ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಇಲ್ಲ
ಬೆಂಗಳೂರು, ಜೂ. 15 : ಕೋವಿಡ್-19 ಸೋಂಕು ನಿಯಂತ್ರಣ ಉದ್ದೇಶದಿಂದ ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಜಾರಿ ಮಾಡುವ ಉದ್ದೇಶವಿಲ್ಲ. ಆದರೆ ಜನ ಜಾಗೃತಿಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪµಚಿÀ್ಟಪಡಿಸಿದ್ದಾರೆ. ಬೆಂಗಳೂರು ನಗರದಲ್ಲಿ ಕೋವಿಡ್-19 ಸೋಂಕು ನಿಯಂತ್ರಣ ಕುರಿತಂತೆ ಮಹತ್ವದ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಅಷ್ಟೇ ಅಲ್ಲದೇ ವಾರಾಂತ್ಯದ ಕಫ್ರ್ಯೂ ಸಹ ಜಾರಿಗೊಳಿಸುವುದಿಲ್ಲ, ಆದರೆ ಜನರಲ್ಲಿ ಮಾಸ್ಕ್ ಧರಿಸುವ ಕುರಿತು ಮತ್ತಷ್ಟು ಜನಜಾಗೃತಿ ಮೂಡಿಸಲಾಗುವುದು. ಇದೇ ಉದ್ದೇಶದಿಂದ ಗುರುವಾರ ಮಾಸ್ಕ್ ಡೆ ಆಚರಣೆ ಮಾಡಲು ತೀರ್ಮಾನಿಸಲಾಗಿದೆ ಎಂದರು. ಚಿತ್ರ ನಟರು, ಗಣ್ಯರು, ಮಾಸ್ಕ್ ಧರಿಸುವ ಮತ್ತು ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವ ಕುರಿತು ಜನಜಾಗೃತಿ ಮೂಡಿಸಬೇಕು, ಮಾಸ್ಕ್ ಧರಿಸದಿದ್ದರೆ 200 ರೂಪಾಯಿ ದಂಡ ವಿಧಿಸಲಾಗುವುದು. ಈ ಸಂಬಂಧ ಕಟ್ಟುನಿಟ್ಟಿನ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿದರು. ಮಹಾರಾಷ್ಟ್ರದಿಂದ ಆಗಮಿಸುವವರಿಗೆ 7 ದಿನ, ಚೆನ್ನೈ, ದೆಹಲಿಯಿಂದ ಬರುವವರಿಗೆ ಮೂರು ದಿನಗಳ ಕಾಲ ಕ್ವಾರಂಟೀನ್ ಮಾಡಲಾಗುವುದು. ಹೊರ ರಾಜ್ಯಗಳಿಂದ ಆಗಮಿಸುವವರಿಂದ ಸೋಂಕು ಹರಡುವುದನ್ನು ತಡೆಗಟ್ಟಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ
ನವದೆಹಲಿ, ಜೂ. 15 : ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಸತತ 9ನೇ ದಿನವೂ ಏರಿಕೆ ಕಂಡಿದ್ದು, ಗ್ರಾಹಕರಿಗೆ ಆಘಾತವನ್ನು ನೀಡಿದೆ. 9 ದಿನಗಳ ಅವಧಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ರೂ.5 ಏರಿಕೆಯಾಗಿದ್ದರೆ, ಡೀಸೆಲೆ ಬೆಲೆ ಪ್ರತೀ ಲೀಟರ್'ಗೆ ರೂ.4.87 ರಷ್ಟು ಏರಿಕೆಯಾಗಿದೆ. 9ನೇ ದಿನವಾದ ಸೋಮವಾರ ಕೂಡ ಪೆಟ್ರೋಲ್ ಬೆಲೆ ಲೀಟರ್'ಗೆ 48 ಪೈಸೆ ಹಾಗೂ ಡೀಸೆಲ್ ಬೆಲೆ ಲೀಟರ್'ಗೆ 23 ಪೈಸೆ ಏರಿಕೆ ಕಂಡಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ ಇದೀಗ ರೂ.76.26ಕ್ಕೆ ಏರಿಕೆಯಾಗಿದೆ. ಇನ್ನು ಡೀಸೆಲ್ ದರ ರೂ.74.26ಕ್ಕೆ ತಲುಪಿದೆ. ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ ಇದೀಗ ರೂ.78.73 ಆಗಿದ್ದು, ಡೀಸೆಲ್ ದರ ರೂ.70.95ಕ್ಕೆ ಏರಿಕೆಯಾಗಿದೆ.
ತಮಿಳುನಾಡಿನಲ್ಲಿ ಮತ್ತೆ ಲಾಕ್‍ಡೌನ್
ಚೆನ್ನೈ, ಜೂ. 15 : ಮಾರಕ ಕೊರೋನಾ ವೈರಸ್ ಗೆ ತತ್ತರಿಸಿ ಹೋಗಿರುವ ತಮಿಳುನಾಡಿನಲ್ಲಿ ಪರಿಸ್ಥಿತಿ ನಿಯಂತ್ರಿಸಲು ಅಲ್ಲಿನ ಸರ್ಕಾರ ಪ್ರಮುಖ ನಗರಗಳಲ್ಲಿ ಜೂ.19ರಿಂದ ಸಂಪೂರ್ಣ ಲಾಕ್ ಡೌನ್ ಹೇರಲು ಮುಂದಾಗಿದೆ. ತಮಿಳುನಾಡಿನಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಇದೇ ಕಾರಣಕ್ಕೆ ಮದ್ರಾಸ್ ಹೈಕೋರ್ಟ್ ಕೂಡ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು, ಕೋವಿಡ್-19 ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣವಾಗಿ ಹಿಂದೆ ಬೀಳುತ್ತಿದೆ ಎಂದು ಛಾಟಿ ಬೀಸಿತ್ತು. ಇದೀಗ ಎಚ್ಚೆತ್ತುಕೊಂಡಿರುವ ಇ ಪಳನಿ ಸ್ವಾಮಿ ಸರ್ಕಾರ ತಮಿಳುನಾಡಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಿರುವ ಪ್ರಮುಖ ನಗರಗಳಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದೆ. ತಮಿಳುನಾಡು ರಾಜಧಾನಿ ಚೆನ್ನೈ, ತಿರುವಳ್ಳೂರ್, ಚೆಂಗಲ್ ಪೇಟ್ ಮತ್ತು ಕಾಂಚಿಪುರಂನಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದೆ. ಅಂತೆಯೇ ಸೋಂಕಿತರ ಸಂಖ್ಯೆ ಕಡಿಮೆ ಇರುವ ಮತ್ತು ಸೋಂಕಿತರೇ ಇಲ್ಲದ ಪ್ರದೇಶಗಳಲ್ಲಿ ಲಾಕ್ ಡೌನ್ ವಿನಾಯಿತಿ ಕೂಡ ನೀಡಲಾಗಿದೆ.
ಜಲಸಮಾಧಿಯಾದ 7 ಮಂದಿಗೆ ಪರಿಹಾರ
ಬೆಂಗಳೂರು, ಜೂ. 15 : ಮಂಡ್ಯ ಜಿಲ್ಲೆಯಲ್ಲಿ ಜಲಸಮಾಧಿಯಾದ ಏಳು ಮಂದಿಗೆ 22 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ. ಸಿಎಂ ಪರಿಹಾರ ನಿಧಿಯಿಂದ ಒಟ್ಟು 22 ಲಕ್ಷ ರೂ.ಗಳ ಪರಿಹಾರವನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿದ್ದಾರೆ. ನಾಗಮಂಗಲ ತಾಲ್ಲೂಕಿನ ಬೀರನಹಳ್ಳಿಯ ಗೀತಾ, ಕು.ಸವಿತಾ ಹಾಗೂ ಕು.ಸೌಮ್ಯ ಅವರಿಗೆ ತಲಾ 5 ಲಕ್ಷ ರೂ.ಗಳು ಹಾಗೂ ಇದೇ ತಾಲೂಕಿನ ಚೋಳಸಂದ್ರ ಗ್ರಾಮದ ರಶ್ಮಿ ಮತ್ತು ಇಂಚರಾ, ಕೆ.ಆರ್.ಪೇಟೆ ತಾಲ್ಲೂಕಿನ ಹುಳಿ ಗಂಗನಹಳ್ಳಿಯ ಮಾಸ್ಟರ್ ಅಭಿಷೇಕ್ ಮತ್ತು ಆದಿಹಳ್ಳಿಯ ಕುಮಾರ್ ಅವರುಗಳಿಗೆ ತಲಾ 2 ಲಕ್ಷ ರೂ.ಗಳನ್ನು ಪರಿಹಾರ ನಿಧಿಯಿಂದ ತುರ್ತಾಗಿ ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.
ಚೀನಾ ಕೈಗಾರಿಕಾ ಉತ್ಪಾದನೆ ಏರಿಕೆ
ಬೀಜಿಂಗ್, ಜೂ. 15 : ಕೋವಿಡ್ 19 ಹುಟ್ಟೂರು ಚೀನಾದಲ್ಲಿ ಪ್ರಪಾತಕ್ಕೆ ಕುಸಿದಿದ್ದ ಕೈಗಾರಿಕಾ ಉತ್ಪಾದನೆಯು ಮತ್ತೆ ಏರಿಕೆಯಾಗಿದೆ. ಈ ಮೂಲಕ ದೇಶದ ಆರ್ಥಿಕತೆ ಚೇತರಿಸಿಕೊಳ್ಳುತ್ತಿರುವುದರ ಮುನ್ಸೂಚನೆ ನೀಡಿದೆ. 2020ರ ಮೇ ತಿಂಗಳಲ್ಲಿ ಚೀನಾದ ಕೈಗಾರಿಕಾ ಉತ್ಪಾದನೆಯು ಶೇಕಡಾ 4.4ಕ್ಕೆ ಏರಿಕೆಯಾಗಿದೆ. ಏಪ್ರಿಲ್ನಲ್ಲಿ ಇದು 3.9 ರಷ್ಟು ಬೆಳವಣಿಗೆಯನ್ನು ದಾಖಲಿಸಿತ್ತು. ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ (ಎನ್ಬಿಎಸ್) ಸೋಮವಾರ ಬಿಡುಗಡೆ ಮಾಡಿದ ಅಂಕಿ ಅಂಶವು ವಿಶ್ಲೇಷಕರ ಮುನ್ಸೂಚನೆಗಿಂತ ಕೆಳಗಿದೆ. ಹೌದು ವಿಶ್ಲೇಷಕರು ಮೇ ತಿಂಗಳಿಗೆ ಶೇ. 5ರಷ್ಟು ಬೆಳವಣಿಗೆ ಕಾಣಲಿದೆ ಎಂದು ಅಭಿಪ್ರಾಯಪಟ್ಟಿದ್ದರು. 2020ರ ಮೊದಲ ಎರಡು ತಿಂಗಳಲ್ಲಿ ವರ್ಷದಿಂದ ವರ್ಷಕ್ಕೆ ಕೈಗಾರಿಕಾ ಉತ್ಪಾದನೆಯು ಶೇ. 13.5ರಷ್ಟು ಕುಸಿದಿತ್ತು. ನಂತರ ಮೂರು ಪ್ರಮುಖ ವಿಭಾಗಗಳಲ್ಲಿರುವ ವಿದ್ಯುತ್, ಶಾಖ, ಅನಿಲ ಮತ್ತು ನೀರಿನ ಉತ್ಪಾದನೆಯ ಬೆಳವಣಿಗೆ, ಮೇ ತಿಂಗಳಲ್ಲಿ ವರ್ಷಕ್ಕೆ 3.6ರಷ್ಟು ಏರಿಕೆಯಾಗಿದ್ದು, ಏಪ್ರಿಲ್ನಲ್ಲಿ ಶೇಕಡಾ 0.2 ರಷ್ಟು ಏರಿಕೆಯಾಗಿತ್ತು.
ಇಬ್ಬರು ರಾಜತಾಂತ್ರಿಕ ಸಿಬ್ಬಂದಿ ನಾಪತ್ತೆ
ನವದೆಹಲಿ, ಜೂ. 15 : ಈ ಹಿಂದೆ ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಯನ್ನು ಐಎಸ್‍ಐ ಏಜೆಂಟ್ ಓರ್ವ ಹಿಂಬಾಲಿಸಿದ್ದು ಆತಂಕಕ್ಕೀಡು ಮಾಡಿತ್ತು. ಇದೀಗ ಭಾರತದ ಇಬ್ಬರು ರಾಜತಾಂತ್ರಿಕ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಕಳೆದ ಎರಡು ಗಂಟೆಗಳಿಂದ ಪಾಕಿಸ್ತಾನದ ಇಬ್ಬರು ಭಾರತೀಯ ಹೈಕಮಿಷನ್ ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಈ ಸಂಬಂಧ ಪಾಕಿಸ್ತಾನ ಅಧಿಕಾರಿಗಳೊಂದಿಗೆ ಭಾರತ ಸರ್ಕಾರ ಈ ವಿಷಯ ಕುರಿತಾಗಿ ಚರ್ಚೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಭಾರತೀಯ ಹೈಕಮಿಷನ್ ಸಿಬ್ಬಂದಿ ಇಬ್ಬರೂ ಸಿಐಎಸ್‍ಎಫ್ ಚಾಲಕರಾಗಿದ್ದರು. ಈ ಇಬ್ಬರು ಇಸ್ಲಾಮಾಬಾದ್ನಲ್ಲಿ ಕರ್ತವ್ಯದಲ್ಲಿದ್ದರು ಎಂಬುದು ಬೆಳಕಿಗೆ ಬಂದಿದೆ. ಬೆಳಗ್ಗೆ ಮನೆಯಿಂದ ಹೊರಟ ಅವರು ಕಚೇರಿಗೆ ಬಂದಿಲ್ಲ. ಇದು ಸದ್ಯದ ಮಟ್ಟಿಗೆ ಆಂತಕಕ್ಕೀಡಾಗಿದೆ.
ಡಿಕೆಶಿ ಮಗಳ ಮದುವೆ ನಿಶ್ಚಯ
ಬೆಂಗಳೂರು, ಜೂ. 15 : ಇಂದು ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಗಳಿಗೂ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಮೊಮ್ಮಗನಿಗೂ ಮದುವೆ ನಿಶ್ಚಯವಾಗಿದೆ. ಇಂದು ಈ ಕಾರ್ಯಕ್ರಮಕ್ಕಾಗಿ ಡಿಕೆ ಶಿವಕುಮಾರ್ ಅವರ ಮನೆಗೆ ಎಂಸ್ ಕೃಷ್ಣ ಅವರ ಕುಟುಂಬ ಆಗಮಿಸಿತ್ತು. ಮೂರು ದಿನಗಳ ಹಿಂದೆಯಷ್ಟೇ ಎಸ್‍ಎಂಕೆ ನಿವಾಸಕ್ಕೆ ಡಿಕೆಶಿ ಕುಟುಂಬ ಹೋಗಿದ್ದರು. ಇಂದು ಗುರು-ಹಿರಿಯ ಸಮ್ಮಖದಲ್ಲಿ ದಿವಂಗತ ಸಿದ್ಧಾರ್ಥ ಅವರ ಪುತ್ರ ಅಮಥ್ರ್ಯ ಸುಬ್ರಮಣ್ಯಗೂ ಮತ್ತು ಡಿಕೆಶಿ ಪುತ್ರಿ ಐಶ್ವರ್ಯಗೂ ಮದುವೆ ನಿಶ್ಚಯವಾಗಿದೆ.