ಮಡಿಕೇರಿ, ಜೂ. 13: ಜಿಲ್ಲಾಧಿಕಾರಿಗಳ ವಿರುದ್ಧ ಅವಹೇಳನಕಾರಿಯಾಗಿ ಹಾಗೂ ಸಾಮಾಜಿಕ ಅಶಾಂತಿಗೆ ಕಾರಣವಾಗುವ ರೀತಿಯಲ್ಲಿ ವರದಿ ಪ್ರಕಟಿಸಿದ ಸ್ಥಳೀಯ ಕಾವೇರಿ ಟೈಮ್ಸ್ ಪತ್ರಿಕೆ, ಸಂಪಾದಕ ಹಾಗೂ ವರದಿಗಾರನ ವಿರುದ್ಧ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ನೀಡಿರುವ ದೂರಿನ ಆಧಾರದಲ್ಲಿ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.ಕಾವೇರಿ ಟೈಮ್ಸ್ ಪತ್ರಿಕೆಯಲ್ಲಿ ತಾ. 9ರಂದು ‘ಕಾವೇರಿ ಟೈಮ್ಸ್ ಕಚೇರಿ ತಲಪಿದ ಅನಾಮದೇಯ ಪತ್ರ’ ಎಂಬ ಅಂಕಣದಲ್ಲಿ ಜಿಲ್ಲಾಧಿಕಾರಿಗಳ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ವಿರುದ್ಧ ಟೀಕೆ ಮಾಡಿರುವ ರೀತಿಯಲ್ಲಿ ಅವಹೇಳನಕಾರಿಯಾಗಿ ವರದಿ ಪ್ರಕಟಗೊಂಡಿತ್ತು. ಅಲ್ಲದೆ, ಈ ಹಿಂದೆಯೂ ‘ಕಂಡದ್ದು ಕೇಳಿದ್ದು’ ಅಂಕಣದಲ್ಲಿ ವರದಿಗಾರ ವಸಂತ್ ಜಿಲ್ಲಾಧಿಕಾರಿಗಳ ವಿರುದ್ಧ ಟೀಕಾಕಾರವಾಗಿ ಬರೆದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳು ಇಂದು ಈ ಬಗ್ಗೆ ಕಾವೇರಿ ಟೈಮ್ಸ್ ಪತ್ರಿಕೆ, ಸಂಪಾದಕ ಹಾಗೂ ವರದಿಗಾರನ ಮೇಲೆ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ.

ಜಿಲ್ಲಾಧಿಕಾರಿಗಳು ನೀಡಿರುವ ದೂರನ್ನು ಪರಿಗಣಿಸಿದ ಮಡಿಕೇರಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹಾಗೂ ಠಾಣಾಧಿಕಾರಿ ಅಂತಿಮ ಅವರುಗಳು ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿಯ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ, ಸಾರ್ವಜನಿಕರು ಅಸಮಾಧಾನಗೊಳ್ಳುವ ಅಥವಾ ರೊಚ್ಚಿಗೇಳುವ ರೀತಿಯಲ್ಲಿ ವರದಿ ಪ್ರಕಟಿಸಿದ ಪತ್ರಿಕೆÉಯ ಸಂಪಾದಕ ಬಿ.ಸಿ. ನಂಜಪ್ಪ, ವರದಿಗಾರ ವಸಂತ್ ವಿರುದ್ಧ ಕ್ರಿಮಿನಲ್ ಮೊಕದ್ದಮೆಯಡಿ ಸೆಕ್ಷನ್ 153, 505 (ಬಿ) ರನ್ವಯ ಮೊಕದ್ದಮೆ ದಾಖಲಿಸಿದ್ದಾರೆ. ಸಾಮಾಜಿಕ ಅಶಾಂತಿಗೆ ಕಾರಣವಾಗುವ ರೀತಿಯ ವರದಿಗಳನ್ನು ಪ್ರಕಟಿಸಿದ ಹಿನ್ನೆಲೆಯಲ್ಲಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.