ಉದ್ಯೋಗಕ್ಕಾಗಿ ಗರೀಬ್ ಕಲ್ಯಾಣ್ ಯೋಜನೆ
ನವದೆಹಲಿ, ಜೂ. 18: ಸುಮಾರು ರೂ. 50 ಸಾವಿರ ಕೋಟಿ ಮೌಲ್ಯದ ಗರೀಬ್ ಕಲ್ಯಾಣ್ ಯೋಜನೆಯಡಿಯಲ್ಲಿ ವಲಸೆ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಲಾಗುತ್ತಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ತಾ. 20 ರಂದು ಪ್ರಧಾನಿ ನರೇಂದ್ರ ಮೋದಿ ಅವರು, ಗರೀಬ್ ಕಲ್ಯಾಣ್ ಯೋಜನೆಗೆ ಚಾಲನೆ ನೀಡಲಿದ್ದು, ಇದೇ ವಿಚಾರವಾಗಿ ಇಂದು ಸುದ್ದಿಗೋಷ್ಠಿ ನಡೆಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಗರೀಬ್ ಕಲ್ಯಾಣ ರೋಜ್ ಗಾರ್ ಅಭಿಯಾನದಡಿಯಲ್ಲಿ ಕೇಂದ್ರ ಸರ್ಕಾರ ಸುಮಾರು ರೂ. 50 ಸಾವಿರ ಕೋಟಿ ಮೌಲ್ಯದ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಇದರಲ್ಲಿ ದೇಶದ ಸಾವಿರಾರು ವಲಸೆ ಕಾರ್ಮಿಕರಿಗೆ ಉದ್ಯೋಗ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಹಿಂದೆ ಕೊರೊನಾ ವೈರಸ್ ಲಾಕ್ಡೌನ್ನಿಂದಾಗಿ ಕೆಲಸ ಬಿಟ್ಟು ತವರು ಸೇರಿದ್ದ ಸುಮಾರು 25 ಸಾವಿರ ವಲಸೆ ಕಾರ್ಮಿಕರನ್ನು ಯೋಜನೆ ನಿಮಿತ್ತ ಆಯ್ಕೆ ಮಾಡಲಾಗಿದೆ.
3ನೇ ದಿನವೂ ಸೇನಾಧಿಕಾರಿಗಳ ಚರ್ಚೆ
ಲಡಾಖ್, ಜೂ. 18: ಈಶಾನ್ಯ ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷ ಪರಿಸ್ಥಿತಿಯನ್ನು ತಿಳಿಗೊಳಿಸಿ, ಸಹಜ ಸ್ಥಿತಿಗೆ ತರಲು ಭಾರತ-ಚೀನಾ ನಡುವೆ ಸತತ 3ನೇ ದಿನ ಸೇನಾಧಿಕಾರಿಗಳ ಮಾತುಕತೆ ನಡೆದಿದೆ. ಉಭಯ ಸೇನೆಯಲ್ಲಿರುವ ಮೇಜರ್ ಜನರಲ್ ಶ್ರೇಣಿಯ ಅಧಿಕಾರಿಗಳು ಸಭೆ ನಡೆಸಿದ್ದು ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದರ ಬಗ್ಗೆ ಚರ್ಚಿಸಿದ್ದಾರೆ. ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಸೇನೆ ನಡುವೆ ಘರ್ಷಣೆ ಉಂಟಾಗಿ ತಾ. 15 ರಂದು ಭಾರತದ ಕರ್ನಲ್ ಹಾಗೂ 19 ಯೋಧರು ಹುತಾತ್ಮರಾಗಿದ್ದರು. 18 ಯೋಧರು ತೀವ್ರವಾಗಿ ಗಾಯಗೊಂಡಿದ್ದರು. ತಾ. 16 ಹಾಗೂ 17 ರಂದು ಭಾರತ-ಚೀನಾ ನಡುವೆ ಮಾತುಕತೆ ನಡೆದಿತ್ತು. ಬುಧವಾರದಂದು ನಡೆದ ಚರ್ಚೆಯಲ್ಲಿ ಗಾಲ್ವಾನ್ ಕಣಿವೆಯಿಂದ ಸೇನಾಪಡೆಗಳನ್ನು ಹಿಂಪಡೆಯುವುದಕ್ಕೆ ಸಂಬಂಧಿಸಿದಂತೆ ಚರ್ಚಿಸಲಾಗಿತ್ತು. ನಿನ್ನೆ ಈ ಬಗ್ಗೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಭಾರತ ಶಾಂತಿ ಬಯಸುತ್ತದೆ. ಆದರೆ ಪ್ರಚೋದಿಸಿದರೆ ತಕ್ಕ ಪ್ರತಿ ಉತ್ತರ ನೀಡುವ ಶಕ್ತಿಯನ್ನೂ ಹೊಂದಿದೆ ಎಂದು ಹೇಳಿದ್ದರು.
ಯಾವ ಸೈನಿಕರೂ ಕಣ್ಮರೆಯಾಗಿಲ್ಲ
ನವದೆಹಲಿ, ಜೂ. 20: ಸೈನಿಕರ ಸಾವಿಗೆ ಕಾರಣವಾದ ಗಾಲ್ವಾನ್ ಸಂಘರ್ಷದ ಸಂದರ್ಭದಲ್ಲಿ ಭಾರತದ ಯಾವ ಸೈನಿಕರೂ ಕಣ್ಮರೆಯಾಗಿಲ್ಲ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ. ಲಡಾಖ್ನ ಗಾಲ್ವಾನ್ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರೆ, ಅತ್ತ ಚೀನಾದ 35ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದರು. ಇದೇ ಸಂದರ್ಭದಲ್ಲಿ ಚೀನಾ ಸೈನಿಕರು ಭಾರತದ 15ಕ್ಕೂ ಹೆಚ್ಚು ಸೈನಿಕರನ್ನು ಬಂಧಿಸಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು. ಈ ವಿಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನಾಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಚೀನಾ ಭಾರತ ಗಡಿಯಲ್ಲಿ ನಡೆದ ಘಟನೆಯಲ್ಲಿ ಯಾವುದೇ ಸೈನಿಕ ದಳ ಕಣ್ಮರೆಯಾಗಿಲ್ಲ. ಎಣಿಕೆ ಪ್ರಕಾರ ನಮ್ಮ ಸೈನಿಕರು ಯಾರೂ ಘಟನೆಯಲ್ಲಿ ಕಣ್ಮರೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಇನ್ನು ಇದೇ ವಿಚಾರವಾಗಿ ನಿನ್ನೆ ಮಾತನಾಡಿದ್ದ ಪ್ರಧಾನಿ ಮೋದಿ, ಭಾರತ ಶಾಂತಿಯನ್ನು ಬಯಸುತ್ತದೆ ಆದರೆ ಪ್ರಚೋದಿಸಿದಾಗ, ಯಾವುದೇ ರೀತಿಯ ಪರಿಸ್ಥಿತಿ ಇರಲಿ ಭಾರತ ಅದಕ್ಕೆ ಸೂಕ್ತ ತಿರುಗೇಟು ನೀಡಲು ಸಮರ್ಥವಾಗಿದೆ.
ಸೈನಿಕರು ನಿರಾಯುಧರಾಗಿರಲಿಲ್ಲ
ನವದೆಹಲಿ, ಜೂ. 18: ಗಾಲ್ವಾನ್ ಸಂಘರ್ಷದ ವೇಳೆ ಸೈನಿಕರು ನಿರಾಯುಧರಾಗಿರಲಿಲ್ಲ, ಶಸ್ತ್ರಸಜ್ಜಿತರಾಗಿ ಹೋಗಿದ್ದರು ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ಲಡಾಖ್ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಚೀನಾ ಸೈನಿಕರನ್ನು ಹಿಂದೆ ಕಳುಹಿಸಲು ಹೋದ ಭಾರತೀಯ ಸೈನಿಕರು ಏಕೆ ನಿರಾಯುಧರಾಗಿದ್ದರು? ಆಯುಧಗಳಿಲ್ಲದೇ ಅವರನ್ನು ಏಕೆ ಕಳುಹಿಸಿದ್ದು? ಇದಕ್ಕೆ ಯಾರು ಹೊಣೆ? ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದರು. ಲಡಾಖ್ ಗಡಿ ಭಾಗದಲ್ಲಿ ಘರ್ಷಣೆಯಾದ ಸ್ಥಳದಲ್ಲಿ ಕಾರ್ಯನಿರ್ವಹಿಸಿದ್ದ ನಿವೃತ್ತಿ ಯೋಧರೊಬ್ಬರ ಸಂದರ್ಶನವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ ‘’ನಿರಾಯುಧರಾಗಿದ್ದ ನಮ್ಮ ಸೈನಿಕರನ್ನು ಕೊಲ್ಲಲು ಚೀನಾಗೆ ಎಷ್ಟು ಧೈರ್ಯ?’’ ಎಂದು ಟೀಕಿಸಿದ್ದರು. ರಾಹುಲ್ ಗಾಂಧಿ ಅವರ ಈ ಪ್ರಶ್ನೆಗೆ ಟ್ವಿಟರ್ನಲ್ಲಿ ತಿರುಗೇಟು ನೀಡಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು, ನೇರವಾಗಿ ಮಾತನಾಡೋಣ. ಗಡಿಯಲ್ಲಿ ಕಾರ್ಯ ನಿರ್ವಹಿಸುವ ಯಾವುದೇ ಸೈನಿಕ ಕೂಡ ನಿರಾಯುಧನಾಗಿರಲು ಸಾಧ್ಯವೇ ಇಲ್ಲ. ಎಲ್ಲ ರೀತಿಯ ಪರಿಸ್ಥಿತಿ ಎದುರಿಸಲು ಸರ್ವಸನ್ನದ್ಧನಾಗಿ ಶಸ್ತ್ರಸಜ್ಜಿತನಾಗಿಯೇ ತೆರಳಿರುತ್ತಾರೆ. ಚೀನಾ ಭಾರತ ಗಡಿ ಒಪ್ಪಂದದ ಅನ್ವಯ ಎಲ್ಎಸಿಯಲ್ಲಿ ಯಾವುದೇ ಸೈನಿಕ ಫೈರ್ ಆರ್ಮ್ (ಮದ್ದು ಗುಂಡುಗಳು ಅಥವಾ ಬಂದೂಕುಗಳು)ಗಳನ್ನು ಬಳಕೆ ಮಾಡುವಂತಿಲ್ಲ. ಅಂತೆಯೇ ತಾ. 15 ರಂದೂ ಕೂಡ ಸೈನಿಕರು ನಿರಾಯುಧರಾಗಿರಲಿಲ್ಲ, ಶಸ್ತ್ರಸಜ್ಜಿತರಾಗಿದ್ದರು. ಆದರೆ ಅವುಗಳ ಬಳಕೆ ನಿಷಿದÀ್ಧವಾಗಿತ್ತು ಎಂದು ಟ್ವೀಟ್ ಮಾಡಿದ್ದಾರೆ.
ಅನಂತ್ನಾಗ್ನಲ್ಲಿ ಉಗ್ರನ ಸೆರೆ
ಜಮ್ಮು-ಕಾಶ್ಮೀರ, ಜೂ. 18: ಕೇಂದ್ರಾಡಳಿತ ಪ್ರದೇಶದ ಜಮ್ಮು-ಕಾಶ್ಮೀರದ ಅನಂತ್ನಾಗ್ ಬಳಿ ಭದ್ರತಾ ಪಡೆಗಳು ಇಂದು ಉಗ್ರನೊಬ್ಬನನ್ನು ಸೆರೆ ಹಿಡಿದಿದ್ದಾರೆ. ಇಮ್ರಾನ್ ನಬಿ ಬಂಧಿತ ಉಗ್ರನಾಗಿದ್ದಾನೆ. ಅನಂತ್ನಾಗ್ ಬಳಿ ಜಂಗ್ಲಾತ್ ಮಂಡಿ ಬಳಿ ಕಳೆದ ರಾತ್ರಿ ನಬಿಯನ್ನು ಭದ್ರತಾ ಪಡೆ ಸಿಬ್ಬಂದಿ ಬಂಧಿಸಿದ್ದು, ಆತನಿಂದ ಪಿಸ್ತೂಲ್ವೊಂದನ್ನು ವಶಪಡಿಸಿ ಕೊಂಡಿದ್ದಾರೆ. ಈ ವರ್ಷದ ಮೇ 10 ರಂದು ಮನೆಯಿಂದ ಓಡಿ ಹೋಗಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸೇರಿಕೊಂಡಿದ್ದ ಎಂದು ಭಾರತೀಯ ಸೇನೆಯ ಚೀನಾರ್ ಕಾಪ್ರ್ಸ್ ತಿಳಿಸಿದೆ. ಕುಲ್ಗಾಮ್ ನಿವಾಸಿಯಾದ ನಬಿಯನ್ನು ವಿಚಾರಣೆಗೊಳಪಡಿಸಲಾಗಿದ್ದು, ಮನೆಯಿಂದ ಏಕೆ ಹೊರಗೆ ಹೋಗಲಾಯಿತು. ಉಗ್ರ ಸಂಘಟನೆಯೊಂದಿಗೆ ಹೇಗೆ ಸಂಪರ್ಕಕ್ಕೆ ಬಂದಿದ್ದಾಗಿ ಪ್ರಶ್ನಿಸಲಾಗಿದೆ.
ಶಿಕ್ಷಣ ಸಚಿವರ ವಿರುದ್ಧವೇ ದೂರು
ಬೆಂಗಳೂರು, ಜೂ. 18: ಶಿಕ್ಷಣ ಸಚಿವ ಸುರೇಶ್ಕುಮಾರ್ ವಿರುದ್ಧ ಅಪರಾಧ ಪ್ರಕರಣ ದಾಖಲಿಸುವಂತೆ ವ್ಯಕ್ತಿಯೋರ್ವರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮತ್ತು ಕೇಂದ್ರ ವಿಭಾಗದ ಡಿಸಿಪಿ ಚೇತನ್ಸಿಂಗ್ ರಾಥೋಡ್ ಅವರಿಗೆ ಇಮೇಲ್ ಮೂಲಕ ದೂರು ನೀಡಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆ ದಿನಾಂಕ ಪ್ರಕಟಿಸಿದ ಹಿನ್ನೆಲೆ ಸಚಿವರು ವಿರುದ್ಧ ಆರ್. ಐಯ್ಯರ್ ಎಂಬವರು ದೂರು ನೀಡಿದ್ದಾರೆ. ರಾಜ್ಯದಲ್ಲಿ ಕೊರೊನಾ ವೈರಸ್ ತನ್ನ ಜಾಲ ವಿಶಾಲವಾಗಿ ಪಸರಿಸಿದೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಸಚಿವ ಸುರೇಶ್ಕುಮಾರ್ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ. ಇದರಿಂದ ವಿದ್ಯಾರ್ಥಿ ಪೋಷಕರು ಸೇರಿ ಶಿಕ್ಷಕರ ಕುಟುಂಬಗಳಿಗೆ ಕಷ್ಟವಾಗಲಿದ್ದು, ಸಾವು-ನೋವು ಸಂಭವಿಸುವ ಸಾಧ್ಯತೆ ಇದೆ. ಹೀಗಿದ್ದರೂ ಸಚಿವರು ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಆದ್ದರಿಂದ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆದರ್ಶ ಆರ್. ಐಯ್ಯರ್ ಮನವಿ ಮಾಡಿದ್ದಾರೆ.
ಒಂದೇ ದಿನ 12 ಮಂದಿ ಬಲಿ
ಬೆಂಗಳೂರು, ಜೂ. 18: ರಾಜ್ಯದಲ್ಲಿ ಕೊರೊನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಗುರುವಾರ ಒಂದೇ ದಿನ ಬರೋಬ್ಬರಿ 12 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 114ಕ್ಕೇ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು ಹೊಸದಾಗಿ 210 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 7944ಕ್ಕೇ ಏರಿಕೆಯಾಗಿದೆ. ಕಳೆದೊಂದು ದಿನದಲ್ಲಿ 179 ಮಂದಿ ಗುಣಮುಖರಾಗಿದ್ದು, ಇಲ್ಲಿಯವರೆಗೆ 4983 ಮಂದಿ ಚೇತರಿಕೆ ಕಂಡಿದ್ದಾರೆ. ಸದ್ಯ 2843 ಸಕ್ರಿಯ ಪ್ರಕರಣಗಳಿದ್ದು, 73 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಳ್ಳಾರಿಯಲ್ಲಿ 48, ಕಲಬುರಗಿಯಲ್ಲಿ 48, ದಕ್ಷಿಣ ಕನ್ನಡದಲ್ಲಿ 23, ರಾಮನಗರದಲ್ಲಿ 21, ಬೆಂಗಳೂರು ನಗರದಲ್ಲಿ 17, ಯಾದಗಿರಿಯಲ್ಲಿ 8, ಮಂಡ್ಯದಲ್ಲಿ 7, ಬೀದರ್ನಲ್ಲಿ 6, ಗದಗದಲ್ಲಿ 5, ರಾಯಚೂರು, ಹಾಸನ, ಧಾರವಾಡದಲ್ಲಿ ತಲಾ 4, ದಾವಣಗೆರೆ, ಚಿಕ್ಕಮಗಳೂ ರಿನಲ್ಲಿ 3, ವಿಜಯಪುರ, ಉತ್ತರ ಕನ್ನಡ, ಮೈಸೂರಿನಲ್ಲಿ ತಲಾ 2, ಬಾಗಲಕೋಟೆ, ಕೊಪ್ಪಳ, ಶಿವಮೊಗ್ಗದಲ್ಲಿ ತಲಾ 1 ಪ್ರಕರಣಗಳು ವರದಿಯಾಗಿವೆ