ಕೂಡಿಗೆ, ಜೂ. 15: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಗ್ರಾಮಾಂತರ ಪಶು ವೈದ್ಯ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು, ಮದಲಾಪುರ, ಸೀಗೆಹೂಸೂರು, ಮಾವಿನಹಳ್ಳ ಸೇರಿದಂತೆ ಯಡವನಾಡು-ಹಾರಂಗಿ ವ್ಯಾಪ್ತಿಯಲ್ಲಿ ಹಸುಗಳ ಸಾಕಾಣಿಕೆಗೆ ಹೆಚ್ಚು ಒತ್ತು ನೀಡುವ ಪ್ರದೇಶಗಳಾಗಿವೆ. ಅಲ್ಲದೆ ಹುದುಗೂರು ಮತ್ತು ಮದಲಾಪುರಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಕೂಡ ಇವೆ.

ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ಕೂಡಿಗೆಯ ಕೃಷಿ ಪತ್ತಿನ ಸಹಕಾರ ಸಂಘಗಳು ಹೈನುಗಾರಿಕೆಗೆ ಹೆಚ್ಚು ಸಹಕಾರ ನೀಡುವುದರ ಜೊತೆಗೆ ಸಾಲ ಸೌಲಭ್ಯಗಳನ್ನು ಒದಗಿಸುತ್ತಿವೆ. ಇದರಿಂದ ರೈತರು ಹೆಚ್ಚು ಹೈನುಗಾರಿಗೆಯಲ್ಲಿ ತೊಡಗಲು ಸಾಧ್ಯವಾಗುತ್ತಿದೆ. ಆದ್ದರಿಂದ ಗ್ರಾಮಾಂತರ ಪಶು ವೈದ್ಯ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕು ಎಂಬದು ಇಲ್ಲಿನ ಗ್ರಾಮಸ್ಥರು ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರ ಒತ್ತಾಯವಾಗಿದೆ.