ಕುಶಾಲನಗರ, ಜೂ. 18: ರಾಜ್ಯದಲ್ಲಿ ಆರ್ಯವೈಶ್ಯ ಸಮುದಾಯದವರಿಂದ ಸಮಾಜದ ಕಡುಬಡವರ ಏಳಿಗೆಯ ಉದ್ದೇಶ ದೊಂದಿಗೆ ಸರ್ಕಾರವು ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು ಫಲಾನುಭವಿಗಳು ಇದರ ಸದುಪಯೋಗ ಪಡೆಯಬೇಕೆಂದು ನಿಗಮದ ಅಧ್ಯಕ್ಷ ಡಿ ಎಸ್. ಅರುಣ್ ತಿಳಿಸಿದ್ದಾರೆ.

ಕುಶಾಲನಗರದಲ್ಲಿ ಆರ್ಯ ವೈಶ್ಯ ಸಮುದಾಯದ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪತ್ರವನ್ನು ವಿತರಿಸಿ ಮಾತನಾಡಿದ ಅವರÀು, ಸಾಲ ಪಡೆದ ಫಲಾನುಭವಿಗಳು ತಮ್ಮ ಅಭಿವೃದ್ಧಿಯೊಂದಿಗೆ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ನಿಗಮದಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ಸೌಲಭ್ಯ ಹಾಗೂ ಸ್ವಯಂ ಉದ್ಯೋಗ ಕೈಗೊಳ್ಳಲು ನೇರ ಸಾಲ ಯೋಜನೆಗಳನ್ನು ಇದೇ ಮೊದಲ ಬಾರಿಗೆ ರಾಜ್ಯದಾದ್ಯಂತ ಆರಂಭಿಸಲಾಗಿದೆ ಎಂದು ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್ ಮಾಹಿತಿ ನೀಡಿದರು. ಜಿಲ್ಲೆಯಿಂದ 4 ಮಂದಿ ಅರ್ಜಿ ಸಲ್ಲಿಸಿದ್ದು ಈ ಎಲ್ಲಾ ಫಲಾನುಭವಿಗಳಿಗೆ ತಲಾ 1 ಲಕ್ಷ ರೂ. ಸಾಲ ನೀಡಲಾಗುತ್ತಿದೆ ಎಂದು ಹೇಳಿದರು. ರಾಜ್ಯದಲ್ಲಿ 10 ಲಕ್ಷದಷ್ಟು ಆರ್ಯವೈಶ್ಯ ಸಮುದಾಯದವರಿದ್ದು ಸಮಾಜದ ಕಡುಬಡವರನ್ನು ಮೇಲೆತ್ತುವ ಉದ್ದೇಶದಿಂದ ಸರ್ಕಾರವು ನಿಗಮ ಸ್ಥಾಪಿಸಿದೆ.

ನಿಗಮದ ಜಿಲ್ಲಾ ವ್ಯವಸ್ಥಾಪಕ ಚಿನ್ನಸ್ವಾಮಿ, ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್, ಪಟ್ಟಣ ಪಂಚಾಯಿತಿಯ ಸದಸ್ಯರಾದ ಅಮೃತರಾಜ್, ವಾಸವಿ ಯುವಜನ ಸಂಘದ ಪ್ರಮುಖರಾದ ವೈಶಾಕ್, ಆದರ್ಶ್, ಚೇತನ್ ಉಪಸ್ಥಿತರಿದ್ದರು.