ಸೋಮವಾರಪೇಟೆ, ಜೂ. 12 : ಕೊಡಗು ಜಿಲ್ಲೆಯ ಸರ್ಕಾರಿ ಕಚೇರಿಗಳಿಗೆ ಹೋಲಿಸಿದರೆ ಮಿನಿ ವಿಧಾನ ಸೌಧದ ಹೆಸರಲ್ಲಿ ನಿರ್ಮಾಣ ವಾಗಿರುವ ಸೋಮವಾರ ಪೇಟೆಯ ತಾಲೂಕು ಕಚೇರಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದವರ ಇಚ್ಛಾಶಕ್ತಿಗೆ ಕಪ್ಪುಚುಕ್ಕೆ ಎಂದರೆ ತಪ್ಪಾಗಲಾರದು! ಕಳೆದ ಎರಡು ದಶಕಗಳಿಂದ ಸುಣ್ಣಬಣ್ಣ ಕಾಣದೆ ನೆಲೆ ನಿಂತಿರುವ ಮಿನಿ ವಿಧಾನಸೌಧ ಬೀಳುವ ಮುನ್ನ ಸರ್ಕಾರ ಎಚ್ಚರಿಕೆ ವಹಿಸಬೇಕಿದೆ. ಪ್ರತಿ ಮಳೆಗಾಲದಲ್ಲೂ ಕಟ್ಟಡದ ಒಳಭಾಗದಲ್ಲಿ ಮಳೆ ನೀರಿನಿಂದ ರಕ್ಷಣೆ ಪಡೆಯಲು ಟಾರ್ಪಲ್ ಮೊರೆ ಹೋಗಲಾಗುತ್ತಿದೆ.

ಮಳೆಗೆ ತಾಲೂಕು ಕಚೇರಿಯ ಅಲ್ಲಲ್ಲಿ ಸೋರಿಕೆಯಾಗುತ್ತಿದ್ದು, ಕಡತಗಳನ್ನು ರಕ್ಷಿಸಿಕೊಳ್ಳುವದೇ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಸಾಹಸದಂತಾಗಿದೆ. ತಾಲೂಕು ದಂಡಾಧಿಕಾರಿಗಳಿಗೂ ಇಲ್ಲಿ ರಕ್ಷಣೆ ಇಲ್ಲದಂತಾಗಿದೆ. ಕಳೆದ ಒಂದೂವರೆ ದಶಕ ದಿಂದಲೂ ತಾಲೂಕು ಕಚೇರಿ ಕಟ್ಟಡ ಶಿಥಿಲಾಸ್ಥೆಗೆ ತಲುಪುತ್ತಿದ್ದು, ಮಳೆಗಾಲ ಕಳೆಯುವದು ಸಿಬ್ಬಂದಿಗಳಿಗೆ ಹಗ್ಗದ ಮೇಲಿನ ನಡಿಗೆಯಂತಾಗಿದೆ. ತಾಲೂಕಿನ ಮಿನಿವಿಧಾನಸೌಧ ಮಳೆಗಾಲದಲ್ಲಿ ಸೋರಲು ಪ್ರಾರಂಭಿಸಿ ವರ್ಷಗಳೇ ಕಳೆದಿವೆ. ಆದರೆ ಇದುವರೆಗೆ ಕಟ್ಟಡ ದುರಸ್ತಿಗೆ ಸರ್ಕಾರ ಅನುದಾನ ಕಲ್ಪಿಸದ ಹಿನ್ನೆಲೆ, ಕಂದಾಯ ಇಲಾಖೆಯ ಸಾವಿರಾರು ಕಡತಗಳನ್ನು ರಕ್ಷಣೆ ಮಾಡಿಕೊಳ್ಳು ವದಕ್ಕೆ ಹರಸಾಹಸ ಪಡಬೇಕಾಗಿದೆ.

1997ರಲ್ಲಿ ನಿರ್ಮಾಣವಾದ ತಾಲೂಕು ತಹಶೀಲ್ದಾರರ ಕಟ್ಟಡಕ್ಕೆ ಮಿನಿ ವಿಧಾನಸೌಧ ಎಂದು ನಾಮಕರಣ ಮಾಡಲಾಗಿದೆ. 23 ವರ್ಷಗಳ ಹಿಂದೆ ಈ ಕಟ್ಟಡಕ್ಕೆ ಸುಮಾರು 1 ಕೋಟಿ ರೂ.ಗಳನ್ನು ವಿನಿಯೋಗಿಸ ಲಾಗಿದೆ. ಕೊಡಗಿನ ಹವಾಮಾನಕ್ಕೆ ತದ್ವಿರುದ್ಧವಾಗಿ ನಿರ್ಮಿಸಲಾಗಿರುವ ಮಿನಿ ವಿಧಾನ ಸೌಧ ಕಟ್ಟಡ ಉಪ ಯೋಗಕ್ಕಿಂತಲೂ ಉಪದ್ರವಕಾರಿ ಯಾಗಿದೆ.(ಮೊದಲ ಪುಟದಿಂದ) ಕಟ್ಟಡದಲ್ಲಿ ತಹಶೀಲ್ದಾರ್ ಕಚೇರಿ, ಖಜಾನೆ, ಚುನಾವಣೆ ಶಾಖೆ, ಆರ್‍ಟಿಸಿ ವಿತರಣಾ ಕೇಂದ್ರ, ನೆಮ್ಮದಿ ಕೇಂದ್ರ, ಆಹಾರ ಮತ್ತು ನಾಗರಿಕ ಸರಬರಾಜು ಕೇಂದ್ರ, ಭೂಮಿ ಇಲಾಖೆ, ಅಭಿಲೇಖಾಲಯ ಸೇರಿದಂತೆ ಕಂದಾಯ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ವಿಭಾಗಗಳು ಈ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿವೆ.

ಆರ್‍ಟಿಸಿ ವಿತರಿಸುವ ವಿಭಾಗದಲ್ಲಿ ಮೇಲ್ಚಾವಣಿಗೆ ಪ್ಲಾಸಿಕ್ ಹೊದಿಕೆಯನ್ನು ಕಟ್ಟಿ ಮಳೆ ನೀರಿನಿಂದ ಬಚಾವಾಗುವ ಪ್ರಯತ್ನವನ್ನು ಪ್ರತೀ ವರ್ಷ ಮಾಡಬೇಕಿದೆ. ರೆಕಾರ್ಡ್ ರೂಂನಲ್ಲಿ 1.37ಲಕ್ಷಕ್ಕೂ ಅಧಿಕ ಕಡತಗಳಿದ್ದು, ಅವುಗಳ ರಕ್ಷಣೆಗೆ ಹರಸಾಹಸ ಪಡಲಾಗುತ್ತಿದೆ. ಭೂಮಿ ಕೇಂದ್ರದಲ್ಲಿ ಮೇಲ್ಚಾವಣಿ ಹಾಗು ಗೋಡೆಗಳಲ್ಲಿ ನೀರು ಸೋರುತ್ತಿದೆ. ಚುನಾವಣಾ ಶಾಖೆ, ಆಡಳಿತ ಶಾಖೆ, ಆಹಾರ ಶಾಖೆ ಕೊಠಡಿಗಳು ಮಳೆಯಿಂದ ಜರ್ಝರಿತಗೊಳ್ಳುತ್ತಿದ್ದು, ಸಿಬ್ಬಂದಿಗಳು ಸಂಕಷ್ಟದೊಂದಿಗೆ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

ಆಡಳಿತ ಶಾಖೆಯ ಮೇಲ್ಛಾವಣಿ ಈಗಾಗಲೇ ಕುಸಿದು ಬೀಳುವ ಹಂತಕ್ಕೆ ತಲುಪಿದ್ದು, ಅದರ ಅಡಿಯಲ್ಲಿರುವ ನೌಕರರು ಜೀವ ಭಯದೊಂದಿಗೆ ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಕಟ್ಟಡ ದುರಸ್ತಿಗೆ ಅನುದಾನ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತಿದೆ. ಜಿಲ್ಲೆಯ ಹಿಂದಿನ ಉಸ್ತುವಾರಿ ಸಚಿವರುಗಳಾದ ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್, ಎಂ.ಆರ್.ಸೀತಾರಾಮ್, ಕಂದಾಯ ಇಲಾಖೆಯ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಆರೋಗ್ಯ ಇಲಾಖೆಯ ಮಾಜಿ ಸಚಿವ ಯು.ಟಿ.ಖಾದರ್ ಅವರಿಗೂ ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೆ ಕಟ್ಟಡ ದುರಸ್ತಿಗೆ ಸರ್ಕಾರದಿಂದ ಅನುದಾನ ಸಿಕ್ಕಿಲ್ಲ ಎಂದು ಅಧಿಕಾರಿಗಳು ನಿರಾಸೆ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಾರೆ ನಿರ್ವಹಣೆಯ ಕೊರತೆಯಿಂದ ಸೋಮವಾರಪೇಟೆ ಮಿನಿ ವಿಧಾನ ಸೌಧ ಸೊರಗುತ್ತಿದ್ದು, ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

-ವಿಜಯ್ ಹಾನಗಲ್