ಮಡಿಕೇರಿ, ಜೂ. 15 : ತಾ. 18 ರಂದು ಪಿಯುಸಿ ಇಂಗ್ಲೀಷ್ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ಸಿದ್ಧತೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾಹಿತಿ ಪಡೆದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾಹಿತಿ ಪಡೆದ ಜಿಲ್ಲಾಧಿಕಾರಿ ಅವರು ಈಗಾಗಲೇ ಮಳೆಗಾಲ ಆರಂಭವಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಯಾವುದೇ ರೀತಿ ತೊಂದರೆಯಾಗದಂತೆ ಗಮನಹರಿಸಬೇಕು ಎಂದರು.

ಪರೀಕ್ಷಾ ಕೇಂದ್ರದಲ್ಲಿ ಸ್ಯಾನಿಟೈಸರ್, ಮಾಸ್ಕ್, ಥರ್ಮಲ್ ಸ್ಕ್ಯಾನರ್ ವ್ಯವಸ್ಥೆ ಮಾಡುವುದು, ಹೆಚ್ಚುವರಿ ಕೊಠಡಿ ಕಾಯ್ದಿರಿಸುವುದು. ಹೊರ ರಾಜ್ಯದ ವಿದ್ಯಾರ್ಥಿಗಳು ಪರೀಕ್ಷೆ ನಡೆಯುವ ಹಿಂದಿನ ದಿನವೇ ಆಗಮಿಸುವಂತಾಗಲು ಅಗತ್ಯ ವ್ಯವಸ್ಥೆ ಮಾಡುವುದು ಮತ್ತಿತರ ಅಗತ್ಯ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈಗಾಗಲೇ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಪಾಸ್ ವಿತರಿಸಲಾಗಿದ್ದು, ಪರೀಕ್ಷಾ ಕೇಂದ್ರಕ್ಕೆ ಬರುವಂತಾಗಲು ಮಾಹಿತಿ ನೀಡುವುದು, ಪರೀಕ್ಷಾ ಕೇಂದ್ರಕ್ಕೆ ಪ್ರಶ್ನೆ ಪತ್ರಿಕೆ ತೆಗೆದುಕೊಂಡು ಹೋಗಲು ಮತ್ತು ಉತ್ತರ ಪತ್ರಿಕೆ ತೆಗೆದುಕೊಂಡು ಬರಲು ಅಧಿಕಾರಿಗಳನ್ನು ನಿಯೋಜಿಸುವುದು ಮತ್ತಿತರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಿವಲಿಂಗ ಶೆಟ್ಟಿ ಅವರು ಮಾಹಿತಿ ನೀಡಿ ತಾ. 18 ರಂದು ಪಿಯುಸಿ ಇಂಗ್ಲೀಷ್ ಪರೀಕ್ಷೆ ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಜಿಲ್ಲೆಯ 16 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಒಟ್ಟು 5,927 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇವರಲ್ಲಿ 477 ಹೊರ ಜಿಲ್ಲೆಯ ಮತ್ತು ಹೊರ ರಾಜ್ಯದ 10 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್.ಮಚ್ಚಾಡೋ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಜಿಲ್ಲಾ ಖಜಾನಾಧಿಕಾರಿ ಪದ್ಮಜ, ಕೆಎಸ್‍ಆರ್‍ಟಿಸಿ ಘಟಕ ವ್ಯವಸ್ಥಾಪಕಿ ಗೀತಾ, ಪೊಲೀಸ್ ಅಧಿಕಾರಿ ಐ.ಪಿ. ಮೇದಪ್ಪ, ವಿವಿಧ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು, ಪ್ರಾಂಶುಪಾಲರು, ಇತರರು ಹಲವು ಮಾಹಿತಿ ನೀಡಿದರು.