ಸಿದ್ದಾಪುರ, ಜೂ 17: ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಕಾರ್ಯಾಚರಣೆ ಮೂಲಕ ಕಾಡಿಗೆ ಅಟ್ಟಲು ಪ್ರಯತ್ನಿಸಿದ ಅರಣ್ಯ ಇಲಾಖಾಧಿಕಾರಿ ಗಳು ಹಾಗೂ ಸಿಬ್ಬಂದಿಗಳಿಗೆ ಕಾಡಾನೆಗಳು ಸುತ್ತಾಡಿಸಿ ಸುಸ್ತು ಹೊಡೆಸಿದ ಘಟನೆ ಬುಧವಾರದಂದು ನಡೆಯಿತು.ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಮೀನುಕೊಲ್ಲಿ ವ್ಯಾಪ್ತಿಯ ಅಭ್ಯತ್ಮಂಗಲ, ನೆಲ್ಲಿಹುದಿಕೇರಿ, ಅರೆಕಾಡು, ವಾಲ್ನೂರು-ತ್ಯಾಗತ್ತೂರು ಗ್ರಾಮಗಳ ಕಾಫಿ ತೋಟದಲ್ಲಿ ಮಿತಿಮೀರಿದ ಕಾಡಾನೆಗಳ ಹಾವಳಿ ಇದ್ದು, ಕಾಡಾನೆಗಳ ಹಿಂಡು ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿದ್ದವು. ಅಲ್ಲದೇ ಕೃಷಿ ಫಸಲುಗಳನ್ನು ನಾಶ ಪಡಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳಿಂದ ಗ್ರಾಮಸ್ಥರು ಭಯಭೀತರಾಗಿದ್ದರು.
ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖಾ ಅಧಿಕಾರಿಗಳಿಗೆ ದೂರು ನೀಡಿದ ಮೇರೆಗೆ ಬುಧವಾರದಂದು ಅಭ್ಯತ್ಮಂಗಲ ಹಾಗೂ ನೆಲ್ಲಿಹುದಿಕೇರಿಯ ಸುತ್ತಮುತ್ತದ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗಟ್ಟಲು ಉಪವಲಯ ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ ನೇತೃತ್ವದಲ್ಲಿ ಕಾರ್ಯಾಚರಣೆಯನ್ನು ನಡೆಸಲಾಯಿತು. ಕಾರ್ಯಾಚರಣೆ ಸಂದರ್ಭದಲ್ಲಿ ಕಾಫಿ ತೋಟಗಳಲ್ಲಿ ಕಾಡಾನೆಗಳ 2 ಗುಂಪುಗಳು ಬೇರೆ ಬೇರೆಯಾಗಿದ್ದು, (ಮೊದಲ ಪುಟದಿಂದ) ಕಾರ್ಯಾಚರಣೆಗಿಳಿದಿದ್ದ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಕಾಡಾನೆಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸುತ್ತಾಡುತ್ತಾ ಸುಸ್ತು ಮಾಡಿಸಿದವು.
ಅರಣ್ಯ ಇಲಾಖಾ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಗಳು ಪಟಾಕಿ ಸಿಡಿಸಿ ಕಾಡಾನೆಗಳನ್ನು ಓಡಿಸುವ ಪ್ರಯತ್ನ ಮಾಡಿದರೂ ಕಾಡಾನೆಗಳು ಸಾರ್ವಜನಿಕ ರಸ್ತೆಯ ಮೂಲಕ ಅರಣ್ಯಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದವು ಎನ್ನಲಾಗಿದೆ. ಅಲ್ಲದೇ ಓಡಿಸಿದ ಕಾಡಾನೆಗಳು ಮರಳಿ ಕಾಫಿ ತೋಟದ ಒಳಕ್ಕೆ ನುಗ್ಗಲು ಯತ್ನಿಸಿದವು. ತುಂತುರು ಮಳೆ, ಕಾಫಿ ತೋಟದ ಕೆಸರಿನ ನಡುವೆ ಅರಣ್ಯ ಸಿಬ್ಬಂದಿ ಕಾಡಾನೆಗಳನ್ನು ಕಾಡಿಗೆ ಅಟ್ಟಲು ಶ್ರಮವಹಿಸಿದರು. ಎಷ್ಟೇ ಪ್ರಯತ್ನಪಟ್ಟರೂ ಕೂಡ ಕಾಡಾನೆಗಳ ಗುಂಪುಗಳು ಬೇರೆ ಬೇರೆಯಾಗಿದ್ದ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಇಳಿದ್ದಿದ್ದ ಸಿಬ್ಬಂದಿಗಳಿಗೆ ಸಮಸ್ಯೆ ಉಂಟಾಯಿತು.
ಬುಧವಾರದಂದು ಅಭ್ಯತ್ಮಂಗಲ, ನೆಲ್ಲಿಹುದಿಕೇರಿ, ಅರೆಕಾಡು, ಭಾಗದಲ್ಲಿ ಕಾರ್ಯಾಚರಣೆ ನಡೆಸಿದ ಸಂದರ್ಭ ಮರಿ ಆನೆಗಳು ಹಾಗೂ ಒಂಟಿ ಸಲಗಗಳು ಸೇರಿದಂತೆ 23ಕ್ಕೂ ಅಧಿಕ ಕಾಡಾನೆಗಳು ಕಂಡುಬಂದವು ಎಂದು ಸುಬ್ರಾಯ ತಿಳಿಸಿದರು.
ಕುಶಾಲನಗರ ವಲಯ ಅರಣ್ಯಾಧಿಕಾರಿಗಳು ಕಳೆದ ಕೆಲವು ದಿನಗಳ ಹಿಂದೆ ಚೆಟ್ಟಳ್ಳಿ, ಅಭ್ಯತ್ಮಂಗಲ, ನೆಲ್ಲಿಹುದಿಕೇರಿ ಭಾಗದಲ್ಲಿ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಗ್ರಾಮಸ್ಥರ ಒತ್ತಾಯದ ಮೇರೆಗೆ ಕಾರ್ಯಾಚರಣೆಯನ್ನು ನಡೆಸಿ ಕಾಡಿಗೆ ಅಟ್ಟಿದ್ದರು. ಆದರೆ ಕಾಡಾನೆಗಳು ಮರಳಿ ಕಾಫಿ ತೋಟಕ್ಕೆ ನುಗ್ಗಿ ಕಾಫಿ ತೋಟಗಳಲ್ಲಿ ವಾಸ್ತವ್ಯ ಹೂಡುತ್ತಿವೆ. ಅಲ್ಲದೇ ರಾತ್ರಿ ಸಮಯದಲ್ಲಿ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ನುಸುಳುತ್ತಾ ದಾಂಧಲೆ ನಡೆಸುತ್ತಿದೆ. ಇದರಿಂದಾಗಿ ಅರಣ್ಯ ಇಲಾಖಾ ಅಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ. ಕಾಡಾನೆಗಳ ಹಿಂಡುಗಳು 3-4 ಗುಂಪುಗಳಾಗಿ ವಿಂಗಡಣೆಯಾಗಿದ್ದು, ಕೆಲವು ಕಾಡಾನೆಗಳು ಕಾಫಿ ತೋಟಗಳಲ್ಲಿ ಮರಿ ಆನೆಗಳಿಗೆ ಜನ್ಮ ನೀಡಿದ್ದು ಇದರಿಂದಾಗಿ ಕಾಡಿನತ್ತ ತೆರಳಲು ಹಿಂದೇಟು ಹಾಕುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅಲ್ಲದೇ ಕಾಡಾನೆಗಳು ಬೇರೆ ಬೇರೆ ಗುಂಪುಗಳಾಗಿ ಸುತ್ತಾಡುತ್ತಿರುವುದರಿಂದ ಅರಣ್ಯ ಇಲಾಖಾ ಸಿಬ್ಬಂದಿಗೆ ಯಾವ ರೀತಿ ಕಾರ್ಯಾಚರಣೆ ಮಾಡಬೇಕು ಎಂಬ ಬಗ್ಗೆ ಗೊತ್ತಾಗುತ್ತಿಲ್ಲ.
ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಇತ್ತೀಚೆಗೆ ಅರಣ್ಯ ಇಲಾಖೆ ವತಿಯಿಂದÀ ಮಾಲ್ದಾರೆಯಿಂದ ದುಬಾರೆವರೆಗೆ ರೈಲ್ವೆ ಕಂಬಿಗಳನ್ನು ಅಳವಡಿಸುವ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಯಿತು. ಆದರೆ ಲಾಕ್ಡೌನ್ ಹಿನ್ನೆಲೆಯಲ್ಲಿ ಕಾಮಗಾರಿಗಳು ವಿಳಂಬವಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿದ್ದು, ಸರ್ಕಾರವು ಕೂಡಲೇ ಕಾಡಾನೆಗಳ ಹಾವಳಿ ತಡೆಗಟ್ಟಲು ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಗ್ರಾಮಸ್ಥರು ಆಗ್ರಹಪಡಿಸಿದ್ದಾರೆ. -ವರದಿ: ವಾಸು ಎ.ಎನ್.