ಮಲ್ಲಯುದ್ಧದಲ್ಲಿ ಭಾರತದ ಯೋಧರು ಹುತಾತ್ಮ
ನವದೆಹಲಿ, ಜೂ. 16: ಲಡಾಖ್‍ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವಿನ ಮಲ್ಲಯುದ್ಧದಲ್ಲಿ ಭಾರತದ ಮೂವರು ಯೋಧರು ಹತ್ಯೆಯಾಗಿದ್ದು ಸಂಚಲನ ಮೂಡಿಸಿತ್ತು. ಇದೀಗ ಚೀನಾ ಕಡೆಯೂ ಸಾವು-ನೋವು ಸಂಭವಿಸಿದೆ ಎಂದು ವರದಿಯಾಗಿದೆ. ಉಭಯ ದೇಶದ ಯೋಧರ ನಡುವಿನ ಸಂಘರ್ಷದಲ್ಲಿ ಭಾರತೀಯ ಸೇನೆಯ ಕರ್ನಲ್ ಮತ್ತು ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಇದೇ ವೇಳೆ ಚೀನಾದ ಕಡೆಯೂ ಸಾವು ನೋವು ಸಂಭವಿಸಿದೆ. ಇದೇ ವೇಳೆ ಉಭಯ ದೇಶಗಳ ನಡುವಿನ ಸೈನಿಕರು ಗುಂಡಿನ ದಾಳಿ ನಡೆಸಿಲ್ಲ. ಬದಲಿಗೆ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ. ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆಯ ಹಿರಿಯ ವರದಿಗಾರ್ತಿ ವಾಂಗ್ ವೆನ್ವೆನ್ ಎಂಬುವರು ಟ್ವೀಟ್ ಮಾಡಿ ಕಳೆದ ರಾತ್ರಿ ಭಾರತ ಮತ್ತು ಚೀನಾ ಯೋಧರ ನಡುವಿನ ಸಂಘರ್ಷದಲ್ಲಿ ಐವರು ಚೀನಾದ ಸೈನಿಕರು ಹತ್ಯೆಯಾಗಿದ್ದು 11 ಜನ ಗಾಯಗೊಂಡಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಗಾಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರು ಅತಿಕ್ರಮಣ ಪ್ರವೇಶ ಮಾಡಿದ್ದರು. ಈ ವೇಳೆ ಭಾರತೀಯ ಸೇನೆ ಅವರನ್ನು ಹಿಂದೆ ಸರಿಯುವಂತೆ ಎಚ್ಚರಿಕೆ ನೀಡಿದ್ದರೂ ಅದನ್ನು ನಿರಾಕರಿಸಿದ್ದರಿಂದ ಉಭಯ ದೇಶಗಳ ಯೋಧರ ನಡುವೆ ಸಂಘರ್ಷ ನಡೆದಿತ್ತು.
ರಾಜ್ಯವನ್ನು ರಕ್ಷಿಸಲು ವಿಶೇಷ ಹೋಮ
ಬೆಂಗಳೂರು, ಜೂ. 16: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಬೆಂಗಳೂರಿನ ಶಂಕರ ಮಠಕ್ಕೆ ಭೇಟಿ ನೀಡಿ ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕಿನಿಂದ ರಾಜ್ಯವನ್ನು ರಕ್ಷಿಸುವಂತೆ ವಿಶೇಷ ಪ್ರಾರ್ಥನೆ ನಡೆಸಿದರು. ಇದೇ ವೇಳೆ ವಿಶೇಷ ಹೋಮ ನಡೆಸಲಾಯಿತು. ಈ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಕೋವಿಡ್ ಕಾಟ ಇಲ್ಲವಾಗಿ ಜನರು ನೆಮ್ಮದಿಯಿಂದ ಬದುಕುವಂತಾಗಲಿ ಎಂಬ ಉದ್ದೇಶದಿಂದ ದೇವರಲ್ಲಿ ಪ್ರಾರ್ಥನೆ ಮಾಡಲು ಇಲ್ಲಿಗೆ ಆಗಮಿಸಿದ್ದೇನೆ. ರಾಜ್ಯದ ಹಣಕಾಸು ಪರಿಸ್ಥಿತಿ ಸರಿಯಿಲ್ಲದಿದ್ದರೂ ಕೂಡ ಒಂದು ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, 50 ಲಕ್ಷ ರೈತರಿಗೆ ಈ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಪ್ರತಿಯೊಬ್ಬ ರೈತರಿಗೆ 2000 ರೂಪಾಯಿ ಕೊಡುವಂತಹ ಯೋಜನೆಯಡಿ ಈಗಾಗಲೆ ಎರಡು ಸಾವಿರ ರೂಪಾಯಿ ನೀಡಲಾಗಿದೆ. ಪ್ರಧಾನಿ ಮೋದಿ ಆರು ಸಾವಿರ ರೂಪಾಯಿಯನ್ನು ರೈತರಿಗೆ ನೀಡುತ್ತಿದ್ದಾರೆ. ಅದಕ್ಕೆ ನಾವು ನಾಲ್ಕು ಸಾವಿರ ರೂಪಾಯಿ ಸೇರಿಸಿಕೊಡುವುದಾಗಿ ಘೋಷಿಸಿದ್ದೆವು. ಈಗಾಗಲೇ 2 ಸಾವಿರ ರೂ.ನೀಡಿದ್ದು, 50 ಲಕ್ಷ ರೈತರಿಗೆ ತಲಾ 2000 ರೂಪಾಯಿ ನೀಡಲು ಒಂದು ಸಾವಿರ ಕೋಟಿ ರೂಪಾಯಿ ನಿನ್ನೆ ಬಿಡುಗಡೆ ಮಾಡಲಾಗಿದೆ. ರೈತರ ಸಂಕಷ್ಟ ಕಾಲದಲ್ಲಿ ಹಣಕಾಸು ಸ್ಥಿತಿ ಸರಿಯಿಲ್ಲದಿದ್ದರೂ ಅವರು ನೆಮ್ಮದಿಯಿಂದ ಬದುಕಬೇಕು, ಮಳೆಗಾಲದಲ್ಲಿ ಈ ಹಣ ಉಪಯೋಗ ಆಗಬೇಕು ಎಂಬ ಕಾರಣದಿಂದ ಹಣ ಬಿಡುಗಡೆ ಮಾಡಿದ್ದೇನೆ ಎಂದರು.
ಸಹಾಯವಾಣಿಯ 80 ಸಿಬ್ಬಂದಿಗಳಿಗೆ ಸೋಂಕು
ಲಖನೌ, ಜೂ. 16: ಮಾರಕ ಕೊರೊನಾ ವೈರಸ್ ದಿನೇ ದಿನೇ ತನ್ನ ಆರ್ಭಟ ಹೆಚ್ಚಿಸುತ್ತಿದ್ದು, ಇದೀಗ ಉತ್ತರ ಪ್ರದೇಶ ಸಿಎಂ ಸಹಾಯವಾಣಿ ಕೇಂದ್ರದ 80 ಸಿಬ್ಬಂದಿಗಳಲ್ಲಿ ಸೋಂಕು ಕಾಣಿಸಿಕೊಂಡು ಭೀತಿ ಸೃಷ್ಟಿಸಿದೆ. ಉತ್ತರ ಪ್ರದೇಶದ ಸಿಎಂ ಯೋದಿ ಆದಿತ್ಯಾನಾಥ್ ಅವರ ಕಚೇರಿಯ ಸಹಾಯವಾಣಿ ಕೇಂದ್ರ (1076) ಸುಮಾರು 80 ಸಿಬ್ಬಂದಿಗಳಿಗೆ ಕೊರೊನಾ ಸೋಂಕು ತಗುಲಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಮಂಗಳವಾರ ಮಾಹಿತಿ ನೀಡಿದ್ದು, ಸಹಾಯವಾಣಿ ಕೇಂದ್ರದ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೇಶದಲ್ಲೇ ಮೊದಲ ಪ್ರಕರಣವಾಗಿದೆ. ಮುಖ್ಯಮಂತ್ರಿಗಳ ಕಚೇರಿಯ ಸಹಾಯವಾಣಿ ಕೇಂದ್ರವನ್ನು ಯೋಗಿ ಸರ್ಕಾರ ಹೊರ ಗುತ್ತಿಗೆ ನೀಡಿದ್ದು, 4-5 ದಿನಗಳ ಹಿಂದೆ ಕಚೇರಿಯಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. ಬಳಿಕ ಈ ಸಂಖ್ಯೆ ಇದೀಗ 80ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು ಸಹಾಯವಾಣಿ ಕೇಂದ್ರಕ್ಕೆ ತಿಂಗಳ ಹಿಂದೆ ಭೇಟಿ ನೀಡಲಾಗಿತ್ತು. ಆಗ ಎಲ್ಲರಿಗೂ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿತ್ತು, ಮಾಸ್ಕ್, ಸ್ಯಾನಿಟೈಸರ್, ಕೈ ತೊಳೆಯುವಿಕೆ ಕಡ್ಡಾಯ ಮಾಡಲಾಗಿತ್ತು ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಚರ್ಚೆ
ನವದೆಹಲಿ, ಜೂ. 16: ಕೊರೊನಾ ವಿರುದ್ಧದ ಹೋರಾಟ ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಉತ್ತಮ ಉದಾಹರಣೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೇಶದ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಜೊತೆಗೆ ಮಂಗಳವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸಿದ ಪ್ರಧಾನಿ ಮೋದಿ, “ನಮ್ಮ ಕಾರ್ಯವೈಖರಿಯು ಸಹಕಾರÀ ಒಕ್ಕೂಟ ವ್ಯವಸ್ಥೆಗೆ ಒಂದು ಮಾದರಿಯಾಗಿ ಉಳಿಯಲಿದೆ. ಮುಂದಿನ ತಲೆಮಾರು ಸಹ ಅದೇ ರೀತಿ ನೆನಪಿಟ್ಟುಕೊಳ್ಳಲಿದೆ” ಎಂದು ಹೇಳಿದರು. ಕೊರೋನಾ ವೈರಸ್‍ಪಿಡುಗಿಗೆ ಬಲಿಯಾದವರ ಬಗ್ಗೆ ಕಾನ್ಫ್‍ರೆನ್ಸ್‍ನ ಆರಂಭದಲ್ಲಿಯೇ ಸಂತಾಪ ವ್ಯಕ್ತಪಡಿಸಿದ ಪ್ರಧಾನಿ ಮೋದಿ, 'ಕೊರೋನಾ ಪಿಡುಗಿನ ವಿರುದ್ಧ ನಾವು ಒಂದು ದೇಶವಾಗಿ ಹೇಗೆ ಹೋರಾಡಿದೆವು ಎನ್ನುವುದನ್ನು ಮುಂದಿನ ತಲೆಮಾರು ನೆನಪಿಟ್ಟುಕೊಳ್ಳಲಿದೆ. ದೇಶವನ್ನು ಅಲ್‍ಲಾಕ್ ಮಾಡುವ ಮೊದಲ ಪ್ರಯತ್ನಕ್ಕೆ ಎರಡು ವಾರ ಆಗಿದೆ. ಈ ಅವಧಿಯಲ್ಲಿ ನಮಗೆ ಆದ ಅನುಭವಗಳು ಮುಂದಿನ ದಿನಕ್ಕೆ ಮಾರ್ಗದರ್ಶಿ ಆಗಬಲ್ಲದು. ನೀವು ನೀಡುವ ವಾಸ್ತವ ಚಿತ್ರಣ ಮತ್ತು ಸಲಹೆಗಳನ್ನು ಆಧರಿಸಿ ಮುಂದಿನ ಕಾರ್ಯತಂತ್ರ ರೂಪಿಸಲಾಗುವುದು. ಕಳೆದ ಕೆಲವಾರಗಳ ಅವಧಿಯಲ್ಲಿ ಸಾವಿರಾರು ಅನಿವಾಸಿ ಭಾರತೀಯರನ್ನು ಸ್ವದೇಶಕ್ಕೆ ವಾಪಸ್ ಕರೆತರಲಾಗಿದೆ. ಲಕ್ಷಾಂತರ ವಲಸೆ ಕಾರ್ಮಿಕರನ್ನು ಅವರವರ ತವರಿಗೆ ಕಳುಹಿಸಲಾಗಿದೆ. ದೇಶದ ಎಲ್ಲ ರೀತಿಯ ಸಾರಿಗೆ ಸೇವೆಗಳು ಪುನಾರಂಭಗೊಂಡಿವೆ ಎಂದು ಹೇಳಿದರು.
ಮಂಜುನಾಥನ ದರ್ಶನ ಸಮಯ ಬದಲು
ಮಂಗಳೂರು, ಜೂ. 16: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಜೂನ್ 21ರ ಭಾನುವಾರದಂದು ಮಂಜುನಾಥ ಸ್ವಾಮಿಯ ದರ್ಶನದ ಸಮಯವನ್ನು ಬದಲಾವಣೆ ಮಾಡಲಾಗಿದೆ. ಭಾನುವಾರ ಸೂರ್ಯಗ್ರಹಣ ಇರುವ ಹಿನ್ನೆಲೆ ದರ್ಶನ ಸಮಯ ಬದಲು ಮಾಡಲಾಗಿದ್ದು, ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಮಂಜುನಾಥ ಸ್ವಾಮಿ ದರ್ಶನ ಇಲ್ಲ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ. ಹೀಗಾಗಿ ಬೆಳಿಗ್ಗೆ 5.30 ಯಿಂದ 9 ಗಂಟೆಯವರಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ನಂತರ ಸಂಜೆ 4 ರಿಂದ ರಾತ್ರಿ 9ರವರೆಗೆ ದರ್ಶನಕ್ಕೆ ಅವಕಾಶ ಕೊಡಲಾಗಿದೆ ಎಂದು ಪ್ರಕರಣೆಯಲ್ಲಿ ತಿಳಿಸಿದೆ. ಕೊರೊನಾ ಆತಂಕದಿಂದ ಕಳೆದ ಎರಡೂವರೆ ತಿಂಗಳಿಂದ ಲಾಕ್ ಆಗಿದ್ದ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದೇವಸ್ಥಾನ ಜೂನ್ 8 ರಿಂದ ಓಪನ್ ಆಗಿದೆ. ಸಾವಿರಾರು ಭಕ್ತರು ಮುಡಿಕೇಂದ್ರದಲ್ಲಿ ಮುಡಿಕೊಟ್ಟು, ನೇತ್ರಾವತಿ ನದಿಯಲ್ಲಿ ಮಿಂದು ಮಂಜುನಾಥನ ದರ್ಶನ ಪಡೆಯುತ್ತಿದ್ದಾರೆ. ಕ್ಷೇತ್ರದ ಸಿಬ್ಬಂದಿ ಮತ್ತು ಅರ್ಚಕರು ದೇವಸ್ಥಾನ ಪ್ರವೇಶಕ್ಕೂ ಮುನ್ನ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಜೇಷನ್, ಮಾಸ್ಕ್, ಗ್ಲೌಸ್ ಮತ್ತು ಫೇಸ್ ಶೀಲ್ಡ್ ಕಡ್ಡಾಯ ಮಾಡಲಾಗಿದೆ.
ಗಾಜಿನ ಬಾಗಿಲಿಗೆ ಡಿಕ್ಕಿಯಾಗಿ ಸಾವು
ತಿರುವನಂತಪುರಂ, ಜೂ. 16: ಬ್ಯಾಂಕ್‍ನಿಂದ ಹೊರಗೆ ಓಡುವ ಭರದಲ್ಲಿ ಮಹಿಳೆಯೊಬ್ಬರು ಗಾಜಿನ ಡೋರಿಗೆ ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಕೇರಳದ ಪೆರುಂಬವೂರ್‍ನಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಪೆರುಂಬವೂರಿನ ಬೀನಾ ಜಿಜು ಪಾಲ್ (46) ಎಂದು ಗುರುತಿಸಲಾಗಿದೆ. ಬ್ಯಾಂಕ್ ಆಫ್ ಬರೋಡಾದ ಪೆರುಂಬವೂರ್ ಶಾಖೆಯಲ್ಲಿ ಈ ಘಟನೆ ನಡೆದಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೀನಾ ವಹಿವಾಟು ನಡೆಸಲು ಬ್ಯಾಂಕಿಗೆ ಭೇಟಿ ನೀಡಿದ್ದರು. ಬಳಿಕ ಬ್ಯಾಂಕ್‍ನಿಂದ ವೇಗವಾಗಿ ಹೊರಗೆ ಹೆಜ್ಜೆ ಹಾಕುತ್ತಿದ್ದಾಗ ಗಾಜಿನ ಬಾಗಿಲು ಇದೆ ಎನ್ನುವುದನನ್ನೇ ಮರೆತಿದ್ದರು. ಪರಿಣಾಮ ಡಿಕ್ಕಿ ಗೊಡೆದಿದ್ದರಿಂದ ಎದೆಗೆ ಭಾರೀ ಹೊಡೆತ ಬಿದ್ದಿತ್ತು. ಅಷ್ಟೇ ಅಲ್ಲದೆ ಗಾಜು ಬೀನಾ ಅವರ ಹೊಟ್ಟೆಗೆ ಚುಚ್ಚಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಹಿಳೆ ಬೈಕ್‍ನಲ್ಲಿ ಕೀ ಬಿಟ್ಟು ಬ್ಯಾಂಕ್ ಒಳಗೆ ಬಂದಿದ್ದರು. ಹೀಗಾಗಿ ಬ್ಯಾಂಕ್‍ನಿಂದ ಹೊರಗೆ ವೇಗವಾಗಿ ಹೋಗುತ್ತಿದ್ದಾಗ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.