ಮಡಿಕೇರಿ, ಜೂ. 12: ಒಂದೂವರೆ ವರ್ಷದ ಹಿಂದೆ ಮಡಿಕೇರಿ ಮನೆಯಿಂದ ಚೇರಂಬಾಣೆ ಸಮೀಪದ ಪಾಕತಮ್ಮೆ ದೇವರ ವಾರ್ಷಿಕೋತ್ಸವಕ್ಕೆ ತೆರಳಿದ್ದ ಬಳಿಕ ನಾಪತ್ತೆಯಾಗಿರುವ ನಿವೃತ್ತ ಪೊಲೀಸ್ ಮುಖ್ಯಪೇದೆ ನಂಜುಂಡ ಅವರ ಪತ್ತೆಗಾಗಿ ಕೂಂಬಿಂಗ್ ಕಾರ್ಯಾಚರಣೆ ಕೈಗೊಳ್ಳಲಾಗುವದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಪ್ರತಿಕ್ರಿಯಿಸಿದ್ದಾರೆ.

ಈ ಸಂಬಂಧ ‘ಶಕ್ತಿ’ಯೊಂದಿಗೆ ಮೇಲಿನಂತೆ ಪ್ರತಿಕ್ರಿಯಿಸಿದ ಅವರು, ದುರ್ಗಮ ಕಾಡಿನೊಳಗೆ ನಾಪತ್ತೆಯಾಗಿರುವ ವ್ಯಕ್ತಿಯ ಉಡುಪು ಪತ್ತೆಯಾಗಿರುವ ಪರಿಸರದಲ್ಲಿ ಪೊಲೀಸ್ ಇಲಾಖೆ ಎನ್‍ಡಿಆರ್‍ಎಫ್ ತಂಡದೊಂದಿಗೆ ಜಂಟಿ ಕಾರ್ಯಾಚರಣೆ ಕೈಗೊಳ್ಳುವದಾಗಿ ನುಡಿದರು. ಸಂಬಂಧಿಸಿದ ವ್ಯಕ್ತಿಯ ಅಸ್ಥಿಪಂಜರ ಸೇರಿದಂತೆ ಯಾವದೇ ಕುರುಹು ದೊರಕುವ ತನಕ ಏನೊಂದು ನಿರ್ಧಾರ ಸಾಧ್ಯವಿಲ್ಲವೆಂದು ಅವರು ಸ್ಪಷ್ಟಪಡಿಸಿದರು. ಈ ಬಗ್ಗೆ ಸಾಕಷ್ಟು ಗುಮಾನಿ ಹುಟ್ಟಿಕೊಂಡಿದ್ದು, ಅಂತಿಮವಾಗಿ ಕೂಂಬಿಂಗ್‍ನಿಂದ ಪರಿಹಾರ ಹುಡುಕಲಾಗುವದು ಎಂದು ಅವರು ಮಾರ್ನುಡಿದರು.