ಗೋಣಿಕೊಪ್ಪಲು, ಜೂ. 12: ಕೊಡಗಿನ ಪ್ರಮುಖ ವಾಣಿಜ್ಯ ನಗರ ಗೋಣಿಕೊಪ್ಪ ನಗರ ಶಾಫಿ ಮುಸ್ಲಿಂ ಜಮಾಅತ್ ಮಸೀದಿಯಲ್ಲಿ ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸಿ ಶುಕ್ರವಾರದ ನಮಾಜ್‍ಗೆ ಚಾಲನೆ ನೀಡಲಾಯಿತು.ಕಳೆದ ಮೂರು ತಿಂಗಳಿನಿಂದ ದೇವಸ್ಥಾನ, ಮಸೀದಿ, ಚರ್ಚ್‍ಗಳು ಲಾಕ್‍ಡೌನ್‍ನಿಂದ ಮುಚ್ಚಲ್ಪಟ್ಟಿದ್ದು, ತಾ. 8 ರಂದು ಇವುಗಳನ್ನು ತೆರೆಯಲು ಸರಕಾರ ಅವಕಾಶ ಕಲ್ಪಿಸಿತ್ತು. ಕೆಲವೊಂದು ನಿಬಂಧನೆಗಳೊಂದಿಗೆ ಪುನರಾರಂಭ ಮಾಡಲು ಅವಕಾಶ ನೀಡಲಾಗಿತ್ತು.ಗೋಣಿಕೊಪ್ಪ ಶಾಫಿ ಮುಸ್ಲಿಂ ಜಮಾಅತ್ ಸಮಿತಿ ಸರ್ಕಾರದ ಎಲ್ಲಾ ನಿಬಂಧನೆಗಳನ್ನು ಪಾಲಿಸಿ ಜುಮಾ ನಮಾಜಿಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದೆ. ಮಸೀದಿಯ ಒಳಗಡೆ ಪ್ರವೇಶ ಮಾಡುವಾಗ (ಮೊದಲ ಪುಟದಿಂದ) ಸ್ಕ್ರೀನಿಂಗ್‍ಗೆ ಒಳಪಡಿಸಿ ಹ್ಯಾನ್ಡ್‍ವಾಷ್ ಮಾಡಿದ ಬಳಿಕ ಮಸೀದಿಗೆ ಪ್ರವೇಶಕ್ಕೆ ಅವಕಾಶವನ್ನು ನೀಡಲಾಗುತ್ತಿದೆ.ಹಿರಿಯ ನಾಗರಿಕರಿಗೆ ಹಾಗೂ 10 ವರ್ಷ ಒಳಗಿನ ಮಕ್ಕಳಿಗೆ ಮಸೀದಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ನಮಾಜಿಗೆ ಬೇಕಾದ ಎಲ್ಲಾ ವಸ್ತುಗಳನ್ನು ವೈಯಕ್ತಿಕವಾಗಿ ತೆಗದುಕೊಂಡು ಬರಬೇಕಾಗಿದೆ. ವುಝು ಕೂಡ ನಿರ್ವಹಿಸಲು ಮಸೀದಿಯಲ್ಲಿ ಅವಕಾಶ ನೀಡಿಲ್ಲ. ಮಾಸ್ಕ್ ಕಡ್ಡಾಯವಾಗಿ ಬಳಸಬೇಕಾಗಿದೆ.ಸಂಪೂರ್ಣ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಗೋಣಿಕೊಪ್ಪ ಮಸೀದಿಯ ಆಡಳಿತ ಮಂಡಳಿಯು ಮಸೀದಿ ಪ್ರವೇಶಕ್ಕೆ ಅನುಮತಿ ನೀಡಿದೆ.

ಶನಿವಾರಸಂತೆ : ಸಮೀಪದ ಕೊಡ್ಲಿಪೇಟೆ ಹ್ಯಾಂಡ್‍ಪೋಸ್ಟ್‍ನ ಮಸೀದಿಯಲ್ಲಿ ಶುಕ್ರವಾರ ಲಾಕ್‍ಡೌನ್ ತೆರವುಗೊಳಿಸಿದ ಬಳಿಕ ಮುಸ್ಲಿಂ ಸಮುದಾಯದವರು ಮೊದಲ ಬಾರಿಗೆ ವಿಶೇಷ ಪ್ರಾರ್ಥನೆ ಮಾಡಿದರು.

ಮಸೀದಿಯಲ್ಲಿ ಕೊರೊನಾ ವೈರಸ್ ವಿರುದ್ಧ ಆಡಳಿತ ಮಂಡಳಿ ಮುಂಜಾಗ್ರತಾ ಕ್ರಮ ಕೈಗೊಂಡಿತ್ತು. ಸ್ಯಾನಿಟೈಸರ್ ಸಿಂಪಡಿಸಿ ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗಿತ್ತು. ಸರ್ಕಾರದ ನಿರ್ದೇಶನದಂತೆ ಮಕ್ಕಳು ಹಾಗೂ 60 ವರ್ಷಕ್ಕೆ ಮೇಲ್ಪಟ್ಟವರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು, ಮಾಸ್ಕ್ ಧರಿಸಿ ಬಂದಿದ್ದರು. ಸ್ವತಃ ಅವರವರ ಮನೆಯಿಂದಲೇ ಚಾಪೆ ಜಮಖಾನವನ್ನು ತಂದಿದ್ದು, ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಿದರು.

ಸುಂಟಿಕೊಪ್ಪ : ಕಳೆದ ಎರಡೂವರೆ ತಿಂಗಳಿನಿಂದ ಕೊರೊನಾ ಲಾಕ್‍ಡೌನ್ ಸಡಿಲಗೊಂಡಿದ್ದು, ಮೊದಲ ಶುಕ್ರವಾರ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಮುಸ್ಲಿಂ ಸಮುದಾಯದವರು ತೊಡಗಿಸಿಕೊಂಡರು.

ಸುನ್ನಿ ಮುಸ್ಲಿಂ ಜಮಾಯತ್, ಸುನ್ನಿಶಾಫಿ ಜುಮ್ಮ ಮಸೀದಿ, ಹನಫಿ ಜಮಾಯತ್, ಗದ್ದೆಹಳ್ಳದ ನೂರ್‍ಲ್ಲಾ ಜುಮ್ಮಾ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡರು.

- ನೌಫಲ್, ರಾಜುರೈ, ನರೇಶ್