ಮಡಿಕೇರಿ, ಜೂ. 19: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರು ಮಳೆ ಆರಂಭಗೊಂಡಿದ್ದರೂ ವಾಡಿಕೆ ರೀತಿಯಲ್ಲಿ ಈ ಹಿಂದಿನ ವರ್ಷಗಳಂತೆ ಸದ್ಯದಮಟ್ಟಿಗೆ ಮಳೆಯ ರಭಸ ಹೆಚ್ಚು ಕಂಡುಬಂದಿಲ್ಲ. ಕೆಲವು ದಿನಗಳಿಂದ ಜಿಲ್ಲೆಯ ಅಲ್ಲಲ್ಲೀ ಭಾರೀ ಮಳೆ ಸುರಿದಿದೆಯಾದರೂ ನಿರಂತರವಾಗಿ ಮಳೆ ಸುರಿಯುವ ರೀತಿಯ ಚಿತ್ರಣ ಆರಂಭವಾಗಿಲ್ಲ. ಜಿಲ್ಲೆಯಾದ್ಯಂತ ಮೊಡ ಕವಿದ ವಾತಾವರಣವಿದ್ದು, ಒಮ್ಮೊಮ್ಮೆ ಮಾತ್ರ ಬಿರುಮಳೆಯಾಗುತ್ತಿದೆ. ಕೆಲವೆಡೆ ಜೂನ್ ತಿಂಗಳು ಆರಂಭಗೊಂಡ ಬಳಿಕ ಸುರಿದಿರುವ ಮಳೆಗಿಂತಲೂ ಬೇಸಿಗೆಯ ಅವಧಿಯಲ್ಲಿ ಸುರಿದಿರುವ ಮಳೆಯ ಪ್ರಮಾಣ ತುಸು ಹೆಚ್ಚಾಗಿದೆ ಎನ್ನಬಹುದು.
ಪ್ರಸಕ್ತ ವರ್ಷ ಜಿಲ್ಲೆಗೆ ಜನವರಿಯಿಂದ ಈತನಕ ಸರಾಸರಿ 9.47 ಇಂಚು ಮಳೆಯಾಗಿದ್ದರೆ ಕಳೆದ ವರ್ಷ ಇದೇ ಅವಧಿಯಲ್ಲಿ 6.21 ಇಂಚು ಮಳೆಯಾಗಿತ್ತು. ಮಡಿಕೇರಿ ತಾಲೂಕಿಗೆ ಜನವರಿಯಿಂದ ಈತನಕ 14.44 ಇಂಚು ಹಾಗೂ ಕಳೆದ ವರ್ಷ 8.26 ಇಂಚು ಮಳೆಯಾಗಿದ್ದರೆ, ವೀರಾಜಪೇಟೆ ತಾಲೂಕಿಗೆ ಈ ಬಾರಿ 8.61 ಇಂಚು ಹಾಗೂ ಕಳೆದ ವರ್ಷ ಈತನಕ ಸರಾಸರಿ 7.35 ಇಂಚು ಮಳೆಯಾಗಿತ್ತು.
ಸೋಮವಾರಪೇಟೆ ತಾಲೂಕಿಗೆ ಜನವರಿಯಿಂದ ಈ ತನಕ 5.36 ಇಂಚು ಸರಾಸರಿ ಮಳೆಯಾಗಿದ್ದರೆ ಕಳೆದ ವರ್ಷ ಇದೇ ಅವಧಿಯಲ್ಲಿ 3.02 ಇಂಚು ಮಳೆ ಬಿದ್ದಿತ್ತು. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಭಾಗಮಂಡಲ ಹೋಬಳಿಯಲ್ಲಿ 0.90 ಇಂಚು, ಹುದಿಕೇರಿ 1.49 ಇಂಚು ಮಳೆಯಾಗಿದ್ದರೆ, ಇತರ ಹೋಬಳಿಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಾತ್ರ ಮಳೆ ಸುರಿದಿದೆ.