ಗೋಣಿಕೊಪ್ಪ ವರದಿ, ಜೂ. 13: ಎ.ಕೆ. ಸುಬ್ಬಯ್ಯ, ಪೊನ್ನಮ್ಮ ದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್ ಉದ್ಘಾಟನೆ ಹುದಿಕೇರಿ ಕೊಡವ ಸಮಾಜದಲ್ಲಿ ಶನಿವಾರ ನಡೆಯಿತು.

ಗ್ರಾಮದ ಹಿರಿಯರಾದ ಸಿ. ಕೆ. ಸೋಮಯ್ಯ ದೀಪ ಬೆಳಗಿಸುವ ಮೂಲಕ ಟ್ರಸ್ಟ್‍ನ್ನು ಉದ್ಘಾಟಿಸಿದರು. ನಂತರ ಮಾತನಾಡಿ, ಸುಬ್ಬಯ್ಯ ಅವರು ಜೀವನದುದ್ದಕ್ಕೂ ಹೋರಾಟಗಾರರಾಗಿದ್ದವರು ಶಾಸಕರಾಗಿ ವಿರೋಧ ಪಕ್ಷದ ಕಾರ್ಯವನ್ನು ಉತ್ತಮವಾಗಿ ನಿಭಾಯಿಸಿ ನ್ಯಾಯಪರವಾಗಿದ್ದವರು. ಕೊಡಗಿನ ಜಮ್ಮಾ ವಿಚಾರವಾಗಿ ಹೆಚ್ಚು ಹೋರಾಡಿದ ಇವರ ಹೆಸರಿನಲ್ಲಿ ಅವರ ಕುಟುಂಬಸ್ಥರು ಆರಂಭಿಸಿರುವ ಟ್ರಸ್ಟ್ ಯೋಜನೆಯಿಂದ ಜನರಿಗೆ ಹೆಚ್ಚು ಅನುಕೂಲವಾಗಲಿ ಎಂದರು.

ಈ ಸಂದರ್ಭ ಟ್ರಸ್ಟ್‍ನ ವ್ಯವಸ್ಥಾಪಕ ಎ.ಎಸ್. ಪೊನ್ನಣ್ಣ ಮಾತನಾಡಿ, ತಂದೆ ಮತ್ತು ತಾಯಿಯ ಹೆಸರಿನಲ್ಲಿ ಟ್ರಸ್ಟ್ ಸ್ಥಾಪನೆ ಮಾಡಲಾಗಿದ್ದು, ಪ್ರಸ್ತುತ ಬಡವರಿಗೆ ನೆರವಾಗಲು 2 ಸಾವಿರ ಜನರಿಗೆ ಆಹಾರ ಕಿಟ್ ವಿತರಿಸಲು ಯೋಜನೆ ರೂಪಿಸಿಕೊಳ್ಳಲಾಗಿದೆ. ಇದರಂತೆ ಈ ಭಾಗದಲ್ಲಿ ವಿತರಣೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಟ್ರಸ್ಟ್ ಶೈಕ್ಷಣಿಕ ಮತ್ತು ವೈದ್ಯಕೀಯವಾಗಿ ಸ್ಪಂದಿಸಲಿದೆ ಎಂದರು.

ಶಾಸಕಿ ವೀಣಾ ಅಚ್ಚಯ್ಯ, ಪ್ರಮುಖರಾದ ಚಂದ್ರಮೌಳಿ, ಮಂಜುನಾಥ್, ವಿ.ಪಿ. ಶಶಿಧರ್, ಮೀದೇರಿರ ನವೀನ್, ವಾಸು ಕುಟ್ಟಪ್ಪ, ಪುತ್ರರಾದ ಕಾರ್ಯಪ್ಪ ಉಪಸ್ಥಿತರಿದ್ದರು. ಸುಮಾರು 250 ಜನರಿಗೆ ಕಿಟ್ ವಿತರಣೆ ಮಾಡಲಾಯಿತು.