ಮಡಿಕೇರಿ, ಜೂ. 18: 2 ತಿಂಗಳುಗಳ ಹಿಂದೆ ನಡೆಯಬೇಕಿದ್ದ ದ್ವಿತೀಯ ಪಿ.ಯು.ಸಿ ಇಂಗ್ಲೀಷ್ ಪರೀಕ್ಷೆ ಲಾಕ್ಡೌನ್ನಿಂದ ಮುಂದೂಡಲ್ಪಟ್ಟಿದ್ದು, ಇಂದು ನೂತನ ರೀತಿಯಲ್ಲಿ ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಇತರ ಸ್ವಚ್ಛತಾ ಸೌಲಭ್ಯಗಳೊಂದಿಗೆ ಆತಂಕವಿಲ್ಲದೆ ನಡೆಯಿತು. ಜಿಲ್ಲೆಯಲ್ಲಿ 5,927 ವಿದ್ಯಾರ್ಥಿಗಳು ಇಂದು ಪರೀಕ್ಷೆ ಎದುರಿಸಬೇಕಾಗಿದ್ದು, ಇದರಲ್ಲಿ 5787 ವಿದ್ಯಾರ್ಥಿಗಳು ಹಾಜರಾಗಿದ್ದರು.ಒಟ್ಟು 140 ವಿದ್ಯಾರ್ಥಿಗಳು ವೈಯಕ್ತಿಕ ತೊಂದರೆಗಳಿಂದ ಗೈರು ಹಾಜರಾಗಿದ್ದರು. ಹೊರ ಜಿಲ್ಲೆಯ 481 ವಿದ್ಯಾರ್ಥಿಗಳು ಇಂದು ಜಿಲ್ಲೆಯಲ್ಲಿ ಪರೀಕ್ಷೆ ಬರೆಯಬೇಕಿದ್ದು, ಇದರಲ್ಲಿ 13 ವಿದ್ಯಾರ್ಥಿಗಳು ಗೈರಾಗಿದ್ದರು. ಕೊರೊನಾದ ಸಂದರ್ಭದಲ್ಲಿಯೂ ಶೇ. 97.63 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಒಳ್ಳೆಯ ಬೆಳವಣಿಗೆ ಎಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಲಿಂಗ ಶೆಟ್ಟಿ ಅವರು ಮಾಹಿತಿ ನೀಡಿದರು.
ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು. ಶಿಕ್ಷಕರ ಸಹಕಾರ, ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಆರೋಗ್ಯ ತಪಾಸಣೆ, ಪರೀಕ್ಷಾ ಕೇಂದ್ರದ ಸುತ್ತ ಪೊಲೀಸ್ ಇಲಾಖೆಯಿಂದ
(ಮೊದಲ ಪುಟದಿಂದ) ಬಂದೋಬಸ್ತ್ ಏರ್ಪಡಿಸಲಾಗಿತ್ತು. ಯಾವುದೇ ಅಡಚಣೆಗಳಿಲ್ಲದೆ ಕೊರೊನಾ ಆತಂಕದ ನಡುವೆಯೂ ಪಿ.ಯು. ಪರೀಕ್ಷೆ ಸುಸೂತ್ರವಾಗಿ ನಡೆಯಿತು.
ಮಡಿಕೇರಿ: ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 641 ವಿದ್ಯಾರ್ಥಿಗಳು ಇಂದು ಪರೀಕ್ಷೆ ಬರೆದಿದ್ದು ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸಿ ಪರೀಕ್ಷೆ ಬರೆದ ದೃಶ್ಯ ಎದುರಾಯಿತು. ಪರೀಕ್ಷೆ ಬರೆಯುವ ಮುನ್ನ ಪ್ರತಿಯೊಂದು ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಿ ಕೊಠಡಿಗಳಿಗೆ ಪ್ರವೇಶಿಸಲು ಅವಕಾಶ ನೀಡಲಾಯಿತು.
ಗೋಣಿಕೊಪ್ಪ: ಗೋಣಿಕೊಪ್ಪ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆಯನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಅಚ್ಚುಕಟ್ಟಾಗಿ ನಡೆಸಲಾಯಿತು. ಕಾಲೇಜಿನ ಪ್ರಾಶುಪಾಲ ಎಸ್.ಎಸ್. ಮಾದಯ್ಯ ಪರೀಕ್ಷಾ ಜವಾಬ್ದಾರಿಯನ್ನು ಶಿಸ್ತು ಬದ್ದವಾಗಿ, ಉತ್ತಮವಾಗಿ ನಿಭಾಯಿಸಿದರು. ಪರೀಕ್ಷಾ ಕೊಠಡಿಗೆ ತೆರಳುವ ಮುನ್ನ ಗೋಣಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷÀಕಿಯರು ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಿದರು. ಕೈಗಳಿಗೆ ಸ್ಯಾನಿಟೈಸರ್ ಸಿಂಪಡಿಸಿ ವಿದ್ಯಾರ್ಥಿಗಳನ್ನು ಒಳಗೆ ಬಿಡಲಾಯಿತು.
ಗೋಣಿಕೊಪ್ಪ ಕಾವೇರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಕಾವೇರಿ ಪದವಿ ಪೂರ್ವ ಕಾಲೇಜು, ಅರ್ವತೊಕ್ಕಲುವಿನ ಸರ್ವಧೈವತಾ ಪಿ.ಯು.ಕಾಲೇಜು, ಕಳತ್ಮಾಡುವಿನ ಲಯನ್ಸ್ ಪಿ.ಯು. ಕಾಲೇಜು, ಗೋಣಿಕೊಪ್ಪಲುವಿನ ಕಾಪ್ಸ್ ಪಿ.ಯು. ಕಾಲೇಜು ಹಾಗೂ ಹೊರ ರಾಜ್ಯದ 4 ವಿದ್ಯಾರ್ಥಿಗಳು, ಹೊರ ಜಿಲ್ಲೆಯ 5 ವಿದ್ಯಾಥಿಗಳು ಸೇರಿದಂತೆ 297 ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಪರೀಕ್ಷೆ ಬರೆದರು. ಸಪ್ಲಿಮೆಂಟರಿ ಪರೀಕ್ಷೆ ಕಟ್ಟಿದ್ದ 3 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಬಹುತೇಕ ವಿದ್ಯಾರ್ಥಿಗಳು ಸ್ವಂತ ವಾಹನದಲ್ಲಿ ಬಂದಿದ್ದರು, ಕೆಲವು ಗ್ರಾಮಗಳಿಂದ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್ ಸೇವೆ ಒದಗಿಸಲಾಗಿತ್ತು.
ಶ್ರೀಮಂಗಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎಂ. ಚಂಗಪ್ಪ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಾಗಿ ಕಾರ್ಯನಿರ್ವಹಿಸಿದರು. ಗೋಣಿಕೊಪ್ಪ ಪೊಲೀಸ್ ಠಾಣಾ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಮಾಡಿದ್ದರು.
ಕೂಡಿಗೆ: ಕೂಡಿಗೆಯ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಮೊರಾರ್ಜಿ ವಸತಿ ಶಾಲೆಯಲ್ಲಿ 300 ವಿದ್ಯಾರ್ಥಿಗಳು ಪಿ.ಯು. ಇಂಗ್ಲೀಷ್ ಪರೀಕ್ಷೆ ಬರೆದರು.
ಕೂಡಿಗೆಯ ಪರೀಕ್ಷಾ ಕೇಂದ್ರಕ್ಕೆ ಶಿರಂಗಾಲ ಪದವಿ ಪೂರ್ವ ಕಾಲೇಜು, ಮತ್ತು ಹೆಬ್ಬಾಲೆ ಪದವಿ ಪೂರ್ವ ಕಾಲೇಜು ಸೇರಿದಂತೆ ಕೂಡಿಗೆ ಕಾಲೇಜಿನ ಒಟ್ಟು 300 ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಪರೀಕ್ಷೆ ಬರೆದರು.
ಮೊದಲು ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರಿಂದ ಎಲ್ಲಾ ವಿದ್ಯಾರ್ಥಿಗಳನ್ನು ತಪಾಸಣೆ ಮಾಡಲಾಯಿತು. ಅಲ್ಲದೆ ಈ ವ್ಯಾಪ್ತಿಯ 20 ವಿದ್ಯಾರ್ಥಿಗಳು ಹೊರ ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇಲ್ಲಿಯೇ ಪರೀಕ್ಷೆ ಬರೆದರು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸೋಮವಾರಪೇಟೆಯಿಂದ ಕೂಡಿಗೆಯವರೆಗೆ ಬರುವ ವಿದ್ಯಾರ್ಥಿಗಳಿಗೆ ಎರಡು ಸಾರಿಗೆ ಬಸ್ ವ್ಯವಸ್ಥೆಯನ್ನು ಮಾಡಲಾಗಿತ್ತು.
ಸಿದ್ದಾಪುರ: ಸಿದ್ದಾಪುರ ಸಮೀಪದ ನೆಲ್ಯಹುದಿಕೇರಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆರು ಕಾಲೇಜುಗಳ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ನಡೆಸಲಾಯಿತು. ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುಂಚಿತ ಆರೋಗ್ಯ ಇಲಾಖೆಯ ವತಿಯಿಂದ ಎಲ್ಲಾ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಲಾಯಿತು. ದೂರದ ಊರಿನಿಂದ ಬರುವ ಮಕ್ಕಳಿಗೆ ಮೂರು ಸಾರಿಗೆ ಬಸ್ಸುಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. ಪರೀಕ್ಷೆಗೆ ಹಾಜರಾಗುವ 403 ಮಕ್ಕಳನ್ನು ಆರೋಗ್ಯ ತಪಾಸಣೆ ಮಾಡಲಾಯಿತು.
ಅಲ್ಲದೇ ಪರೀಕ್ಷೆ ನಡೆಯುವ ಕೊಠಡಿಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಯಿತು. ಪರೀಕ್ಷೆಯ ಮೇಲುಸ್ತುವಾರಿಯನ್ನು ನೋಡಿಕೊಳ್ಳಲು ಹಾಜರಾಗಿದ್ದ ಶಿಕ್ಷಕರುಗಳು ಕೂಡ ಮಾಸ್ಕ್ ಧರಿಸಿದ್ದರು. ಸಿದ್ದಾಪುರ ಠಾಣಾಧಿಕಾರಿ ಮೋಹನ್ರಾಜ್ ನೇತೃತ್ವದಲ್ಲಿ ಪರೀಕ್ಷಾ ಕೇಂದ್ರದ ಸುತ್ತಲೂ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಂಜರಾಯಪಟ್ಟಣ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರತಾಪ್ ಸಾಗರ್ ಹಾಗೂ ಚೆಟ್ಟಳ್ಳಿ ವೈದ್ಯಾಧಿಕಾರಿ ಡಾ. ಯಶೋಧ ನೇತೃತ್ವದಲ್ಲಿ ಪರೀಕ್ಷೆಗೆ ಹಾಜರಾದ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಯಿತು. ಈ ಸಂದರ್ಭ ನೆಲ್ಯಹುದಿಕೇರಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಆಂಟೋನಿ ವೀವಿಯನ್ ಅಲ್ವಾರಿಸ್ ಶುಶ್ರೂಷಕಿಯರಾದ ಅಂಜಲೀನಾ ಲೋಬೋ, ಲೀನಾ ಕುಮಾರಿ, ಯಶೋಧ ಹೆಚ್.ಎನ್, ಗೀತಾ ಎನ್.ಎಸ್, ಮಾಯಮ್ಮ ಎ.ಕೆ, ಲಕ್ಷ್ಮಿ ಹೆಚ್.ಸಿ ಹಾಗೂ ನೆಲ್ಯಹುದಿಕೇರಿ ಭಾಗದ 7 ಮಂದಿ ಆಶಾ ಕಾರ್ಯಕರ್ತರು ಹಾಗೂ ಉಪನ್ಯಾಸಕರುಗಳು ಹಾಜರಿದ್ದರು.
ಶನಿವಾರಸಂತೆ: ಪಟ್ಟಣದ ಭಾರತಿ ವಿದ್ಯಾಸಂಸ್ಥೆ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯು ಪರೀಕ್ಷಾ ಕೇಂದ್ರವಾಗಿದ್ದು, ಇಂಗ್ಲೀಷ್ ಪರೀಕ್ಷೆ ನಿರಾತಂಕವಾಗಿ ನಡೆಯಿತು. ಸ್ಥಳೀಯ 5 ಕಾಲೇಜುಗಳ 326 ಹಾಗೂ ಹೊರ ಜಿಲ್ಲೆಯ 24 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಭಾರತಿ ವಿದ್ಯಾಸಂಸ್ಥೆ, ಕಾವೇರಿ ಕಾಲೇಜು, ವಿಘ್ನೇಶ್ವರ ಬಾಲಕಿಯರ ಕಾಲೇಜು, ಸೆಕ್ರೇಡ್ ಹಾರ್ಟ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ ಹಾಗೂ ಆಲೂರು ಸಿದ್ದಾಪುರ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಹೊರ ಜಿಲ್ಲೆಯ ವಿದ್ಯಾರ್ಥಿಗಳು 18 ಕೊಠಡಿಗಳಲ್ಲಿ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ಪರೀಕ್ಷೆ ಬರೆದರು.
ಗ್ರಾಮ ಪಂಚಾಯಿತಿ ಪರೀಕ್ಷಾ ಕೇಂದ್ರದ ಕೊಠಡಿಗಳನ್ನು ಸ್ಯಾನಿಟೈಸರ್ನಿಂದ ಸ್ವಚ್ಛಗೊಳಿಸಲಾಗಿತ್ತು. ಆರೋಗ್ಯ ಇಲಾಖೆ ವಿದ್ಯಾರ್ಥಿಗಳಿಗೆ ವೈದ್ಯಕೀಯ ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಕೇಂದ್ರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದೇ ಪರೀಕ್ಷೆ ನಿರ್ವಿಘ್ನವಾಗಿ ನಡೆಯಿತು. ವಿದ್ಯಾರ್ಥಿಗಳು, ಮೇಲ್ವಿಚಾರಕರು ಮಾಸ್ಕ್ ಧರಿಸಿ ಅಂತರ ಕಾಯ್ದುಕೊಂಡು ಸಹಕರಿಸಿದರು ಎಂದು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕಿ ಎಚ್.ವಿ. ರಾಘವಿ ಜಗದೀಶ್ ತಿಳಿಸಿದರು.
ನಾಪೋಕ್ಲು: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನೋಂದಣಿಯಾಗಿದ್ದ 185 ವಿದ್ಯಾರ್ಥಿಗಳು ಹಾಗೂ ಪುತ್ತೂರು ಮಂಗಳೂರು ಭಾಗಗಳಲ್ಲಿ ವ್ಯಾಸಂಗ ಮಾಡುತ್ತಿದ್ದ 25 ವಿದ್ಯಾರ್ಥಿಗಳು ಸೇರಿದಂತೆ 210 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಸಂಪೂರ್ಣ ಸುರಕ್ಷತಾ ಕ್ರಮಗಳನ್ನು ಪರೀಕ್ಷಾ ಕೇಂದ್ರದಲ್ಲಿ ಅನುಸರಿಸಲಾಗಿತ್ತು. ಎಲ್ಲಾ ವಿದ್ಯಾರ್ಥಿಗಳನ್ನು ಥರ್ಮಲ್ ಟೆಸ್ಟಿಂಗ್ಗೆ ಒಳಪಡಿಸಲಾಯಿತು. ಮಾಸ್ಕ್ ಧರಿಸಿ ವಿದ್ಯಾರ್ಥಿಗಳು ಸುಸೂತ್ರವಾಗಿ ಪರೀಕ್ಷೆಯನ್ನು ಬರೆದರು. ಸುರಕ್ಷತೆಯ ದೃಷ್ಟಿಯಿಂದ ಪ್ರತ್ಯೇಕ ಕೊಠಡಿಯೊಂದನ್ನು ಕಾಯ್ದಿರಿಸಲಾಗಿತ್ತು.
ಕುಶಾಲನಗರ: ದ್ವಿತೀಯ ಪಿಯುಸಿ ಪರೀಕ್ಷೆ ಯಾವುದೇ ಗೊಂದಲವಿಲ್ಲದೆ ನಡೆದಿದೆ. ಕುಶಾಲನಗರ ಸರಕಾರಿ ಪದವಿಪೂರ್ವ ಕಾಲೇಜಿನ ಕೇಂದ್ರದಲ್ಲಿ ಒಟ್ಟು 860 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಾಗಿದ್ದು ಅವರಲ್ಲಿ 42 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು ಎಂದು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಾದ ಸಿ.ಎಂ. ಮಹಾಲಿಂಗಯ್ಯ ತಿಳಿಸಿದ್ದಾರೆ.
ಸೋಮವಾರಪೇಟೆ: ಪದವಿಪೂರ್ವ ಶಿಕ್ಷಣ ಇಲಾಖಾ ವತಿಯಿಂದ ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಬಿಟಿಸಿಜಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ದ್ವಿತೀಯ ಪಿಯುಸಿ ಆಂಗ್ಲ ಭಾಷಾ ಪರೀಕ್ಷೆಯಲ್ಲಿ ಒಟ್ಟು 496 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ಪಟ್ಟಣದ ಎರಡು ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ ಪೂರ್ವ ಸಿದ್ಧತೆಯನ್ನು ಜಿಲ್ಲಾಡಳಿತ ನಿರ್ವಹಿಸಿತ್ತು. ಎಲ್ಲ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್ ವ್ಯವಸ್ಥೆ ಮಾಡಲಾಗಿತ್ತು. ಹೊರ ಜಿಲ್ಲೆಯ 49 ವಿದ್ಯಾರ್ಥಿಗಳಿಗೆ ಬಿಟಿಸಿಜಿ ಪದವಿಪೂರ್ವ ಕಾಲೇಜಿನಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಮೂವರು ವಿಶೇಷಚೇತನ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರು. ಎಂಟು ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.
ಪರೀಕ್ಷಾ ಕೇಂದ್ರದ ಸುತ್ತಲೂ ಯಾವುದೇ ಅಕ್ರಮ ನಡೆಯದಂತೆ 200ಮೀಟರ್ ವ್ಯಾಪ್ತಿಯನ್ನು ನಿರ್ಬಂಧಿತ ಸ್ಥಳವೆಂದು ಘೋಷಣೆ ಮಾಡಲಾಗಿತ್ತು. ಮುಖ್ಯ ಅಧೀಕ್ಷಕ ಜಗದೀಶ್ ಬಾಬು, ಸಹ ಅಧೀಕ್ಷಕ ಫಿಲಿಪ್ ವಾಸ್, ಉತ್ತರ ಪತ್ರಿಕೆ ಪಾಲಕರಾದ ಕೆ.ಎನ್. ಚಂದ್ರಶೇಖರ್, ಕಚೇರಿ ಅಧೀಕ್ಷಕರಾದ ಎಂ.ಬಿ. ತಿಲೋತ್ತಮೆ ಉಸ್ತುವಾರಿ ವಹಿಸಿದ್ದರು.
ವೈದ್ಯರಾದ ಇಂದೂಧರ್, ಆರೋಗ್ಯ ಇಲಾಖೆಯ ಕೆ.ಪಿ. ಮಹೇಶ್, ಡಿ.ಎಂ. ದಿವ್ಯ, ಆಶಾ ಕಾರ್ಯಕರ್ತೆಯರಾದ ಬಿ.ಆರ್. ಸಂಧ್ಯಾ, ಜಯಲಕ್ಷ್ಮೀ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ನಡೆಸಿದರು.