ಕುಶಾಲನಗರ, ಜೂ. 14: ಇತ್ತೀಚಿಗೆ ಮುಳ್ಳುಸೋಗೆ ವ್ಯಾಪ್ತಿಯ ಯುವಕನೊಬ್ಬ ಡೆಂಗ್ಯು ಪೀಡಿತನಾಗಿ ಸಾವಿಗೀಡಾದ ಹಿನ್ನೆಲೆಯಲ್ಲಿ ಎಲ್ಲೆಡೆ ಆತಂಕ ಮನೆಮಾಡಿದೆ. ಕಳೆದ ಒಂದು ತಿಂಗಳಿನಿಂದ ಕುಶಾಲನಗರ ಪಟ್ಟಣ, ಮುಳ್ಳುಸೋಗೆ, ಕೂಡಿಗೆ ವ್ಯಾಪ್ತಿಯಲ್ಲಿ ಜ್ವರಪೀಡಿತರು ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆಗೆ ದಾಖಲಾಗುತ್ತಿರುವುದು ಗೋಚರಿಸಿದೆ.
ಮುಳ್ಳುಸೋಗೆಯ ಯುವಕನೊಬ್ಬ ಜ್ವರ ಬಂದು ಕುಶಾಲನಗರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ನಂತರ ಮೈಸೂರು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿದರೂ ಪ್ರಯೋಜನವಾಗದೆ ಮೃತಪಟ್ಟಿರುವುದು ತಿಳಿದುಬಂದಿದೆ.
ಬಹುತೇಕ ರೋಗಿಗಳು ಖಾಸಗಿ ಆಸ್ಪತ್ರೆಗೆ ದಾಖಲಾಗುವುದರೊಂದಿಗೆ ಡೆಂಗ್ಯು ಬಗ್ಗೆ ಖಚಿತ ವರದಿ ದೊರಕದೆ ಮೈಸೂರು ಆಸ್ಪತ್ರೆಗಳಿಗೆ ದಾಖಲಾಗುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದ್ದು, ಕುಶಾಲನಗರದಲ್ಲಿ ಘನತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಚೆಲ್ಲುತ್ತಿರುವ ಹಿನ್ನೆಲೆಯಲ್ಲಿ ಡೆಂಗ್ಯೂ ಜ್ವರ ಕಾರಣವಾಗಿದೆ ಎನ್ನುವುದು ಜಿಲ್ಲಾ ಆರೋಗ್ಯ ಸರ್ವೇಕ್ಷಣಾ ಅಧಿಕಾರಿ ಡಾ. ಶಿವಕುಮಾರ್ ಅವರ ಅಭಿಪ್ರಾಯವಾಗಿದೆ.
ಸ್ಥಳೀಯ ಪಂಚಾಯ್ತಿ ಮತ್ತು ನಾಗರಿಕರು ಈ ಬಗ್ಗೆ ಎಚ್ಚರಗೊಳ್ಳಬೇಕಾಗಿದ್ದು, ಮನೆ ಅಥವಾ ನಿವಾಸಗಳ ಸುತ್ತಮುತ್ತ ಯಾವುದೇ ರೀತಿಯ ಘನತ್ಯಾಜ್ಯಗಳು ಇಲ್ಲದಂತೆ ನೋಡಿಕೊಳ್ಳುವ ಮೂಲಕ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ ಎಂದಿದ್ದಾರೆ.