ಮಡಿಕೇರಿ, ಜೂ. 15: ಇಲ್ಲಿನ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಚಾಲಕರೊಬ್ಬರು ಬೆಂಗಳೂರು ‘ಸ್ಯಾಟ್‍ಲೈಟ್’ ಬಸ್ ನಿಲ್ದಾಣದ ವಸತಿ ಗೃಹದಿಂದ ಸುಮಾರು 20 ಅಡಿಯಷ್ಟು ಕೆಳಗೆ ಬಿದ್ದು ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿರುವ ಘಟನೆ ತಾ. 12 ರಂದು ರಾತ್ರಿ ಸಂಭವಿಸಿದೆ. ಗಾಯಾಳುವನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.ನಗರದ ಸಾರಿಗೆ ಸಂಸ್ಥೆಯ ವಸತಿ ಗೃಹದ ಚಾಲಕ ಸುಧಾಕರ್ (53) ಅವರು ಕಳೆದ ಶುಕ್ರವಾರ ಮಡಿಕೇರಿಯಿಂದ ಬೆಂಗಳೂರು ಬಸ್‍ನಲ್ಲಿ (ಕೆಎ 21-113) ತೆರಳಿದ್ದು, ಅಲ್ಲಿನ ‘ಸ್ಯಾಟ್‍ಲೈಟ್’ ನಿಲ್ದಾಣದಲ್ಲಿ ರಾತ್ರಿ ಬಸ್ ನಿಲ್ಲಿಸಿ, ಸಂಸ್ಥೆಯ ವಸತಿ ಗೃಹದ ಮಹಡಿಯ ಕೊಠಡಿಯಲ್ಲಿ ತಂಗಲು ತೆರಳಿದ್ದಾಗಿ ತಿಳಿದು ಬಂದಿದೆ.ಅನಂತರದಲ್ಲಿ ಸುಧಾಕರ್ ಅವರು ವಸತಿ ಗೃಹದ ಕಿಟಕಿಯ ಮೂಲಕ 20 ಅಡಿಯಷ್ಟು ಕೆಳಗೆ ಬಿದ್ದಿದ್ದು, ಪರಿಣಾಮವಾಗಿ ಪ್ರಜ್ಞಾಶೂನ್ಯವಾಗಿ ಸೊಂಟ, ತಲೆ ಮುಂತಾದೆಡೆ ಗಂಭೀರ ಪೆಟ್ಟಾಗಿ ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಘಟನೆ ಹೇಗೆ ಸಂಭವಿಸಿದೆ; ಆಕಸ್ಮಿಕವೇ ಅಥವಾ ಯಾರಾದರೂ ಸಂಚು ನಡೆಸಿದರೆ; ಕೊಲೆಯತ್ನವೆ? ಎಂಬಿತ್ಯಾದಿ ಸಂಶಯ ಹುಟ್ಟಿಕೊಂಡಿದೆ.

ಈ ದುರ್ಘಟನೆಯ ಬಳಿಕ ಸುಧಾಕರ್ ಮಾತನಾಡುವ ಸ್ಥಿತಿಯಲ್ಲಿ ಇಲ್ಲದ್ದರಿಂದ ಇದುವರೆಗೆ ಕಾರಣ ತಿಳಿದು ಬಂದಿಲ್ಲ. ಗಾಯಾಳುವಿನ ಕುಟುಂಬ ಬೆಂಗಳೂರಿಗೆ ತೆರಳಿದ್ದು, ಪ್ರಜ್ಞಾಶೂನ್ಯ ಸ್ಥಿತಿಯಿಂದ ಸುಧಾಕರ್ ವಾಸ್ತವ ತಿಳಿಸಿದ ಬಳಿಕವಷ್ಟೇ ಸತ್ಯ ಗೊತ್ತಾಗಬೇಕಿದೆ ಎಂದು ಮೂಲಗಳು ತಿಳಿಸಿವೆ.