿದೆ.

ಈ ದಾಳಿಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ.ಎಂ.ಶಿವಕುಮಾರ್ ಹಾಗೂ ಎಂಟಮಾಲಜಿಸ್ಟ್ ಮಂಜುನಾಥ್, ಜಿಲ್ಲಾ ಸಲಹೆಗಾರರಾದ ಕುಮಾರಿ ಪುನೀತ ರಾಣಿ, ಸಮಾಜ ಕಾರ್ಯಕರ್ತರು ಮಂಜುನಾಥ್ ಆರ್., ಹಿರಿಯ ಪುರುಷ ಆರೋಗ್ಯ ಸಹಾಯಕ ಮಹೇಶ್, ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆಯವರು ಭಾಗವಹಿಸಿದ್ದರು.