ಸೋಮವಾರಪೇಟೆ, ಜೂ. 17: ಇಲ್ಲಿನ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ವತಿಯಿಂದ, ರವೀಂದ್ರ ಅವರ ಹುಟ್ಟುಹಬ್ಬದ ಅಂಗವಾಗಿ ತಾ. 20ರಂದು ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಗುವದು ಎಂದು ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಆನೆಕೆರೆ ಮತ್ತು ಯಡೂರು ಗ್ರಾಮದ ಕೆರೆಯನ್ನು ತಮ್ಮ ಸ್ವಂತ ದುಡಿಮೆಯಿಂದ ಲಕ್ಷಾಂತರ ರೂಪಾಯಿ ವ್ಯಯಿಸಿ ಹೂಳೆತ್ತುವ ಮೂಲಕ ಸಾರ್ವಜನಿಕರ ಸೇವೆಗೆ ನೀಡಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಆನೆಕೆರೆಯನ್ನು ರೂ. 7 ಲಕ್ಷ ವೆಚ್ಚದಲ್ಲಿ ಹೂಳೆತ್ತಿಸಿ ಸ್ವಚ್ಛಗೊಳಿಸಿದ್ದರು. ನಂತರ ಅದರ ನಿರ್ವಹಣೆಯ ಜವಾಬ್ದಾರಿ ಹೊತ್ತುಕೊಳ್ಳಬೇಕಾದ ಪಟ್ಟಣ ಪಂಚಾಯಿತಿ ಕೆರೆಯನ್ನು ನಿರ್ಲಕ್ಷ್ಯಿಸಿದೆ ಎಂದು ದೂರಿದರು. ಇದೀಗ ಕೆರೆಯ ಸುತ್ತಲೂ ಕಾಡು ಬೆಳೆದು ಅಶುಚಿತ್ವದ ಆಗರವಾಗಿದೆ. ಕೂಡಲೇ ಆನೆಕೆರೆಯನ್ನು ಸ್ವಚ್ಛಗೊಳಿಸಿ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದಲ್ಲಿ, ಸಂಘದ ವತಿಯಿಂದ ಪಟ್ಟಣ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಆನಂದ, ಕಾರ್ಯದರ್ಶಿ ರಾಜಪ್ಪ, ಸಹ ಕಾರ್ಯದರ್ಶಿ ಹೆಚ್.ಒ. ಪ್ರಕಾಶ್, ಸದಸ್ಯ ಅಜಯ್ ಉಪಸ್ಥಿತರಿದ್ದರು.