ಗೋಣಿಕೊಪ್ಪಲು, ಜೂ. 13 : ಕಿರುಗೂರು ಪಂಚಾಯ್ತಿ ವ್ಯಾಪ್ತಿಯ ಸಿ.ತಿಮ್ಮಯ್ಯ ಅವರ ಹಸು ಹಾಗೂ ಕರು ಬಲಿಯಾಗಿರುವುದರ ಹಿಂದೆ ಅರಣ್ಯ ಕಾಡು ಪ್ರಾಣಿಗಳು ದಾಳಿ ನಡೆಸಿ ಕೊಂದು ಹಾಕಿವೆ ಎಂದು ವೈದ್ಯರ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿ ಪೊಲೀಸ್ ಇಲಾಖೆಗೆ ವರದಿ ನೀಡಿದ್ದಾರೆ.

ಪೊನ್ನಂಪೇಟೆ ಪಶು ವೈದ್ಯಾಧಿಕಾರಿ ಡಾ. ಶ್ರೀನಿವಾಸ್, ಗೋಣಿಕೊಪ್ಪ ವೃತ್ತ ನಿರೀಕ್ಷಕ ರಾಮರೆಡ್ಡಿ ಕೇಳಿದ ವರದಿಗೆ ಉತ್ತರಿಸಿದ್ದು, ಕಾಡಿನಿಂದ ಆಗಮಿಸಿದ್ದ ಕಾಡು ಪ್ರಾಣಿಗಳು ಹಸು ಹಾಗೂ ಕರುವಿನ ಮೇಲೆ ದಾಳಿ ನಡೆಸಿ ಕೊಂದು ಹಾಕಿವೆ ಎಂದು ವರದಿಯಲ್ಲಿ ತಿಳಿಸಿದ್ದಾರೆ. ಕುತೂಹಲ ಕೆರಳಿಸಿದ್ದ ಈ ಪ್ರಕರಣವು ಆರಂಭದಲ್ಲಿ ಗುಂಡೇಟು ತಗುಲಿ ಜಾನುವಾರುಗಳು ಮೃತಪಟ್ಟಿರುವು ದಾಗಿ ಸಂದೇಹ ಹಾಗೂ ಅನುಮಾನ ವ್ಯಕ್ತಗೊಂಡಿತ್ತು. ಈ ಬಗ್ಗೆ ಹಸುವಿನ ಮಾಲೀಕ ಸಿ.ತಿಮ್ಮಯ್ಯ ಸಮಗ್ರ ತನಿಖೆ ನಡೆಸುವಂತೆ ಪೊನ್ನಂಪೇಟೆ ಪೊಲೀಸರಿಗೆ ದೂರು ನೀಡಿದ್ದರು.

ದೂರಿನ ಹಿನ್ನೆಲೆಯಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕ ರಾಮರೆಡ್ಡಿ ಹಾಗೂ ಪೊನ್ನಂಪೇಟೆ ಠಾಣಾಧಿಕಾರಿ ಡಿ.ಕುಮಾರ್ ಹಾಗೂ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿ ವಿವಿಧ ಕೋನಗಳಲ್ಲಿ ಹಸು,ಕರು ಸತ್ತಿರುವ ಬಗ್ಗೆ ತನಿಖೆ ಆರಂಭಿಸಿದ್ದರು. ವೈದ್ಯರ ವರದಿಗಾಗಿ ಎದುರು ನೋಡುತ್ತಿದ್ದರು. ಇದೀಗ ವೈದ್ಯರ ವರದಿ ಕೈಸೇರುತ್ತಿದ್ದಂತೆಯೇ ಹಸು,ಕರು ಬಲಿಯಾದ ಜಾಗದಲ್ಲಿ ಹುಲಿಯ ಹೆಜ್ಜೆ ಗುರುತುಗಳು ಕಂಡು ಬಂದಿವೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಹುಲಿ ಸಂಚಾರದ ಹೆಜ್ಜೆ ಗುರುತುಗಳನ್ನು ಪರಿಶೀಲನೆ ನಡೆಸಿದ್ದಾರೆ. ಜೂನ್ 4ರಂದು ಹಸರು, ಕರು ಮೃತಪಟ್ಟಿದ್ದವು.

ಹಸು ಹಾಗೂ ಕರುವಿನ ಕುತ್ತಿಗೆ ಭಾಗದಲ್ಲಿ ವಿಚಿತ್ರ ರೀತಿಯಲ್ಲಿ ಗಾಯಗಳಾಗಿರುವುದು ಕಂಡು ಬಂದಿತ್ತಾದರೂ ವನ್ಯ ಪ್ರಾಣಿಗಳಿಂದ ಹಸು,ಕರು ಮೃತಪಟ್ಟ ಬಗ್ಗೆ ಯಾವುದೇ ಹೆಜ್ಜೆ ಗುರುತುಗಳು ಸ್ಥಳದಲ್ಲಿ ಕಂಡು ಬಂದಿರಲಿಲ್ಲ. ಪೊನ್ನಂಪೇಟೆ ಪಶುವೈದ್ಯಾಧಿಕಾರಿ ಡಾ. ಚಂದ್ರಶೇಖರ್ ಅವರಿಂದ ಮರಣೋತ್ತರ ಪರೀಕ್ಷೆ ನಡೆಸಿದರಾದರೂ ವರದಿಗಾಗಿ ಕೆಲ ದಿನಗಳ ಕಾಲ ಕಾಯುವಂತೆ ಸೂಚನೆ ನೀಡಿದ್ದರು. ಹಸು,ಕರುವಿನ ಮೇಲೆ ಬಂದೂಕಿನಿಂದ ಸಿಡಿಸಿದ ಗುಂಡೇಟು ಎಂದು ನಾಗರಿಕರು ಹಾಗೂ ಮಾಲೀಕರು ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಇದರಿಂದ ಪೊಲೀಸರು ತನಿಖೆ ಆರಂಭಿಸಿದರು. ಇದೀಗ ವರದಿ ಕೈಸೇರಿರುವುದರಿಂದ ಜಾನುವಾರುಗಳಿಗೆ ಸರ್ಕಾರದಿಂದ ಪರಿಹಾರ ವಿತರಿಸುವಂತೆ ಪೊಲೀಸ್ ವೃತ್ತ ನಿರೀಕ್ಷಕ ರಾಮರೆಡ್ಡಿ ವರದಿ ಸಲ್ಲಿಸಿದ್ದಾರೆ.

-ಹೆಚ್.ಕೆ.ಜಗದೀಶ್