ಗೋಣಿಕೊಪ್ಪ ವರದಿ, ಜೂ. 12: ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಅವಧಿಯ ಸರ್ಕಾರದ ಒಂದು ವರ್ಷದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿ ದೇಶಕ್ಕೆ ಯಶಸ್ವಿ ತಂದು ಕೊಟ್ಟಿದೆ ಎಂದು ವೀರಾಜಪೇಟೆ ಬಿಜೆಪಿ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್‍ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರ ಸರ್ಕಾರ ಕೇಂದ್ರದಲ್ಲಿ ದೇಶಕ್ಕಾಗಿ ಸಾಕಷ್ಟು ಯೋಜನೆ, ನಿರ್ಧಾರಗಳನ್ನು ತೆಗೆದುಕೊಂಡು, ಭದ್ರಬುನಾದಿ ಹಾಕಿ ಕೊಟ್ಟಿದೆ ಎಂದು ಹೇಳಿದರು.
ಯೋಜನೆಗಳನ್ನು ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸಬೇಕೆಂಬ ನಿರೀಕ್ಷೆ, ಸಂಪನ್ಮೂಲ ಕ್ರೋಢೀಕರಣ, ಸದ್ಬಳಕೆ, ನೆನೆಗುದಿಗೆ ಬಿದ್ದಿದ್ದ ಸಮಸ್ಯೆಗಳನ್ನು ಪರಿಸಹರಿಸಲು ಸಾಕಷ್ಟು ಸವಾಲು ಎದುರಿಸಿ ಯಶಸ್ವಿ ಪಡೆದುಕೊಂಡಿದ್ದಾರೆ. ಇದು ದೇಶಕ್ಕೆ ಹೆಚ್ಚು ಅನುಕೂಲವಾಗುತ್ತಿದೆ ಎಂದು ಹೇಳಿದರು.
ಕೋವಿಡ್ -19 ಸವಾಲು ವಿಚಾರದಲ್ಲಿ ಪ್ರಧಾನಿ ತೆಗೆದುಕೊಂಡ ನಿರ್ಧಾರ ವಿಶ್ವಕ್ಕೆ ಮಾದರಿಯಾಯಿತು. ಇದರಿಂದ ದೇಶ ಮತ್ತು ರಾಜ್ಯದಲ್ಲೂ ಕೂಡ ಸೋಂಕಿತರ ಸಂಖ್ಯೆ ಇಳಿಮುಖವಾಗಲು ಸಾಧ್ಯವಾಗಿದೆ ಎಂದರು. ಗರೀಬ್ ಕಲ್ಯಾಣ್ ಯೋಜನೆಯಡೀ 1.7 ಲಕ್ಷ ಕೋಟಿ ರೂ ಪ್ಯಾಕೇಜ್, 80 ಕೋಟಿ ಫಲಾನುಭವಿಗಳಿಗೆ ಅಕ್ಕಿ, ಗೋದಿ, ಬೇಳೆ ವಿತರಣೆ, ವಿವಿಧ ಸಾಧನೆಗಳಲ್ಲಿ 1 ಕೋಟಿಗೂ ಅಧಿಕ ಆಯುಷ್ಮಾನ್ ಫಲಾನುಭವಿಗಳು, ಅಟಲ್ ಪೆನ್ಷನ್ ಯೋಜನೆಯಡಿ 5 ವರ್ಷಗಳಲ್ಲಿ 2.23 ಕೋಟಿ ಜನರ ನೋಂದಣಿ, ಕಿಸಾನ್ ಸಮ್ಮಾನ್ ನಿಧಿಯಲ್ಲಿ 16.5 ಕೋಟಿ ರೈತರಿಗೆ ಸಹಾಯಧನ, ಅಟಲ್ ಭೂಜಲ ಯೋಜನೆಯಡಿ 8350 ಹಳ್ಳಿಗಳಿಗೆ ನೀರು ಸೇರಿದಂತೆ ಸಾಕಷ್ಟು ಯೋಜನೆಗಳು ಪ್ರಯೋಜನಕಾರಿ ಯಾಗಿದೆ. ಈ ಸಾಧನೆ ದೇಶಕ್ಕೆ ಲಾಭ ತಂದಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಂಞಂಗಡ ಅರುಣ್ ಭೀಮಯ್ಯ ಮಾತನಾಡಿ, ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಕೂಡ ಯಶಸ್ಸು ಕಂಡಿದೆ. ಮುನ್ನೆಚ್ಚರಿಕೆಯಾಗಿ ಐಸೋಲೇಶನ್ ಆಸ್ಪತ್ರೆ, ವಾರ್ ರೂಂ, ಡ್ಯಾಶ್ ಬೋರ್ಡ್ ನಿರ್ಮಾಣ ಕಾರ್ಯ ಹೆಚ್ಚು ಸಹಕಾರಿಯಾಯಿತು.
ಇದರಂತೆ ಕಾರ್ಯಕರ್ತರಿಂದ ಸಂಕಷ್ಟಕ್ಕೆ ಸ್ಪಂದಿಸಲು ನಿರಂತರ ಸೇವಾ ಕಾರ್ಯ ನಡೆಯುತ್ತಿದೆ. ರಾಜ್ಯದ 58 ಸಾವಿರ ಬೂತ್‍ಗಳಿಂದ 1.47 ಕೋಟಿ ಆಹಾರ ಪೊಟ್ಟಣ ವಿತರಣೆ, 44.68 ಲಕ್ಷ ರೇಷನ್ ಕಿಟ್ ವಿತರಣೆ, 1 ಕೋಟಿಗೂ ಹೆಚ್ಚು ಮುಖಗವಸು ತಯಾರಿಕೆ, ದೇಣಿಗೆ ಸಂಗ್ರಹ ಕೂಡ ಕೋವಿಡ್ -19 ಸಂದರ್ಭ ಸಹಾಯವಾಯಿತು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಅಜ್ಜಿಕುಟ್ಟೀರ ಪ್ರವೀಣ್ ಮುತ್ತಪ್ಪ ಇದ್ದರು.