ಮಡಿಕೇರಿ, ಜೂ. 12: ಪ್ರಭಾವಿ ವ್ಯಕ್ತಿಯೊಬ್ಬರು ತನ್ನ ಕಟ್ಟಡವನ್ನು ಮಾಸಿಕ ರೂ. 20 ಸಾವಿರಕ್ಕೆ ಬಾಡಿಗೆ ನೀಡುವದರೊಂದಿಗೆ ಅನಧಿಕೃತ ಹೋಂ ಸ್ಟೇ ನಡೆಸುತ್ತಿರುವದು ಖಚಿತ ವಾಗಿರುವ ಬೆನ್ನಲ್ಲೇ ಪ್ರವಾಸೋದ್ಯಮ ಇಲಾಖೆಯಿಂದ ಬೀಗ ಜಡಿದು ಕಾನೂನು ಕ್ರಮ ಕೈಗೊಳ್ಳಲಾಗಿದೆ. ಭಾರತ ಲಾಕ್‍ಡೌನ್ ನಡುವೆ ಜಿಲ್ಲಾಡಳಿತದ ನಿರ್ಬಂಧ ಉಲ್ಲಂಘಿಸಿ, ಇಲ್ಲಿನ ಚಾಮುಂಡೇಶ್ವರಿ ನಗರದಲ್ಲಿ ಅನಧಿಕೃತ ಹೋಂಸ್ಟೇಯೊಂದಿಗೆ ಯಾರೋ ಅಪರಿಚಿತರು ತಂಗಿರುವ ದಾಗಿ ಅನಾಮಿಕ ವ್ಯಕ್ತಿಯೊಬ್ಬರು ನೀಡಿರುವ ಸುಳಿವಿನ ಮೇರೆಗೆ, ಪ್ರವಾಸೋದ್ಯಮ ಇಲಾಖೆ, ನಗರಸಭೆ ಹಾಗೂ ಪೊಲೀಸರು ಹಠಾತ್ ದಾಳಿ ನಡೆಸಿದ್ದಾರೆ. ಈ ಸಂದರ್ಭ ಬೆಂಗಳೂರು ದೇವನಹಳ್ಳಿ ನಿವಾಸಿಗಳೆನ್ನಲಾದ ಐವರು ವಾಸ್ತವ್ಯ ಹೂಡಿರುವದು ಕಂಡು ಬಂದಿದೆ.

ಈ ಅನಧಿಕೃತ ಹೋಂ ಸ್ಟೇ ಕಟ್ಟಡವನ್ನು ನಗರದ ಗದ್ದುಗೆ ನಿವಾಸಿ ಕಲಂದರ್ ಸಫಿ ಎಂಬ ವ್ಯಕ್ತಿ ನೋಡಿಕೊಳ್ಳುತ್ತಿದ್ದು, ಪುರಸಭೆಯ ಮಾಜಿ ಅಧ್ಯಕ್ಷ ಹರೀಶ್ ಎಂಬವರಿಗೆ ಮಾಸಿಕ ರೂ. 20 ಸಾವಿರ ಬಾಡಿಗೆ ನೀಡುತ್ತಿರುವದಾಗಿ ಹೇಳಿ ಕೊಂಡಿದ್ದಾಗಿದೆ.ಆ ಮೇರೆಗೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಾದ ರಾಘವೇಂದ್ರ, ಚೇತನ್, ನಗರಸಭೆಯ ರಮೇಶ್ ಹಾಗೂ ಪೊಲೀಸ್ ತಂಡ ಸಂಬಂಧಿಸಿದವರಿಗೆ ಮುನ್ನೆಚ್ಚರಿಕೆ ನೀಡುವದರೊಂದಿಗೆ ಕಾನೂನು ಕ್ರಮಕೈಗೊಂಡಿದ್ದಾರೆ. ಈ ಬಗ್ಗೆ ಕಟ್ಟಡ ಮಾಲೀಕರನ್ನು ವಿಚಾರಿಸಲಾಗಿ, ತಮಗೆ ವಾಸ್ತವ್ಯದ ಬಗ್ಗೆ ತಿಳಿದಿಲ್ಲವೆಂದು ಹೇಳಿದರೆ, ಮೇಲ್ವಿಚಾರಕ ಮಾತ್ರ ಮಾಸಿಕ

(ಮೊದಲ ಪುಟದಿಂದ) ರೂ. 20 ಸಾವಿರ ನೀಡುತ್ತಿದ್ದು, ಈ ಬಗ್ಗೆ ದಾಖಲಾತಿಗಳು ಇಲ್ಲವೆಂದು ಅಸಹಾಯಕತೆ ಹೊರಗೆಡವಿದಾಗಿ ಅಧಿಕಾರಿಗಳು ‘ಶಕ್ತಿ’ಗೆ ತಿಳಿಸಿದ್ದಾರೆ. ಅಲ್ಲದೆ, ಹೋಂ ಸ್ಟೇಗೆ ಬೀಗ ಜಡಿಯುವದರೊಂದಿಗೆ, ಸಂಬಂಧಪಟ್ಟವರಿಗೆ ಎಚ್ಚರಿಕೆ ನೀಡಿ ಕ್ರಮಕೈಗೊಂಡಿರುವದಾಗಿ ಖಚಿತಪಡಿಸಿದ್ದಾರೆ. ಇಂತಹ ಅಕ್ರಮಗಳ ಬಗ್ಗೆ ಯಾವದೇ ಸುಳಿವು ಲಭಿಸಿದರೆ ಇಲಾಖೆಯಿಂದ ಕಾನೂನು ಕ್ರಮ ಜರುಗಿಸಲಾಗುವದು ಎಂದು ಪ್ರವಾಸೋದ್ಯಮ ಅಧಿಕಾರಿಗಳು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. ದಾಳಿ ಸಂದರ್ಭ ಹಿತರಕ್ಷಣಾ ವೇದಿಕೆಯ ರವಿಗೌಡ, ನಾಗೇಶ್, ಪ್ರವೀಣ್ ಹಾಜರಿದ್ದರು.

ದಾಳಿ ಸ್ವಾಗತಾರ್ಹ

ಜಿಲ್ಲಾ ಆಡಳಿತದ ಅಣತಿಯಂತೆ ಪ್ರವಾಸೋದ್ಯಮ ಇಲಾಖೆಯು ಅನಧಿಕೃತ ಹೋಂಸ್ಟೇ ವಿರುದ್ಧ ದಾಳಿ ನಡೆಸಿದನ್ನು ಕೊಡಗು ಹೋಂಸ್ಟೇ ಅಸೋಸಿಯೇಶನ್ ಸ್ವಾಗತಿಸುತ್ತದೆ.

ರಾಜಾಸೀಟ್ ಸುತ್ತಮುತ್ತ ಹಾಗೂ ಹಲವೆಡೆ, ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಅನಧಿಕೃತ ಹೋಂಸ್ಟೇಗಳು ರಾಜಾರೋಷವಾಗಿ ವ್ಯವಹಾರ ನಡೆಸುತ್ತಿದ್ದು, ಎಲ್ಲವನ್ನೂ ಮುಚ್ಚಿಸುವಂತೆ ಜಿಲ್ಲಾ ಆಡಳಿತವನ್ನು ಅಸೋಸಿಯೇಶನ್ ಅಧ್ಯಕ್ಷ ಬಿ.ಜಿ. ಅನಂತಶಯನ ಒತ್ತಾಯಿಸಿದ್ದಾರೆ. ಕೊರೊನಾ ರೋಗಾಣು ಹರಡದಂತೆ ಮುಂಜಾಗ್ರತೆ ವಹಿಸದ ಎಲ್ಲರನ್ನೂ ನಿರ್ದಾಕ್ಷಿಣ್ಯವಾಗಿ ಶಿಕ್ಷಿಸುವಂತೆ ಆಗ್ರಹಿಸಿದ್ದಾರೆ.