ಗೋಣಿಕೊಪ್ಪ ವರದಿ, ಜೂ. 18: ಕರ್ನಾಟಕ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿಗೆ ಮುಂದಾಗಿರುವ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿ ತಾ. 20 ರಂದು ಜಿಲ್ಲಾ ಕೇಂದ್ರ ಮಡಿಕೇರಿ ಯಲ್ಲಿ ಹೆದ್ದಾರಿ ತಡೆ ನಡೆಸಲಾಗುವುದು ಎಂದು ಸಾಮೂಹಿಕ ನಾಯಕತ್ವದ ರೈತ ಸಂಘ-ಹಸಿರು ಸೇನೆ ಜಿಲ್ಲಾಧ್ಯಕ್ಷ ಚಿಮ್ಮಂಗಡ ಗಣೇಶ್ ತಿಳಿಸಿದ್ದಾರೆ.

ರಾಜ್ಯದ ಎಲ್ಲಾ ಕೇಂದ್ರಗಳಲ್ಲೂ ಹೆದ್ದಾರಿ ತಡೆ ನಡೆಯುತ್ತಿದೆ. ಇದರಂತೆ ಅಂದು ಬೆ. 11 ಗಂಟೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಹೆದ್ದಾರಿ ತಡೆ ಚಳವಳಿ ನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೊಡಗು ದಕ್ಷಿಣ ಭಾರತಕ್ಕೆ ಜಲಮೂಲ ಕೇಂದ್ರವಾಗಿದೆ. ಇಲ್ಲಿನ ಜೀವವೈವಿಧ್ಯತೆ, ಆಹಾರ ಉತ್ಪಾದನೆಗೆ ಇಂತಹ ಕಾಯ್ದೆಯಿಂದ ದಕ್ಕೆಯಾಗಲಿದ್ದು, ಕೊಡಗು ಜಿಲ್ಲಾ ಮಟ್ಟಕ್ಕೆ ಇದನ್ನು ತಡೆಹಿಡಿಯಬೇಕು ಎಂದು ಒತ್ತಾಯಿಸಲಾಗುವುದು ಎಂದರು.

1961 ಭೂಸುಧಾರಣೆ ಕಾಯ್ದೆಯ 79 ಎಬಿಸಿ ಮತ್ತು 80 ನೇ ಕಲಂ ನಿಯಮದಿಂದ ಕೃಷಿ ಭೂಮಿಯನ್ನು ರೈತರಲ್ಲದವರಿಗೆ ಮಾರಾಟ ಮಾಡಲು ಅವಕಾಶವಿರಲಿಲ್ಲ. ಇದರಿಂದ ಕೃಷಿ ಭೂಮಿ ಕೃಷಿಗೆ ಮಾತ್ರ ಬಳಕೆಯಾ ಗುವಂತಿತ್ತು. ಅದರೆ, ಮಸೂದೆ ತಿದ್ದುಪಡಿಯಿಂದ ಹೆಚ್ಚು ಆದಾಯಕ್ಕೆ ಅನುಗುಣವಾಗಿ ಭೂಮಿ ದುರ್ಬಳಕೆ ಮಾಡುವವರಿಗೆ ಹಾಗೂ ಕೈಗಾರಿಕೋದ್ಯಮಿಗಳಿಗೆ ಕೃಷಿ ಭೂಮಿ ಕಬಳಿಕೆಯಾಗುವಂತೆ ಆಗಿದೆ ಎಂದರು.

ಸಣ್ಣ ರೈತಾಪಿಗಳ ಒಕ್ಕಲುತನವನ್ನು ರಕ್ಷಿಸುವ ಹಾಗೂ ಸಣ್ಣಪುಟ್ಟ ಹಿಡುವಳಿದಾರರ ಅಸಹಾಯಕತೆ ಯನ್ನು ಹಣ ಉಳ್ಳವರು ಕೈಗಾರಿ ಕೋದ್ಯಮಿಗಳು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕೊಡಗು ಜಿಲ್ಲೆಯನ್ನು ಹೊರತುಪಡಿಸಿ ಮಸೂದೆಯನ್ನು ಜಾರಿಗೆ ತರಲಿ ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಪ್ರ. ಕಾರ್ಯದರ್ಶಿ ಕಳ್ಳಿಚಂಡ ಧನು, ಖಜಾಂಜಿ ಚಂಗುಲಂಡ ರಾಜಪ್ಪ ಇದ್ದರು.