ಸಿದ್ದಾಪುರ, ಜೂ. 18: ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವಲ್ಲಿ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಆದರೆ ಕಾಡಾನೆಗಳ ಹಿಂಡಿನ ಪೈಕಿ ಕೆಲವು ಮರಿ ಆನೆಗಳು ಕಾಫಿ ತೋಟ ಗಳಲ್ಲಿ ಉಳಿದುಕೊಂಡಿದ್ದು, ಕಾಡಿಗೆ ತೆರಳಲು ಹಿಂದೇಟು ಹಾಕಿರುವ ಪ್ರಸಂಗ ನಡೆದಿದೆ. ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಮೀನುಕೊಲ್ಲಿ ವಲಯದ ಅಭ್ಯತ್ ಮಂಗಲ, ವಾಲ್ನೂರು ತ್ಯಾಗತ್ತೂರು, ನೆಲ್ಯಹುದಿಕೇರಿ, ಅತ್ತಿಮಂಗಲ, ಅರೆಕಾಡು, ಭಾಗದ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಕೃಷಿ ಫಸಲುಗಳನ್ನು ನಾಶಪಡಿಸಿ ದಾಂಧಲೆ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಕಾಫಿ ತೋಟ ಗಳಲ್ಲಿ ಬೀಡುಬಿಟ್ಟಿರುವ ಕಾಡಾನೆ ಗಳನ್ನು ಅರಣ್ಯಕ್ಕೆ ಅಟ್ಟುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಕುಶಾಲನಗರ ಉಪವಲ ಯಾರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ (ಮೊದಲ ಪುಟದಿಂದ) ನೇತೃತ್ವದಲ್ಲಿ ಬುಧವಾರದಂದು ಕಾಡಾನೆಗಳನ್ನು ಕಾರ್ಯಾಚರಣೆ ಮಾಡುವ ಮೂಲಕ ಪಟಾಕಿ ಸಿಡಿಸಿ ಅರಣ್ಯಕ್ಕೆ ಅಟ್ಟಲು ಹರಸಾಹಸ ಪಟ್ಟರು. ಆದರೆ ಕಾಡಾನೆಗಳು ಕಾಡಿಗೆ ತೆರಳಲು ಹಿಂದೇಟು ಹಾಕಿದವು. ಅಲ್ಲದೇ ತೋಟದೊಳಗೆ ಸುತ್ತಾಡುತ್ತಾ ತೋಟದ ಒಳಗಿನಿಂದ ಕದಲದೇ ಅರಣ್ಯದತ್ತ ತೆರಳದೇ ಅರಣ್ಯ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಗಳನ್ನು ಸುತ್ತಾಡಿಸಿದವು. ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಆನೆಗಳ ಹಿಂಡುಗಳ ಪೈಕಿ 2 ಗುಂಪುಗಳಾಗಿ ಚದುರಿ ಹೋಗಿದ್ದವು. ನಂತರ ಕಾಡಿಗೆ ಓಡಿಸಲು ಪ್ರಯತ್ನಿಸಿದರೂ ಕೂಡ ಕಾಡಾನೆಗಳು ಹಿಂತಿರುಗಿ ತೋಟದಲ್ಲಿ ಬೀಡುಬಿಟ್ಟಿದ್ದವು. ಈ ಹಿನ್ನೆಲೆಯಲ್ಲಿ ಗುರುವಾರದಂದು ಬೆಳಗ್ಗಿನಿಂದಲೇ ಕಾಡಾನೆಗಳ ಹಿಂಡುಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಸಲಾಯಿತು. ಈಗಾಗಲೇ ಕಾಡಾನೆಗಳ ಹಿಂಡುಗಳು ಬೇರೆ ಬೇರೆ ಗುಂಪುಗಳಾಗಿದ್ದು, ಗುಂಪುಗಳ ಪೈಕಿ ಒಂದು ಗುಂಪಿನಲ್ಲಿದ್ದ 12ಕ್ಕೂ ಅಧಿಕ ಕಾಡಾನೆಗಳನ್ನು ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಟಾಕಿ ಸಿಡಿಸಿ ಹರಸಾಹಸಪಟ್ಟು ದುಬಾರೆಯ ಅರಣ್ಯ ಪ್ರದೇಶಕ್ಕೆ ಕಾವೇರಿ ನದಿಯ ಮೂಲಕ ಅಟ್ಟಿಸಲಾಯಿತು.

ಕಾಡಾನೆಗಳು ಕಾವೇರಿ ನದಿ ದಾಟಿ ದುಬಾರೆ ಮೀಸಲು ಅರಣ್ಯಕ್ಕೆ ತೆರಳಿದವು. ಆದರೆ ಗುಂಪಿನಲ್ಲಿದ್ದ ಮರಿ ಆನೆಗಳು ತೋಟ ಬಿಟ್ಟು ತೆರಳಲು ಹಿಂದೇಟು ಹಾಕಿದವು. ಇದರಿಂದಾಗಿ ಮತ್ತೆ ರಾತ್ರಿ ಸಮಯದಲ್ಲಿ ದೊಡ್ಡ ಆನೆಗಳು ಮರಳಿ ಕಾಫಿ ತೋಟಗಳಿಗೆ ಲಗ್ಗೆಯಿಡುವ ಸಾಧ್ಯತೆ ಇದೆ. ಇದು ಅರಣ್ಯ ಇಲಾಖಾ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಗುರುವಾರದಂದು ಕಾರ್ಯಾಚರಣೆ ಮಾಡುವ ಸಂದರ್ಭದಲ್ಲಿ ಮೂರು ಮರಿ ಆನೆಗಳು ಸೇರಿದಂತೆ ಸುಮಾರು ಕಾಡಾನೆಗಳು ಕಂಡು ಬಂದವು ಎಂದು ಉಪವಲಯಾರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ ತಿಳಿಸಿದ್ದಾರೆ. ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಿದರೂ ಕೂಡ ಮರಳಿ ಕಾಫಿ ತೋಟಕ್ಕೆ ನುಸುಳು ತ್ತಿರುವುದರಿಂದ ಕಾರ್ಮಿಕರು ಹಾಗೂ ಬೆಳೆಗಾರರು ಭಯಭೀತರಾಗಿದ್ದಾರೆ. ಕಾಡಾನೆಗಳು ರಾತ್ರಿ ಸಮಯದಲ್ಲಿ ಕಾಫಿ ತೋಟಗಳಲ್ಲಿ ಸುತ್ತಾಡುತ್ತಿರುವುದರಿಂದ ಹಾಗೂ ಮನೆಗಳ ಸುತ್ತಲಿನಲ್ಲಿ ಓಡಾಡುತ್ತಿರುವುದರಿಂದ ಸಂಜೆ ಸಮಯದಲ್ಲಿ ಮನೆಗೆ ತೆರಳುವ ಮಂದಿ ಆತಂಕಕ್ಕೆ ಸಿಲುಕುತ್ತಿದ್ದಾರೆ. ಕಾಡಾನೆ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಗ್ರಾಮಸ್ಥರು ಸರ್ಕಾರವನ್ನು ಒತ್ತಾಯಿಸಿದ್ದಾರೆ. - ವರದಿ : ವಾಸು ಎ.ಎನ್