ರಾಜ್ಯದಲ್ಲಿ ಸೋಂಕು ಗಣನೀಯ ಏರಿಕೆ
ಬೆಂಗಳೂರು, ಜೂ. 13: ರಾಜ್ಯದಲ್ಲಿ ಕೊರೊನಾ ಸೋಂಕು ಗಣನೀಯವಾಗಿ ಏರಿಕೆಯಾಗುತ್ತಿದ್ದು, ಕರ್ನಾಟಕ ದೇಶದ ಸೋಂಕಿತ ರಾಜ್ಯಗಳ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿದೆ. ರಾಜ್ಯದಲ್ಲಿ ಒಟ್ಟು 6516 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 79 ಮಂದಿ ಮೃತಪಟ್ಟಿದ್ದಾರೆ. ಒಟ್ಟು 3440 ಮಂದಿ ಗುಣಮುಖರಾಗಿದ್ದು, 2997 ಸಕ್ರಿಯ ಪ್ರಕರಣಗಳಿವೆ. ದೇಶದ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯ ಮಹಾರಾಷ್ಟ್ರದಲ್ಲಿ ಶನಿವಾರ ಬೆಳಗ್ಗೆಯವರೆಗೆ ಒಟ್ಟು 1.01 ಲಕ್ಷ ಸೋಂಕಿತ ಪ್ರಕರಣಗಳು ವರದಿಯಾಗಿದ್ದು 3717 ಮಂದಿ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ಸಾರ್ವಜನಿಕ ಮಾಹಿತಿ ಕೇಂದ್ರ ಟ್ವಿಟರ್ನಲ್ಲಿ ಈ ಪಟ್ಟಿ ಬಿಡುಗಡೆಗೊಳಿಸಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,08,993ಕ್ಕೆ ಏರಿಕೆಯಾಗಿದ್ದು, 8,884 ಮಂದಿ ಮೃತಪಟ್ಟಿದ್ದಾರೆ. 1,54,330 ಮಂದಿ ಗುಣಮುಖರಾಗಿದ್ದು, 1,45,779 ಸಕ್ರಿಯ ಪ್ರಕರಣಗಳಿವೆ ಎಂದು ವರದಿ ತಿಳಿಸಿದೆ. ತಮಿಳುನಾಡು 40,998 ಪ್ರಕರಣಗಳು, 367 ಸಾವುಗಳಿಂದ ಎರಡನೇ ಅತಿ ಹೆಚ್ಚು ಸೋಂಕಿತ ರಾಜ್ಯವಾಗಿದ್ದರೆ, ದೆಹಲಿ 36,824 ಪ್ರಕರಣಗಳು ಮತ್ತು 1214 ಸಾವುಗಳಿಂದ ಮೂರನೇ ಸ್ಥಾನದಲ್ಲಿದೆ. ಗುಜರಾತ್ 22,527 ಪ್ರಕರಣಗಳು ಮತ್ತು 1415 ಸಾವುಗಳಿಂದ ನಾಲ್ಕನೇ ಹಾಗೂ ಉತ್ತರಪ್ರದೇಶ 12616 ಪ್ರಕರಣಗಳು ಮತ್ತು 365 ಸಾವುಗಳಿಂದ ಐದನೇ ಸ್ಥಾನದಲ್ಲಿದೆ.
ಸೇನೆ ದಾಳಿಗೆ ನಾಲ್ವರು ಉಗ್ರರು ಬಲಿ
ಶ್ರೀನಗರ, ಜೂ. 13: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಗಡಿ ನುಸುಳುವ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದನ್ನು ವಿಫಲಗೊಳಿಸುತ್ತಿರುವ ಭಾರತೀಯ ಸೇನೆ ಉಗ್ರರ ಹೆಡೆಮುರಿ ಕಟ್ಟುತ್ತಿದೆ. ಗಡಿಯಲ್ಲಿ ಉಗ್ರ ವಿರುದ್ಧ ಕಾರ್ಯಾಚರಣೆ ಶುರು ಮಾಡಿರುವ ಭಾರತೀಯ ಸೇನೆ ಇಂದು ಸಹ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಹೊಡೆದುರುಳಿಸಿದೆ. ಕುಲ್ಗಾಮ್ ಮತ್ತು ಅನಂತನಾಗ್ ಜಿಲ್ಲೆಗಳಲ್ಲಿ ಉಗ್ರರ ಉಪಟಳ ಹೆಚ್ಚಾಗಿದ್ದು ಭಾರತೀಯ ಸೇನೆ ಕಾರ್ಯಾಚರಣೆ ಕೈಗೊಂಡಿತ್ತು. ಕಾರ್ಯಾಚರಣೆಯಲ್ಲಿ ಒಟ್ಟು ನಾಲ್ವರು ಉಗ್ರರು ಇಂದು ಬಲಿಯಾಗಿದ್ದಾರೆ. ಇನ್ನು ಕಳೆದ ಒಂದು ವಾರದಿಂದ ಭಾರತೀಯ ಸೇನೆ ಹಿಜ್ಬುಲ್ ಮುಜಾಯಿದ್ದೀನ್ ಉಗ್ರ ಸಂಘಟನೆಯ ಟಾಪ್ ಕಮಾಂಡರ್ಗಳು ಸೇರಿದಂತೆ 14 ಮಂದಿಯನ್ನು ಹೊಡೆದುರುಳಿಸಿದೆ.
ಮಹಿಳಾ ಗೂಢಾಚಾರರ ಜಾಲ
ನವದೆಹಲಿ, ಜೂ. 13: ಭಾರತದಲ್ಲಿ ಸಕ್ರಿಯವಾಗಿರುವ ಮಹಿಳಾ ಗೂಢಾಚಾರರ ಜಾಲವನ್ನು ಪತ್ತೆ ಹಚ್ಚುವುದಕ್ಕಾಗಿ ಎನ್ಐಎ 22 ವರ್ಷದ, ಪಾಕಿಸ್ತಾನಿ ಹ್ಯಾಂಡ್ಲರ್ಗಳ ಜೊತೆ ಸಂಪರ್ಕದಲ್ಲಿದ್ದ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಹ್ಯಾಂಡ್ಲರ್ನ್ನು ವಶಕ್ಕೆ ಪಡೆದಿದೆ. ದೆಹಲಿಯಲ್ಲಿರುವ ಎನ್ಐಎ ಮೂಲಗಳ ಪ್ರಕಾರ, ತಾನಿಯಾ ಪ್ರವೀಣ್ ಎಂಬಾಕೆಯನ್ನು ಎನ್ಐಎ ವಶಕ್ಕೆ ಪಡೆದಿದ್ದು, ಪಾಕಿಸ್ತಾನಿ ಸಿಮ್ ಕಾರ್ಡ್ಗಳ ಮೂಲಕ ಅಲ್ಲಿನ ಹ್ಯಾಂಡ್ಲರ್ಗಳ ಜೊತೆ ಈಕೆ ಸಂಪರ್ಕದಲ್ಲಿದ್ದಳು ಎಂದು ತಿಳಿದು ಬಂದಿದೆ. ಈಕೆ ಭಾರತೀಯ ಸಿಮ್ ಕಾರ್ಡ್ಗಳನ್ನೂ ವಿತರಿಸಿ, ವಾಟ್ಸ್ಆಪ್ ಗ್ರೂಪ್ಗಳ ಮೂಲಕ ಸಂಪರ್ಕ ಸಾಧಿಸುತ್ತಿದ್ದಳು ಎಂದು ತಿಳಿದುಬಂದಿದೆ. ಒಂದು ವಾರದ ಹಿಂದೆ ಗುಪ್ತಚರ ಇಲಾಖೆಗಳು ಈಕೆಯನ್ನು ವಶಕ್ಕೆ ಪಡೆದಿದ್ದವು. ಈಗ ಎನ್ಐಎ 10 ದಿನಗಳ ಕಾಲ ಈಕೆಯನ್ನು ವಶಕ್ಕೆ ಪಡೆದಿದ್ದು, ಭಯೋತ್ಪಾದನ ನಿಗ್ರಹ ದಳದ ಅಧಿಕಾರಿಗಳು ಈಕೆಯನ್ನು ವಿಚಾರಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಗಡಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ
ಡೆಹ್ರಾಡೂನ್, ಜೂ. 13: ಚೀನಾ ಗಡಿ ಭಾಗದಲ್ಲಿ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಗಡಿ ವಿಚಾರದಲ್ಲಿ ಎರಡೂ ದೇಶಗಳ ಮಧ್ಯೆ ಇರುವ ಭಿನ್ನಾಭಿಪ್ರಾಯ ಸದ್ಯದಲ್ಲಿಯೇ ಬಗೆಹರಿಯುವ ವಿಶ್ವಾಸವಿದೆ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಎಂ.ಎಂ. ನಾರವಾನೆ ಹೇಳಿದ್ದಾರೆ. ಪೂರ್ವ ಲಡಾಕ್ನಲ್ಲಿ ಕಾಪ್ರ್ಸ್ ಕಮಾಂಡರ್ ಮಟ್ಟದಿಂದ ಆರಂಭವಾದ ಮಾತುಕತೆ ನಂತರ ನಿರಂತರವಾಗಿ ಮುಂದುವರಿದು ಸ್ಥಳೀಯ ಮಟ್ಟದಲ್ಲಿ ಕಮಾಂಡರ್ಗಳ ಮಟ್ಟದಲ್ಲಿ ನಡೆದು ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಭಾರತ-ಚೀನಾ ಮಧ್ಯೆ ಈಗಾಗಲೇ ಸಾಕಷ್ಟು ಸುತ್ತಿನ ಮಾತುಕತೆಗಳು ನಡೆದಿರುವುದರಿಂದ ಭಿನ್ನಾಭಿಪ್ರಾಯಗಳು ಮರೆಯಾಗಿ ಗಡಿಯಲ್ಲಿ ಶಾಂತಿ ನೆಲೆಸುತ್ತದೆ ಎಂಬ ನಂಬಿಕೆ ನಮಗಿದೆ ಎಂದು ಡೆಹ್ರಾಡೂನ್ನಲ್ಲಿ ಭಾರತೀಯ ಮಿಲಿಟರಿ ಅಕಾಡೆಮಿಯ ಪಾಸಿಂಗ್ ಔಟ್ ಪೆರೇಡ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಹೇಳಿದರು. ಎರಡೂ ದೇಶಗಳ ಮಿಲಿಟರಿಗಳು ನಿಯೋಜಿಸಿದ್ದ ಸೇನೆಗಳನ್ನು ಹಂತಹಂತವಾಗಿ ಹಿಂತೆಗೆದುಕೊಳ್ಳುತ್ತಿವೆ. ನಾವು ಉತ್ತರದಿಂದ ಪ್ರಾರಂಭಿಸಿ ಗಾಲ್ವಾನ್ ನದಿಯ ಪ್ರದೇಶದಿಂದ ಸಾಕಷ್ಟು ಸೇನೆಯನ್ನು ಹಿಂಪಡೆದಿದ್ದೇವೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಖಂಡಿತವಾಗಿಯೂ ಸುಧಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಔಷಧಿ ಉತ್ಪಾದನೆಗೆ ಭಾರತ ಸಜ್ಜು
ನವದೆಹಲಿ, ಜೂ. 13: ಭಾರತದಲ್ಲಿ ಶೀಘ್ರವೇ ವೈರಸ್ ಸೋಂಕಿಗೆ ಪರಿಣಾಮಕಾರಿ ಔಷಧಿ ಉತ್ಪಾದನೆ ಪ್ರಾರಂಭವಾಗಲಿದೆ. ಕೋವಿಡ್-19 ರೋಗಿಗಳ ಮೇಲೆ “ನಿರ್ಬಂಧಿತ ತುರ್ತು ಬಳಕೆ”ಗಾಗಿ ಈ ಔಷಧಿಗಳನ್ನು ಬಳಕೆ ಮಾಡಬಹುದಾಗಿದೆ. ಈ ಔಷಧಿಯು ರೋಗಿಗಳ ಮೇಲೆ ಸುರಕ್ಷತೆ, ಪರಿಣಾಮಕಾರಿತ್ವ ಮತ್ತು ಸ್ಥಿರ ಪರಿಣಾಮವನ್ನುಂಟುಮಾಡುತ್ತದೆ. ಇತ್ತೀಚೆಗೆ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆ ತೀವ್ರವಾಗಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಕೊರೊನಾ ರೋಗಿಗಳ ಮೇಲೆ “ನಿರ್ಬಂಧಿತ ತುರ್ತು ಬಳಕೆ”ಗಾಗಿ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಔಷಧಿಗಳ ಪ್ರಯೋಗಕ್ಕೆ ಅನುಮತಿಸಿದೆ. ದೇಶದ ಉನ್ನತ ಔಷಧ ನಿಯಂತ್ರಕ ಸಂಸ್ಥೆ ಭಾರತದಲ್ಲಿ ಆಂಟಿ-ವೈರಲ್ ಔಷಧಿಗಳ ಉತ್ಪಾದನೆಗೆ ಮತ್ತು ಮಾರಾಟ ಮಾಡಲು ಅನುಮೋದನೆ ಪಡೆಯಲು ಬಯಸುವ ನಾಲ್ಕು ದೇಶೀಯ ಫಾರ್ಮಾ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಯನ್ನು ಮೌಲ್ಯಮಾಪನ ಮಾಡುತ್ತಿದೆ. “ಅವರ ಅರ್ಜಿಗಳನ್ನು ಹಗಲು-ರಾತ್ರಿ ಕೂಲಂಕಷವಾಗಿ ಅಧ್ಯಯನ ಮಾಡಲಾಗುತ್ತಿದೆ ಅದಕ್ಕೆ ಸಂಬಂಧಿಸಿದ ನ್ಯೂನತೆಗಳ ಸಂಬಂಧ ಆಯಾ ಫಾರ್ಮಾ ಕಂಪನಿಗಳು ತಮ್ಮ ವರದಿಯನ್ನು ನೀಡುತ್ತಿವೆ. ಔಷಧದ ಆಣ್ವಿಕ ಸಂಯುಕ್ತದ ಪರೀಕ್ಷೆಯನ್ನು ನಮ್ಮ ಸರ್ಕಾರಿ ಪ್ರಯೋಗಾಲಯದಲ್ಲಿ ಮಾಡಲಾಗುತ್ತದೆ. ಇದು ಸುರಕ್ಷತಾ ನಿಯತಾಂಕಗಳನ್ನು ಕಂಡುಕೊಂಡಾಗ ಕೋವಿಡ್ -19 ರೋಗಿಗಳ ಮೇಲೆ ‘ನಿರ್ಬಂಧಿತ ತುರ್ತು ಬಳಕೆ’ಗೆ ಇವನ್ನು ಬಳಕೆ ಮಾಡಲಾಗುತ್ತದೆ. ಭಾರತವು ತನ್ನ ದೇಶೀಯ ಉತ್ಪನ್ನದ (ರೆಮ್ಡೆಸಿವಿರ್) ಪ್ರಯೋಜನವನ್ನು ಶೀಘ್ರದಲ್ಲೇ ಪಡೆಯಲಿದೆ “ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಎಎನ್ಐಗೆ ತಿಳಿಸಿದರು.