ಗೋಣಿಕೊಪ್ಪಲು, ಜೂ. 16: ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ವತಿಯಿಂದ ಮಾನವ ಸರಪಳಿ ನಿರ್ಮಿಸಿ, ಸರ್ಕಾರದ ಸುತ್ತೋಲೆಯನ್ನು ಸುಡುವ ಮೂಲಕ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ಸೇರಿದ ರೈತ ಮುಖಂಡರು ಗೋಣಿಕೊಪ್ಪ, ಮೈಸೂರು ರಸ್ತೆಯಲ್ಲಿ ಜಮಾವಣೆ ಗೊಂಡು ಭೂ ಸುಧಾರಣೆಯ ವಿರುದ್ಧ ಪ್ರತಿಭಟಿಸಿದರು. ಸರಕಾರ ಯಾವುದೇ ತಿದ್ದುಪಡಿ ಅಥವಾ ಕಾಯ್ದೆ ರೂಪಿಸಿದರೆ ಅದರಲ್ಲಿ ಸಾರ್ವಜನಿಕರ ಒಳಿತು ಅಡಕವಾಗಿರಬೇಕು. ಅದನ್ನು ಜನ ಸಮುದಾಯ ಒಪ್ಪುವಂತಿರಬೇಕು. ಆದರೆ ಸರ್ಕಾರ ತರಲು ಉದ್ದೇಶಿಸಿರುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕರಡಿನಲ್ಲಿ ನಮೂದಿಸಿರುವ ಕಾರಣಗಳು ಬಾಲಿಷವಾಗಿದೆ ಎಂದು ಮನು ಸೋಮಯ್ಯ ಹೇಳಿದರು.
ರೈತರ ಭೂಮಿಯನ್ನು ಯಾರೇ ಖರೀದಿಸಿದರೂ ಅದನ್ನು ಕೃಷಿ ಚಟುವಟಿಕೆಗೆ ಮಾತ್ರ ಉಪಯೋಗಿಸಬೇಕು. ಯಾವುದೇ ಕಾರಣಕ್ಕೂ ಇತರ ಚಟುವಟಿಕೆಗಳಿಗೆ ನೀಡಬಾರದು. ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಈ ಭೂ ಸುಧಾರಣೆ ಕಾಯ್ದೆ ಪರ ಹೇಳಿಕೆ ನೀಡಿರುವುದು ಸಮಂಜಸವಲ್ಲ. ಅವರು ಇಂತಹ ಕಾಯ್ದೆಯ ಪರ ನಿಲ್ಲುವ ಬದಲು ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಲು ಸರ್ಕಾರದೊಂದಿಗೆ ಸಮಾಲೋಚನೆ ನಡೆಸಲು ಮುಂದಾಗಲಿ ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್, ಖಜಾಂಚಿ ಇಟ್ಟೀರ ಸಬೀತಾ ಭೀಮಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಬಾಚಮಾಡ ಭವಿಕುಮಾರ್, ವಿವಿಧ ಹೋಬಳಿ ಅಧ್ಯಕ್ಷರಾದ ಆಲೆಮಾಡ ಮಂಜುನಾಥ್, ಚೆಂಗುಲಂಡ ಸೂರಜ್, ಪುಚ್ಚಿಮಾಡ ರಾಯ್ ಮಾದಪ್ಪ, ಪುಚ್ಚಿಮಾಡ ಶಿಲ್ಪ, ಎಂ.ಬಿ. ಅಶೋಕ, ಕೆ.ಎನ್. ಸುರೇಶ್, ಮಚ್ಚಾರಂಡ ಪ್ರವೀಣ್, ಚೇಮಿರ ಪ್ರಕಾಶ್, ಈರಪ್ಪ, ಚಪ್ಪುಡೀರ ಪಾರ್ಥ, ನೂರೆರ ಅರುಣ್, ಚಟ್ಟಂಗಡ ಕಂಬ ಕಾರ್ಯಪ್ಪ, ರೈತ ಮುಖಂಡರಾದ ಚೊಟ್ಟೆಯಂಡಮಾಡ ಮನು ತಿಮ್ಮಯ್ಯ, ಉದಯ, ತಡಿಯಂಗಡ ಸೋಮಣ್ಣ, ತೀತರಮಾಡ ರಾಜ ಮುಂತಾದವರು ಹಾಜರಿದ್ದರು.