ಸುಂಟಿಕೊಪ್ಪ,ಜೂ.19: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಜ್ಜಳ್ಳಿ ಕೃಷಿಕರ ಬದುಕು ಹೈರಾಣಾಗಿದ್ದು ನಿತ್ಯ ಕಾಡಾನೆ ಉಪಟಳದಿಂದ ಕಾಫಿ ತೆಂಗು ಬಾಳೆ ಗಿಡಗಳು ನಾಶವಾಗುತ್ತಿದೆ ಅರಣ್ಯ ಇಲಾಖೆಯಿಂದ ಯಾವುದೇ ಪರಿಹಾರ ದೊರಕುತ್ತಿಲ್ಲವೆಂದು ನೊಂದ ಕೃಷಿಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಳೆಗಾಲ ಆರಂಭವಾಯಿತೆಂದರೆ 20 ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಈ ವಿಭಾಗದ ಚೆರಿಯಮನೆ ರಾಮಪ್ಪ, ಮುಕ್ಕಾಟಿ ಗಣೇಶ, ನಂದ, ಬಗ್ಗನ ಹರೀಶ, ಗುತ್ಯಾಡಿ ಗಣೇಶ, ನಾರೂರು ಅಪ್ಪಚ್ಚು ಹಾಗೂ ಬೈತಡ್ಕ ಕುಟುಂಬದ ಕಾಫಿ ತೋಟಗಳಿಗೆ ಲಗ್ಗೆಯಿಟ್ಟು ಗಿಡಗಳನ್ನು ನಾಶಪಡಿಸುತ್ತಿದೆ.

ಸಜ್ಜಳ್ಳಿಯಲ್ಲಿ ಅರಣ್ಯ ಇಲಾಖೆಯಿಂದ ಅರಣ್ಯ ಸಿಬ್ಬಂದಿ ರಾತ್ರಿವೇಳೆ ತಂಗಿ ಕಾಡಾನೆಗಳನ್ನು ಕಾಡಿಗೆ ಆಟ್ಟಲು ಶೇಡ್ ನಿರ್ಮಿಸಲಾಗಿದೆ. ಆದರೆ ರಾತ್ರಿ ಹಾಗೂ ಹಗಲಿನ ವೇಳೆಯಲ್ಲಿ ಅರಣ್ಯ ಸಿಬ್ಬಂದಿ ತಲೆ ಹಾಕುವುದೇ ಇಲ್ಲ. ಇಲಾಖೆಯಿಂದ ಸಾವಿರಾರು ರೂ ವೆಚ್ಚದಲ್ಲಿ ನಿರ್ಮಿಸಲಾದ ಶೇಡ್ ಅನಾಥವಾಗಿ ನಿಂತಿದೆ. ಸೋಲಾರ್ ದೀಪಗಳನ್ನು ಅಳವಡಿಸಲಾಗಿದ್ದು ಅವುಗಳು ಕೆಟ್ಟು ತಿಂಗಳುಗಳೇ ಕಳೆದಿದೆ ಈ ಬಗ್ಗೆ ಹಲವು ಬಾರಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಇತ್ತ ತಿರುಗಿಯೂ ನೋಡುತ್ತಿಲ್ಲವೆಂದು ಚೆರಿಯಮನೆ ರಾಮಪ್ಪ ತಿಳಿಸಿದ್ದಾರೆ. ಕಾಡಾನೆ ಧಾಳಿಯಿಂದ ಬೆಳೆ ನಷ್ಟದ ಬಗ್ಗೆ ಅರ್ಜಿ ಸಲ್ಲಿಸಿದ್ದರೂ ಆನೆಯ ಹೊಟ್ಟೆಗೆ ಆರೆಕಾಸಿನ ಮಜ್ಜಿಗೆಯಂತೆಯಾಗಿದೆ. ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.