ಕೂಡಿಗೆ, ಜೂ. 15: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದ ಸಮೀಪದಲ್ಲಿರುವ ಊಳುಗಲ್ಲಿ ಮಟ್ಟಿ ಎಂಬ ಬೆಟ್ಟದ ತುದಿಯಲ್ಲಿ ನಿವೇಶನ ರಹಿತರಿಂದ. ಬೆಟ್ಟದ ಮೇಲೆ ಮನೆ ನಿರ್ಮಾಣ ಎಂಬ ಸುದ್ದಿಯು ತಾ. 14 ರಂದು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಪತ್ರಿಕಾ ವರದಿಕ್ಕೆ ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಸ್ಪಂದಿಸಿದೆ.

ಜಿಲ್ಲಾಧಿಕಾರಿ ಅದೇಶದ ಮೇರೆಗೆ ಕುಶಾಲನಗರ ಹೋಬಳಿ ಕಂದಾಯ ಇಲಾಖೆ ಕೂಡಿಗೆ ಗ್ರಾಮ ವಿಭಾಗದ ಲೆಕ್ಕಾಧಿಕಾರಿ ಗುರುದರ್ಶನ್ ಮತ್ತು ಕೂಡಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿಲ್ಪಾ ಸೇರಿದಂತೆ ಇಲಾಖೆಯವರು ಇಂದು ಬೆಟ್ಟದ ಮೇಲೆ ಮನೆ ನಿರ್ಮಾಣ ಮಾಡಿರುವ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದರು. ಅಲ್ಲದೆ ಹೊಸದಾಗಿ ಮನೆ ನಿರ್ಮಿಸಲು ಸಿದ್ಧತೆ ಮಾಡುತ್ತಿದ್ದ ಜಾಗವನ್ನು ವೀಕ್ಷಣೆ ಮಾಡಿದರು.ನಂತರ ವಸತಿ ರಹಿತರು ಪೈಸಾರಿ ಜಾಗದಲ್ಲಿ (ಮೊದಲ ಪುಟದಿಂದ) ಮನೆ ನಿರ್ಮಾಣ ಕಾರ್ಯವನ್ನು ಮಾಡುತ್ತಿರುವುದು ಸರಿಯಾದ ಕ್ರಮವಲ್ಲ; ಬೆಟ್ಟದ ತುದಿಯಲ್ಲಿ ತಗ್ಗು ಪ್ರದೇಶ ಇರುವುದರಿಂದ ಅನಾಹುತಗಳು ಸಂಭವಿಸಬಹುದು ಎಂಬ ಮುನ್ನೆಚ್ಚರಿಕೆ ನೀಡಿದರು. ಯಾರು ಮನೆ ನಿರ್ಮಾಣದ ಕೆಲಸಕ್ಕೆ ಮುಂದಾಗಬಾರದು ಎಂದು ಸೂಚನೆ ನೀಡಿದರು. ಮಂದಿನ ದಿನಗಳಲ್ಲಿ ಅನಧಿಕೃತ ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ತೊಡಗಿದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸೂಚನೆ ನೀಡಿದ್ದಾರೆ.