ಮಡಿಕೇರಿ, ಜೂ. 14: ಬೇಸಿಗೆಯ ಸಂದರ್ಭದಿಂದ ಮಳೆಗಾಲ ಆರಂಭದ ತನಕದ ಅವಧಿಯಲ್ಲಿ ಕೊಡಗಿನಲ್ಲಿ ಸಿಗುವ ಕಾಡುಮಾವಿನ ಹಣ್ಣು ಈ ಬಾರಿ ಕಂಡುಬಂದಿಲ್ಲ. ಇಡೀ ಜಿಲ್ಲೆಯಲ್ಲಿ ಎಲ್ಲೋ ಕೆಲವೆಡೆ ಮಾತ್ರ ಈ ಬಾರಿ ಕಾಡುಮಾವಿನ ಹಣ್ಣು ಹಿಡಿದಿದ್ದು, ಬಹುತೇಕ ಕಡೆ ಈ ಬಾರಿ ಈ ಫಸಲು ಬಂದಿಲ್ಲ.

ವಿಶಿಷ್ಟ ಪರಿಮಳ ಬೀರುವ ಈ ಹಣ್ಣಿನ ಸಾರು ಜಿಲ್ಲೆಯ ವಿಶಿಷ್ಟ ಖಾದ್ಯಗಳಲ್ಲಿ ಒಂದು. ನಗರ-ಪಟ್ಟಣಗಳಿಗೆ ಹಲವಷ್ಟು ಮಂದಿ ಗ್ರಾಮೀಣ ಪ್ರದೇಶಗಳಿಂದ ಈ ಹಣ್ಣು ತಂದು ಮಾರಾಟ ಮಾಡುವ ಮೂಲಕ ಒಂದಷ್ಟು ಕಾಸು ಸಂಪಾದಿಸಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಎಲ್ಲೂ ಕಾಡುಮಾವಿನ ಹಣ್ಣಿನ ಮಾರಾಟವೂ ಗೋಚರಿಸಿಲ್ಲ.

ಜಿಲ್ಲೆಯ ಜನತೆ ಈ ಹಣ್ಣನ್ನು ಉಪ್ಪಿಗೆ ಹಾಕಿ ಇಟ್ಟುಕೊಳ್ಳುವ ಮೂಲಕ ಮಳೆಗಾಲಕ್ಕೂ ಇದನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದರು. ಕೆಲವೊಮ್ಮೆ ಎಲ್ಲೆಡೆ ಈ ಫಸಲು ಹೆಚ್ಚಾಗಿ ಕಂಡುಬರುತ್ತದೆ. ಆದರೆ ಈ ವರ್ಷ ಫಸಲು ಇಳಿಮುಖವಾಗಿದೆ. ಜೊತೆಗೆ ಸಾಕಷ್ಟು ಕಡೆಗಳಲ್ಲಿ ಈ ಮರಗಳ ನಾಶವೂ ಇದಕ್ಕೆ ಕಾರಣವೆನ್ನಬಹುದಾಗಿದೆ.

ಬಗೆ ಬಗೆಯ ಪರಿಮಳದೊಂದಿಗೆ... ರಸಭರಿತ ಈ ಹಣ್ಣು ಜಿಲ್ಲೆಯ ಪ್ರಾಕೃತಿಕ ಐಸಿರಿಯ ಒಂದು ಸಂಪನ್ಮೂಲವಾಗಿತ್ತು. ಕೆಲವಾರು ಸಮಾರಂಭಗಳಲ್ಲೂ ಈ ಸಾರು ಕಂಡುಬರುತ್ತಿತ್ತಲ್ಲದೆ, ಮಿಡಿಮಾವಿನ ಕಾಯಿಯ ಉಪ್ಪಿನ ಕಾಯಿಯನ್ನೂ ಜನತೆ ಮಾಡಿಟ್ಟುಕೊಳ್ಳುತ್ತಿದ್ದರು.