ಮಡಿಕೇರಿ, ಜೂ. 17: ಅಕ್ಷರ ಕಲಿಸಿದ ಶಾಲೆಯನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸುವ ಮೂಲಕ ಶಾಲೆಯ ಹಳೆಯ ವಿದ್ಯಾರ್ಥಿಗಳು ತಮ್ಮ ಸೇವೆ ಸಲ್ಲಿಸಿದ್ದಾರೆ.

ಕೊರೊನಾ ಲಾಕ್‍ಡೌನ್‍ನಿಂದಾಗಿ ಶಾಲೆಗಳೆಲ್ಲವೂ ಮುಚ್ಚಲ್ಲಟ್ಟಿದ್ದವು. ಇದೀಗ ಲಾಕ್‍ಡೌನ್ ಸಡಿಲಿಕೆ ಬಳಿಕ ಶಾಲೆಗಳು ತೆರೆಯಲಾರಂಭಿಸಿವೆ. ಶಿಕ್ಷಕರು, ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಆದರೆ ಶಾಲೆಯತ್ತ ಇದುವರೆಗೆ ಯಾರೂ ಸುಳಿಯದ್ದರಿಂದ ಬಹುತೇಕ ಶಾಲಾ ಆವರಣ ಕಸ - ಕಡ್ಡಿ ಕಾಡುಗಳಿಂದ ತುಂಬಿವೆ. ಈ ರೀತಿಯ ಶಾಲೆಯೊಂದನ್ನು ಅದೇ ಶಾಲೆಯಲ್ಲಿ ಅಕ್ಷರ ಕಲಿತ ಹಳೆ ವಿದ್ಯಾರ್ಥಿಗಳು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿ ಮಾದರಿಯಾಗಿದ್ದಾರೆ.

ಸೋಮವಾರಪೇಟೆ ತಾಲೂಕಿನ ದೊಡ್ಡಮಳ್ತೆ ಗ್ರಾಮದ ಸ.ಹಿ.ಪ್ರಾ. ಶಾಲೆಯ ಆವರಣವನ್ನು ಶಾಲೆಯ ಪ್ರಬಾರ ಮುಖ್ಯ ಶಿಕ್ಷಕಿ ಎಸ್.ಎಂ. ಆಶಾ ಅವರ ಕೋರಿಕೆ ಮೇರೆ ಹಳೆ ವಿದ್ಯಾರ್ಥಿ ಬಳಗದವರು ಸ್ವಚ್ಛಗೊಳಿಸಿದ್ದಾರೆ. ಇದೇ ಶಾಲೆಯಲ್ಲಿ ಕಲಿತು ವಿವಿಧೆಡೆ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳು ಲಾಕ್‍ಡೌನ್‍ನಿಂದಾಗಿ ಕೆಲಸವಿಲ್ಲದೆ ಮನೆಯಲ್ಲೇ ಇದ್ದರು.

ಶಿಕ್ಷಕರ ಕೋರಿಕೆಗೆ ಮನ್ನಣೆ ನೀಡಿ ಶಾಲೆಯ ಮೇಲಿನ ಅಭಿಮಾನದಿಂದ ಈ ರೀತಿಯ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಹಳೆ ವಿದ್ಯಾರ್ಥಿಗಳಾದ ಮನ್ಸೂರ್, ಶಾಹಿದ್, ಸಾಹುಲ್, ಹಮೀದ್, ಮಹಮ್ಮದ್ ಅಸಿಫ್, ಸಿರಾಜುದ್ದಿನ್, ಸಾದಿಕ್, ಅಭಿರ್, ಜಲೀಲ್, ಇಸಾಮುದ್ದಿನ್ ಶ್ರಮದಾನದಲ್ಲಿ ತೊಡಗಿಸಿಕೊಂಡವರು. ಈ ಸಂದರ್ಭ ಮುಖ್ಯಶಿಕ್ಷಕಿ ಆಶಾ, ಶಿಕ್ಷಕ ಕೆ.ಎಸ್. ಗಿರಿಗೌಡ, ಸಹಶಿಕ್ಷಕಿ ಎಂ.ಆರ್. ಅಬಿದಾಬಾನು ಇದ್ದರು.

ಜಿಲ್ಲೆಯ ಬಹುತೇಕ ಶಾಲೆಗಳು ಕಾಡು ತುಂಬಿಕೊಂಡಿದ್ದು, ಈ ಯುವಕರಂತೆ ಆಯಾ ಗ್ರಾಮದ ಯುವಕರು ಈ ರೀತಿ ಮನಸು ಮಾಡಿದರೆ, ವಿದ್ಯಾದೇಗುಲಕ್ಕೊಂದು ಕಳೆ ಬರಬಹುದು, ಅಕ್ಷರ ಕಲಿಸಿದ ಶಾಲೆಯ ಋಣ ತೀರಿಸಿದಂತಾಗಬಹುದು.

-ಸಂತೋಷ್