ಕುಶಾಲನಗರ, ಜೂ. 17: ಜೂನ್ 25 ರಿಂದ ಜುಲೈ 4 ರವರೆಗೆ ನಡೆಯಲಿರುವ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಗೆ ತಾಲೂಕಿನ ಎಲ್ಲಾ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಸಕಲ ಪೂರ್ವ ಸಿದ್ಧತೆಯೊಂದಿಗೆ ಆರೋಗ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಕೊಂಡು ಉತ್ತಮವಾಗಿ ಪರೀಕ್ಷೆ ನಡೆಸಬೇಕು ಎಂದು ಸೋಮವಾರ ಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು ಹೇಳಿದರು.

ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಕುಶಾಲನಗರ ಜ್ಞಾನ ಭಾರತಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ ನಡೆಸುವ ಕುರಿತು ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ಮತ್ತು ಮಳೆಗಾಲದ ಹಿನ್ನೆಲೆ ಪರೀಕ್ಷೆ ಬಗ್ಗೆ ಯಾವುದೇ ಗೊಂದಲ ಉಂಟಾಗದಂತೆ ಶಿಕ್ಷಕರು ಈ ಪರೀಕ್ಷೆಯನ್ನು ಸವಾಲಾಗಿ ಸ್ವೀಕರಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು ಎಂದರು.

ಕೊರೊನಾ ಸೋಂಕು ಮತ್ತು ಮಳೆಗಾಲದ ಹಿನ್ನೆಲೆ ಬೆಟ್ಟ ಗುಡ್ಡ ಪ್ರದೇಶ ಸೇರಿದಂತೆ ಸಾರಿಗೆ ಸೌಲಭ್ಯ ವಂಚಿತ ದೂರದ ಊರುಗಳಿಂದ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ಸಮೀಪವಿರುವ ಹಾಸ್ಟೆಲ್‍ಗಳಲ್ಲಿ ವಸತಿ ಸೌಲಭ್ಯ ಕಲ್ಪಿಸಲು ಈಗಾಗಲೇ ಸಿದ್ಧತೆ ನಡೆಸಲಾಗಿದೆ.

ಪರೀಕ್ಷಾ ಸಂದರ್ಭದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷಾ ಕಾರ್ಯ ಸುರಕ್ಷತೆ ಮತ್ತು ಸುಗಮವಾಗಿ ನಡೆಯುವಂತೆ ಜಾಗ್ರತೆ ವಹಿಸಬೇಕು. ಪರೀಕ್ಷೆಗೆ ಮುನ್ನ ಮತ್ತು ಪ್ರತಿ ಪರೀಕ್ಷೆ ನಡೆದ ನಂತರ ಎಲ್ಲಾ ತರಗತಿಗಳು, ಪೀಠೋಪಕರಣಗಳು ಹಾಗೂ ಶಾಲಾ ಕಟ್ಟಡವನ್ನು ಸ್ಯಾನಿಟೈಸ್ ಮಾಡುವ ಮೂಲಕ ಪರೀಕ್ಷಾ ಕೇಂದ್ರವನ್ನು ಆಗ್ಗಿಂದಾಗ್ಗೆ ಸ್ವಚ್ಛಗೊಳಿಸಲೇಬೇಕು. ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವ ಪರೀಕ್ಷಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ಯಾನಿಂಗ್‍ನೊಂದಿಗೆ ಸ್ಯಾನಿಟೈಸರ್ ಬಳಸಿ ಕೈಗಳನ್ನು ಸ್ವಚ್ಛಗೊಳಿಸಲು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಕ್ರಮವಹಿಸಬೇಕು. ಪ್ರತಿ ವಿದ್ಯಾರ್ಥಿಯು ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವ ಸಂದರ್ಭ ಕಡ್ಡಾಯ ವಾಗಿ ಮುಖಗವಸು (ಮಾಸ್ಕ್) ಧರಿಸಿರುವುದನ್ನು ಖಚಿತಪಡಿಸಿ ಕೊಂಡು ಪ್ರವೇಶ ನೀಡಬೇಕು ಎಂದು ಬಿ.ಇ.ಓ. ಪಾಂಡು ಹೇಳಿದರು.

ಸೋಮವಾರಪೇಟೆ ತಾಲೂಕಿನಲ್ಲಿ ಒಟ್ಟು 11 ಪರೀಕ್ಷಾ ಕೇಂದ್ರಗಳಿದ್ದು, ಪ್ರಸಕ್ತ ಸಾಲಿನಲ್ಲಿ ಒಟ್ಟು 2831 ಅಭ್ಯರ್ಥಿಗಳು ಎಸ್.ಎಸ್. ಎಲ್.ಸಿ. ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮೊಬಿಯಸ್ ಫೌಂಡೇಶನ್ ವತಿಯಿಂದ ಉಚಿತವಾಗಿ ನೀಡಲಾಗಿರುವ ಮಾಸ್ಕ್‍ಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು ತಾಲೂಕಿನ ಎಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಇದೇ ವೇಳೆ ಹಸ್ತಾಂತರಿಸಿದರು.

ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಪಿ. ಧರ್ಮಪ್ಪ, ತಾಲೂಕು ಎಸ್.ಎಸ್.ಎಲ್.ಸಿ. ಪರೀಕ್ಷೆಯ ನೋಡಲ್ ಅಧಿಕಾರಿ, ಇ.ಸಿ.ಓ., ಕೆ.ಬಿ. ರಾಧಾಕೃಷ್ಣ, ಜ್ಞಾನಭಾರತಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ತ್ರಿವೇಣಿ, ಬಿ.ಇ.ಓ. ಕಚೇರಿ ಸಿಬ್ಬಂದಿ ಹೆಚ್.ಟಿ. ರಾಜೇಶ್, ತಾಲೂಕಿನ ಪ್ರೌಢಶಾಲಾ ಮುಖ್ಯ ಶಿಕ್ಷಕರು ಬಿ.ಆರ್.ಪಿ., ಸಿ.ಆರ್.ಪಿ.ಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ದೈಹಿಕ ಶಿಕ್ಷಕ ಉತ್ತಪ್ಪ ಕಾರ್ಯಕ್ರಮ ನಿರ್ವಹಿಸಿದರು.