ಕುಶಾಲನಗರ, ಜೂ 16 : ಕಾವೇರಿ - ಕನ್ನಿಕಾ ನದಿಗಳ ಶುದ್ಧೀಕರಣ ಕಾರ್ಯ ಉತ್ತಮವಾದುದೇ. ಆದರೆ, ಕಾಮಗಾರಿ ನಿರ್ವಹಣೆ ತೀರ ಅಸಮರ್ಪಕವಾಗಿದೆ. ಈ ಬಗ್ಗೆ ಯೋಜನೆಯ ಹೊಣೆ ಹೊತ್ತಿರುವ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತುರ್ತು ಗಮನ ಹರಿಸುವಂತೆ ಭಾಗಮಂಡಲದ ಕೆಲವು ನಾಗರಿಕರು ಆಗ್ರಹಿಸಿದ್ದಾರೆ.

ದಕ್ಷಿಣ ಭಾರತದ ಜೀವನದಿ ಕಾವೇರಿ ಶುದ್ಧೀಕರಣ ಕಾರ್ಯಕ್ಕೆ ಮೂಲ ಕಾವೇರಿಯ ಎರಡು ಭಾಗ ಗಳಲ್ಲಿ ಈ ಸಾಲಿನಲ್ಲಿ ಯೋಜನೆಗಳು ಕಾರ್ಯಗತವಾಗು ವುದರೊಂದಿಗೆ ಕಳೆದ ಎರಡು ತಿಂಗಳಿನಿಂದ ಬಿರುಸಿನ ಕಾಮಗಾರಿ ನಡೆದಿದೆ. ತಲಕಾವೇರಿ-ಭಾಗಮಂಡಲ ವ್ಯಾಪ್ತಿಯಲ್ಲಿ ಕಾವೇರಿ ಕನ್ನಿಕೆ ಶುದ್ಧೀಕರಣ ಕಾರ್ಯಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ಆದೇಶ ನೀಡಿದ ಹಿನ್ನೆಲೆಯಲ್ಲಿ ನಡೆದಿದ್ದರೆ, ಇತ್ತ ಕುಶಾಲನಗರ ಪಟ್ಟಣ ವ್ಯಾಪ್ತಿ ಯಲ್ಲಿ ಕಾವೇರಿ ನದಿ ನಿರ್ವಹಣೆ ಕಾಮಗಾರಿಯನ್ನು ಸ್ಥಳೀಯ ಪ್ರವಾಹ ಸಂತ್ರಸ್ತರ ವೇದಿಕೆ ಮನವಿ ಮೇರೆಗೆ ಸರಕಾರ ಕೈಗೆತ್ತಿಕೊಂಡಿತ್ತು.

ಭಾಗಮಂಡಲದ ನಿವಾಸಿ ಎಸ್.ಇ.ಜಯಂತ್ (ಮೊದಲ ಪುಟದಿಂದ) ಅವರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೇರೆಗೆ ರಾಜ್ಯ ಉಚ್ಚ ನ್ಯಾಯಾಲಯ ವಕೀಲರಾದ ಭಾಗಮಂಡಲದ ನಿವಾಸಿ ಮೊಟ್ಟನ ಸಿ ರವಿಕುಮಾರ್ ಅವರು ವಕಾಲತ್ತು ಮಾಡುವುದರೊಂದಿಗೆ ಭಾಗಮಂಡಲ ವ್ಯಾಪ್ತಿಯಲ್ಲಿ ಕಾವೇರಿ-ಕನ್ನಿಕೆಯ 11.5 ಕಿಮೀ ಉದ್ದಕ್ಕೆ ಗಿಡಗಂಟಿಗಳನ್ನು ತೆರವುಗೊಳಿಸುವುದು ಮತ್ತು ನದಿಯ ಹೂಳೆತ್ತಿ ಆಳ ಮಾಡುವುದರೊಂದಿಗೆ ತ್ರಿವೇಣಿ ಸಂಗಮದಲ್ಲಿ ಉಂಟಾಗುತ್ತಿರುವ ಪ್ರವಾಹವನ್ನು ತಪ್ಪಿಸುವಂತೆ ಯೋಜನೆ ರೂಪಿಸಲಾಗಿತ್ತು. ಕಳೆದ ಮಾರ್ಚ್ ತಿಂಗಳಿನಿಂದ ಚೇರಂಗಾಲ, ತಣ್ಣಿಮಾನಿ ವ್ಯಾಪ್ತಿಯಿಂದ ನದಿ ಸ್ವಚ್ಛತೆ ಮತ್ತು ನಿರ್ವಹಣೆ ಕಾಮಗಾರಿ ಪ್ರಾರಂಭಗೊಂಡ ನಡುವೆ ಕೊರೊನಾ ಲಾಕ್‍ಡೌನ್ ಕಾಮಗಾರಿಗೆ ಹಿನ್ನಡೆ ಉಂಟುಮಾಡಿತ್ತು. ಕನ್ನಿಕೆ ನದಿಯ ಮೂಲಭಾಗದಿಂದ ಕಾಮಗಾರಿ ಹಿಟಾಚಿಗಳ ಮೂಲಕ ಬಹುತೇಕ ಸುಸೂತ್ರವಾಗಿ ನಡೆದಿದ್ದರೂ ನದಿಯಿಂದ ಎತ್ತಿದ ಮಣ್ಣನ್ನು ನದಿ ಬದಿಗೆ ಸುರಿದಿರುವ ಕಾರಣ ಅದು ಮತ್ತೆ ನದಿಯ ಒಡಲಿಗೆ ಸೇರುವ ಪರಿಸ್ಥಿತಿ ಸೃಷ್ಟಿಯಾಗಿದೆ.

ಇನ್ನೊಂದೆಡೆ ಚೇರಂಗಾಲ ಭಾಗದಿಂದ ಕಾವೇರಿ ನದಿಯ ನಿರ್ವಹಣೆ ಕಾಮಗಾರಿ ಮಾತ್ರ ಸಮರ್ಪಕವಾಗಿ ನಡೆದಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಕಾವೇರಿ ತುಂಬಿ ಹರಿದಾಗ ಎರಡೂ ತಟಗಳ ನೂರಾರು ಎಕರೆ ಭೂಮಿ, ಹೊಲ, ಗದ್ದೆ, ಜಲಾವೃತಗೊಳ್ಳುವುದು ಪ್ರತಿ ವರ್ಷದ ವಾಡಿಕೆಯಾಗಿದೆ. ಇದನ್ನು ತಪ್ಪಿಸುವಲ್ಲಿ ನದಿಯ ಅಗಲ ಮತ್ತು ಆಳ ಮಾಡುವ ಕಾಮಗಾರಿ ನಡೆಯದೆ ಇದೊಂದು ವ್ಯರ್ಥ ಯೋಜನೆ ಎನ್ನುವುದು ಇಲ್ಲಿನ ಹಲವರ ಆರೋಪವಾಗಿದೆ.

ಸಂಗಮದ ಹಿಂದೆ ಸುಮಾರು 300 ಮೀ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕಾಮಗಾರಿ ಕೈಗೊಂಡಿಲ್ಲ ಎನ್ನುವ ಆರೋಪ ಅಲ್ಲಿನ ಕೃಷಿಕರದು. ಕೆಳಭಾಗದಲ್ಲಿ ನದಿಯ ಒಂದು ಭಾಗದ ಗದ್ದೆ ಮೇಲೆ ಮಣ್ಣನ್ನು ಮಟ್ಟ ಮಾಡಿರುವ ದೃಶ್ಯ ಕಾಣುತ್ತಿದೆಯೇ ಹೊರತು ಇನ್ನೊಂದು ಬದಿಯಲ್ಲಿ ಗಿಡಗಂಟಿಗಳ ತೆರವು ಕಾರ್ಯ ಮಾಡಿಲ್ಲ ಎನ್ನುವ ದೂರು ಕೇಳಿಬರುತ್ತಿದೆ. ನದಿಯನ್ನು ಅಲ್ಪ ಪ್ರಮಾಣದಲ್ಲಿ ಮೂಲ ಸ್ವರೂಪಕ್ಕೆ ತಂದಿದ್ದಲ್ಲಿ ಯೋಜನೆಯ ಉದ್ದೇಶ ಈಡೇರುತ್ತಿತ್ತು ಎನ್ನುವುದು ಭಾಗಮಂಡಲದ ಹಿರಿಯರು ಹಾಗೂ ಕೃಷಿಕರಾದ ಸೂರ್ಯಭಟ್ ಅವರ ಅಭಿಪ್ರಾಯವಾಗಿದೆ.

ಇನ್ನೊಂದೆಡೆ ಕಾಮಗಾರಿ ನಡೆಯುತ್ತಿದ್ದಂತೆ ನದಿಯಲ್ಲಿ ನೀರಿನ ಹರಿವು ಏರಿಕೆಯಾದ ಕಾರಣ ಕೆಲಸಕ್ಕೆ ಹಿನ್ನಡೆಯಾಗಿದೆ ಎಂದು ಅವರು ‘ಶಕ್ತಿ’ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ ನೂರಾರು ವರ್ಷಗಳಿಂದ ನದಿ ನಿರ್ವಹಣೆ ಕಾಮಗಾರಿ ನಡೆಯದೆ ನೀರು ಸರಾಗವಾಗಿ ಹರಿಯಲು ಅಡ್ಡಿಯುಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಮೂಲಕ ರಾಜ್ಯ ಉಚ್ಛನ್ಯಾಯಾಲಯ ರಾಜ್ಯ ಸರಕಾರಿ, ಜಿಲ್ಲಾಡಳಿತ, ಸಂಬಂಧಿಸಿದ ಇಲಾಖೆಗಳಿಗೆ ತಕ್ಷಣ ಕಾಮಗಾರಿ ಕೈಗೊಂಡು ನ್ಯಾಯಾಲಯಕ್ಕೆ ವರದಿ ನೀಡುವಂತೆ ಆದೇಶ ಹೊರಬಿದ್ದಿತ್ತು. ಹೈಕೋರ್ಟ್ ವಕೀಲ ಭಾಗಮಂಡಲದ ನಿವಾಸಿಯಾಗಿರುವ ಮೊಟ್ಟನ ಸಿ. ರವಿಕುಮಾರ್ ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದು, ನದಿ ನಿರ್ವಹಣೆ ಕಾಮಗಾರಿ ಅಪರೂಪದ ಒಂದು ಯೋಜನೆಯಾಗಿದ್ದು, ಇದರ ಕೆಲಸ ನಡೆಯುವ ಸಂದರ್ಭ ಪ್ರತಿಯೊಬ್ಬರೂ ಆಸಕ್ತಿ ತೋರುವುದರೊಂದಿಗೆ ಅದರ ಉಸ್ತುವಾರಿ ಕೂಡ ವಹಿಸಬೇಕು ಎಂದಿದ್ದಾರೆ. ರವಿಕುಮಾರ್ ತಮಗೂ ಈ ಕಾಮಗಾರಿ ತೃಪ್ತಿ ತಂದಿಲ್ಲ ಎಂದು ಅವರು ತಿಳಿಸಿದ್ದಾರೆ. ಕಾವೇರಿ ಮತ್ತು ಕನ್ನಿಕೆಯ ಸಣ್ಣ ಪುಟ್ಟ ತೊರೆಗಳ ನಿರ್ವಹಣೆ ಮಾಡಲು ಕೂಡ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು ಎಂದಿದ್ದಾರೆ.

ಕನ್ನಿಕೆ ಶುದ್ಧೀಕರಣ ಕಾರ್ಯ ಬಹುತೇಕ ನಡೆದಿದ್ದು ಭಾಗಮಂಡಲ ಸಂಗಮ ಸಮೀಪಕ್ಕೆ ಬಂದಂತೆ ಕಾಮಗಾರಿ ಬೇಕಾಬಿಟ್ಟಿ ನಡೆದಿದೆ. ತಮ್ಮ ತೋಟದ ಕಾಫಿ ಗಿಡಗಳನ್ನು ನಾಶಗೊಳಿಸಿದ್ದಾರೆ ಎಂದು ಸ್ಥಳೀಯ ನಿವಾಸಿ ಪುರುಷೋತ್ತಮ್ ಭಟ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಈ ಬಗ್ಗೆ ಸ್ಥಳೀಯ ಗ್ರಾ.ಪಂ. ಅಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದು ಪರಿಹಾರ ಕೋರಲಾಗಿದೆ ಎಂದು ತಿಳಿಸಿದ್ದಾರೆ.

ಅಂದಾಜು ರೂ. 95.11 ಲಕ್ಷ ವೆಚ್ಚದ ಕಾಮಗಾರಿ ನಡೆಯಬೇಕಾಗಿದ್ದರೂ ಗುತ್ತಿಗೆದಾರರಿಗೆ ಅಂದಾಜು ಪಟ್ಟಿಯಂತೆ ಕೆಲಸ ಮಾಡಲು ಸಾಧ್ಯವಾಗಿಲ್ಲ ಎನ್ನುವ ದೂರುಗಳು ಕೇಳಿಬರುತ್ತಿದ್ದು ಈ ಬಗ್ಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಿ ಕಾವೇರಿ, ಕನ್ನಿಕೆ ಶುದ್ಧೀಕರಣ ಕಾರ್ಯ ಸುಗಮವಾಗಿ ನಡೆಯುವಂತೆ ಉಸ್ತುವಾರಿ ವಹಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಯೋಜನೆ ಮೂಲಕ ಸಂಗಮ ಪ್ರದೇಶದಲ್ಲಿ ಚೇರಂಗಾಲ, ತಣ್ಣಿಮಾನಿ ಪ್ರದೇಶಗಳಲ್ಲಿ ಪ್ರವಾಹ ಬಾರದಂತೆ, ಭತ್ತದ ಗದ್ದೆಗಳು ಮುಳುಗಡೆಯಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿದ್ದರೂ, ಸಮರ್ಪಕವಾಗಿ ಕಾಮಗಾರಿ ನಡೆಯದ ಹಿನ್ನೆಲೆಯಲ್ಲಿ ಮತ್ತೆ ಪ್ರವಾಹ ಮರುಕಳಿಸಬಾರದು ಎನ್ನುವುದು ಈ ಭಾಗದ ಜನತೆಯ ಆಶಯವಾಗಿದೆ. ಕಾವೇರಿ ಮತ್ತು ಕನ್ನಿಕೆಯಿಂದ ಹೊರತೆಗೆದ ಮಣ್ಣನ್ನು ನದಿ ತಟದಲ್ಲಿ ಹಾಕಲಾಗಿದ್ದು, ಅದು ಮತ್ತೆ ನದಿ ಒಡಲು ಸೇರುವುದರಿಂದ ಕಾಮಗಾರಿ ವ್ಯರ್ಥವಾಗಬಾರದು. ಈ ಮಣ್ಣನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಕಲ್ಪಿಸುವ ನಿಟ್ಟಿನಲ್ಲಿ ಬಿದಿರು ಮತ್ತಿತರ ಗಿಡಗಳನ್ನು ಈ ಸಾಲಿನಿಂದಲೇ ನೆಟ್ಟು ಬೆಳೆಸುವ ಯೋಜನೆ ರೂಪಿಸಬೇಕು ಎಂದು ‘ಶಕ್ತಿ’ಮೂಲಕ ಕೋರಿದ್ದಾರೆ.

ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಬಗ್ಗೆ ಪರಿಶೀಲನೆ ನಡೆಸಬೇಕು ಎನ್ನುವುದು ಇಲ್ಲಿನ ಜನರ ಆಗ್ರಹವಾಗಿದೆ.

- ವರದಿ-ಚಂದ್ರಮೋಹನ್