ವೀರಾಜಪೇಟೆ, ಜೂ. 18: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಇಂದು ಲೋಕಾಯುಕ್ತ ತಂಡ ಭೇಟಿ ನೀಡಿ ಮನೆ ಕಂದಾಯಕ್ಕೆ ಸೇರಿದಂತೆ ಇತರ ಕಡತಗಳನ್ನು ಪರಿಶೀಲನೆ ನಡೆಸಿತು.
ಇಲ್ಲಿನ ಸುಭಾಶ್ನಗರ ಬಡಾವಣೆಯ ಅಕ್ಬರ್ ಎಂಬವರು ಪಟ್ಟಣ ಪಂಚಾಯಿತಿ ಕಂದಾಯ ಅಧಿಕಾರಿಯ ಮೇಲೆ ನೀಡಿದ ದೂರಿನ ಮೇರೆ ಮಡಿಕೇರಿಯ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ ಕಂದಾಯ ಅಧಿಕಾರಿ ಸೋಮೇಶ್ರನ್ನು ವಿಚಾರಣೆ ನಡೆಸಿದರು.
ಪಂಜರ್ಪೇಟೆಯಲ್ಲಿರುವ ಅಫ್ಜಲ್ ಹಾಗೂ ಅಕ್ಬರ್ ಎಂಬವರ ಎರಡು ಮನೆಗಳಿಗೆ ವಿದ್ಯುತ್ ಸಂಪರ್ಕಕ್ಕೆ ಆಕ್ಷೇಪಣೆ ರಹಿತ ದೃಢೀಕರಣ ಪತ್ರ ಪಡೆಯಲು ಕಂದಾಯ ಪರಿವೀಕ್ಷಕ ಸೋಮೇಶ್ ಎರಡು ವರ್ಷಗಳಿಂದ ಸತಾವಣೆ ಮಾಡುತ್ತಿದ್ದರು. ಎರಡು ಅಂತಸ್ತಿನ ಕಟ್ಟಡ ಕಟ್ಟಲು ಸಂಬಂಧಿಸಿದ ಇಲಾಖೆಯಿಂದ ಅಧಿಕೃತ ಪರವಾನಗಿ ಪಡೆದಿದ್ದರೂ ಇದನ್ನು ಲೆಕ್ಕಿಸದ ಕಂದಾಯ ಅಧಿಕಾರಿ ಮನೆಗಳಿಗೆ ದುಪ್ಪಟ್ಟು ತೆರಿಗೆ ವಿಧಿಸಿದ್ದರೂ ವಿದ್ಯುತ್ ಸಂಪರ್ಕ ಪಡೆಯಲು ಆಕ್ಷೇಪಣೆ ಇಲ್ಲ ಎಂಬ ಪತ್ರ ನೀಡುತ್ತಿಲ್ಲ. ಇದರ ಕುರಿತು ಲೋಕಾಯುಕ್ತ ಅಧಿಕಾರಿಗಳು ಸೂಕ್ತ ತನಿಖೆ ನಡೆಸುವಂತೆ ಇಲಾಖೆಗೆ ದೂರು ನೀಡಲಾಗಿತ್ತು.
ಅಧಿಕಾರಿಯನ್ನು ತನಿಖೆ ನಡೆಸಿದ ಇಲಾಖೆಯ ಸರ್ಕಲ್ ಇನ್ಸ್ಪೆಕ್ಟರ್ ಸುಬ್ರಮಣಿ ಅವರು ದೂರುದಾರರು ನೀಡುವ ದಾಖಲೆಗಳ ಆಧಾರದ
ಮೇಲೆ ಮುಂದೆ ಕೂಲಂಕುಶವಾಗಿ ತನಿಖೆ ಹಾಗೂ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಫ್ಜಲ್ ಹಾಗೂ ಅಕ್ಬರ್ ಅವರು ಆಧಾರ ದಾಖಲೆ ಸಮೇತ ಮತ್ತೊಂದು ದೂರನ್ನು ಲೋಕಾಯುಕ್ತಕ್ಕೆ ತಕ್ಷಣ ಸಲ್ಲಿಸುವಂತೆ ಸೂಚಿಸಲಾಯಿತು.
ವೀರಾಜಪೇಟೆಗೆ ಭೇಟಿ ನೀಡಿದ ಮಡಿಕೇರಿಯ ಲೋಕಾಯುಕ್ತ ತಂಡ ಮೊದಲು ಇಲ್ಲಿನ ತಾಲೂಕು ಕಚೇರಿಗೆ ಭೇಟಿ ನೀಡಿ ಭೂ ಹಿಡುವಳಿಗೆ ಸಂಬಂಧಿಸಿದಂತೆ ಎರಡು ದೂರುಗಳನ್ನು ಸ್ವೀಕರಿಸಿದ ನಂತರ ಪಟ್ಟಣ ಪಂಚಾಯಿತಿಗೆ ಭೇಟಿ ನೀಡಿ ವಿಚಾರಣೆ ನಡೆಸಿತು.