ಮಡಿಕೇರಿ, ಜೂ. 10: ಒಂದೂವರೆ ವರ್ಷದ ಹಿಂದೆ ತಾ. 16.12.2018ರಲ್ಲಿ ಆ ಮನೆಯೊಳಗೆ ಆವರಿಸಿರುವ ನೀರವ ಮೌನ ಇಂದಿಗೂ ಮುಂದುವರೆದಿದೆ. ಅನಾರೋಗ್ಯದಿಂದ ಆಗಷ್ಟೇ ಆಸ್ಪತ್ರೆಯಿಂದ ಕಿಟ್ಟಿ ಜಾನಕಿ ಮನೆಗೆ ಬಂದಿದ್ದಾರೆ. ಪತಿ ಚೋಟು ನಂಜುಂಡ ಚೇರಂಬಾಣೆ ಬಳಿಯ ತಮ್ಮ ಗ್ರಾಮ ದೇವತೆ ಪಾಕತಮ್ಮೆಯ ವಾರ್ಷಿಕೋತ್ಸವಕ್ಕೆ ಹೊರಟು ನಿಂತಿದ್ದಾರೆ.

ತಮ್ಮ ಪತ್ನಿಯ ತಲೆಗೆ ಸುತ್ತಿ ದೇವರಿಗೆ ಕಾಣಿಕೆ ಹಾಗೂ ‘ಬೆಳ್ಳಿಯ ಆಳುರೂಪ’ವನ್ನು ದೋಷ ಪರಿಹಾರಕ್ಕಾಗಿ ತೆಗೆದುಕೊಂಡ ನಂಜುಂಡ, ಕ್ಷೀಣ ಧನಿಯಲ್ಲಿ, ಪಾಕತಮ್ಮೆಗೆ ಹರಕೆ ಸಲ್ಲಿಸಿ ಬೇಗನೆ ಮನೆಗೆ ಹಿಂತಿರುಗುವೆ ಎಂದು ನುಡಿದರಂತೆ. ತಮ್ಮ ನಿವಾಸದಿಂದ ದ್ವಾರವನ್ನು ದಾಟಿ ರಸ್ತೆಗೆ ಬಂದು, ಮತ್ತೊಮ್ಮೆ ಮಡದಿಯತ್ತ ಹಿಂತಿರುಗಿ ನೋಡಿ, ಹೋಗಿ ಬರುವುದಾಗಿ ಕೈಸನ್ನೆ ಮಾಡಿದ್ದರಂತೆ.ಅಂದಿನಿಂದ ಇಂದಿನ ತನಕವೂ ಮನೆಯೊಳಗೆ ಒಂಟಿ ಜೀವನ ನಡೆಸುತ್ತಿರುವ ಕಿಟ್ಟಿ ಜಾನಕಿ ಅವರಿಗೆ ಈ ದೃಶ್ಯವಷ್ಟೇ ಕಣ್ಣೆದುರು ಸುಳಿದಾಡುತ್ತಿದೆ. ಬದಲಾಗಿ ಪತಿ ನಂಜುಂಡ ಏನಾಗಿದ್ದಾರೆ ಎಂದು ತಿಳಿಯದಾಗಿದೆ. ಹೀಗಾಗಿ ಮತ್ತೆ ಮತ್ತೆ ಪತಿಯ ನೆನಪಿನಲ್ಲಿ ದುಃಖಿಸುತ್ತಾ, ಪುನಃ ಉಸಿರು ಬಿಗಿಹಿಡಿದುಕೊಂಡು ಚೋಟು (ಗಂಡ) ಬಂದೇ ಬರುತ್ತಾರೆ ಎಂದು ಹಂಬಲಿಸುತ್ತಾರೆ.

ಸರಿ ಸುಮಾರು ಒಂದೂವರೆ ವರ್ಷದ ಬಳಿಕ ಪೊಲೀಸರು ಈ ಮನೆಯ ಕದ ತಟ್ಟಿದ್ದಾರೆ. ಕಿಟ್ಟಿ ಅವರ ಕಣ್ಣೆದುರು ಒಂದು ಪ್ಯಾಂಟ್, ಶರ್ಟ್, ಪರ್ಸ್, ಚಿನ್ನದ ಕೈಬಳೆ ತೋರಿಸುತ್ತಾರೆ.

(ಮೊದಲ ಪುಟದಿಂದ) ಇದನ್ನು ಗಮನಿಸಿದ ಆಕೆಗೆ ತನ್ನ ಪತಿ ಚೋಟು ವರ್ಷವೇ ಉರುಳಿದ ಸಂದರ್ಭ ಧರಿಸಿದ್ದ ವಸ್ತ್ರವೇ ಇದಾಗಿತ್ತು ಎಂದು ಮತ್ತಷ್ಟು ದುಃಖವಾಗುತ್ತದೆ.

ಅಲ್ಲದೆ, ಈ ಬಟ್ಟೆ ಎಲ್ಲಿ ಸಿಕ್ಕಿತು? ಪತಿ ಚೋಟು... ಎಲ್ಲಿ? ಎಂಬ ಪ್ರಶ್ನೆಗೆ ಪೊಲೀಸರು ಮೌನವಾಗಿದ್ದಾರೆ. ಬದಲಾಗಿ ಕಿಟ್ಟಿ ಅವರ ಸೋದರ ಕಾಳಪ್ಪ ಅವರನ್ನು ಸಂಪರ್ಕಿಸುತ್ತಾರೆ.

ದುರ್ಗಮ ಹಾದಿ: ಒಂದೂವರೆ ವರ್ಷದ ಹಿಂದೆ ಚೇರಂಬಾಣೆ ಬಳಿಯ ಪಾಕ ಶ್ರೀ ಭಗವತಿ (ಪಾಕತ್ತಮೆ) ದೇವಾಲಯದ ವಾರ್ಷಿಕೋತ್ಸವದಲ್ಲಿ ಗ್ರಾಮಸ್ಥರೊಂದಿಗೆ ನಂಜುಂಡ ಪಾಲ್ಗೊಂಡಿದ್ದ ದೇವಾಲಯದತ್ತ ಅವರನ್ನು ಪೊಲೀಸರು ಕರೆದೊಯ್ಯುತ್ತಾರೆ. ಅಲ್ಲಿಂದ ಮುಂದಕ್ಕೆ ಸುಮಾರು 3 ಕಿ.ಮೀ. ದೂರ ದುರ್ಗಮ ಹಾದಿಯ ಭಯಾನಕ ಅರಣ್ಯದೊಳಗೆ ಸಾಗುತ್ತಾರೆ. ತೀರಾ ಕಡಿದಾದ ಅರಣ್ಯದೊಳಗೆ ಹೊರಟವರಿಗೆ ಈ ಮಾರ್ಗದಲ್ಲಿ ಇಳಿವಯಸ್ಸಿನ ನಂಜುಂಡ ಹೇಗೆ ತೆರಳಿರಬಹುದು? ಎಂಬ ಪ್ರಶ್ನೆ ಕಾಡತೊಡಗಿದೆ.

ಕೊನೆಗೂ 3 ಕಿ.ಮೀ. ಸಾಗಿದಾಗ ಕೇರಳ ಮೂಲದ ವ್ಯಕ್ತಿಯೊಬ್ಬರ ಜಾಗದ ಒತ್ತಿನಲ್ಲಿರುವ ನಿರ್ಜನ ಪ್ರದೇಶದಲ್ಲಿ ತರಗೆಲೆಗಳ ನಡುವೆ ನಂಜುಂಡ ಅವರ ಉಡುಪು ಪತ್ತೆಯಾದ ಜಾಗವನ್ನು ಪೊಲೀಸರು ಗುರುತು ಮಾಡಿರುವುದು ಗೋಚರಿಸಿದೆ.

ಮರುಕ್ಷಣ ಹುಟ್ಟಿಕೊಂಡಿರುವ ಸಂಶಯವೆಂದರೆ, 2018ರ ಡಿಸೆಂಬರ್‍ನಲ್ಲಿ ಕಾಣೆಯಾಗಿರುವ ನಂಜುಂಡ ಅವರ ಉಡುಪು 2019 ವಿಪರೀತ ಮಳೆಗಾಲದ ಬಳಿಕ, ಪ್ರಸ್ತುತ ಕಾಲಘಟ್ಟದ ಮಳೆಯ ನಡುವೆ ಅಲ್ಲಿ ಸುರಕ್ಷಿತವಾಗಿ ಹೇಗೆ ಪತ್ತೆಯಾಯಿತು? ಮಾತ್ರವಲ್ಲದೆ ಕೈ ಬಳೆ, ಪರ್ಸ್, ಸೊಂಟದ ಬೆಲ್ಟ್ ಕೂಡ ಮಳೆಯಿಂದ ತೋಯ್ದು ಹಾನಿಯಾಗಲಿಲ್ಲವೇಕೆ?

ಈ ಎಲ್ಲ ಸಂಶಯದೊಂದಿಗೆ ಪೊಲೀಸರು ಹೇಗೆ ಮಾಹಿತಿ ಕಲೆ ಹಾಕಿದರು ಎಂದು ತಿಳಿದುಕೊಳ್ಳಲು ಕಾಳಪ್ಪ ಹಂಬಲಿಸಿದ್ದಾರೆ. ಆಗ ಲಭಿಸಿರುವ ಮಾಹಿತಿಯಂತೆ, ಈ ದುರ್ಗಮ ಪ್ರದೇಶದಲ್ಲಿ ಒಂದಿಷ್ಟು ಕುಡಿಯ ಜನಾಂಗ ವಾಸವಿದ್ದಾರೆ. ಅಲ್ಲಿ ಕೆಲವರು ಜೇನಿಗಾಗಿ ಹುಡುಕುತ್ತಾ ಕಾಡು-ಮೇಡು ಅಲೆದಿದ್ದಾರೆ.

ಆ ವೇಳೆ ಒಂದೊಮ್ಮೆ ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆಯೊಂದಿಗೆ ನಿವೃತ್ತಿ ಹೊಂದಿದ್ದ ನಂಜುಂಡ ಅವರ ವಸ್ತ್ರದ ಕುರಿತು ಮಾಹಿತಿ ಲಭಿಸಿ ಪೊಲೀಸರಿಗೆ ವಿಷಯ ಸಿಕ್ಕಿದೆ. ಭಾಗಮಂಡಲ ಠಾಣೆಗೆ ಲಭಿಸಿದ ಮಾಹಿತಿ ಮೇರೆಗೆ, ಅಲ್ಲಿನ ಠಾಣಾಧಿಕಾರಿ ಮಹದೇವ ನೇತೃತ್ವದಲ್ಲಿ ದುರ್ಗಮ ಸ್ಥಳ ಪರಿಶೀಲನೆ ನಡೆಸಲಾಗಿದೆ.

ಆದರೆ, ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಒಂದೂವರೆ ವರ್ಷದ ಹಿಂದೆ, ನಾಪತ್ತೆ ಪ್ರಕರಣ ದಾಖಲಾಗಿರುವ ಕಾರಣ ಈ ಸಂಬಂಧ ತನಿಖೆಯು ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ನೇತೃತ್ವದಲ್ಲಿ ನಡೆಯುತ್ತಿದೆ. ಒಂದೊಮ್ಮೆ ಪೊಲೀಸ್ ಇಲಾಖೆಯ ಉದ್ಯೋಗಿಯಾಗಿ ನಿವೃತ್ತಿ ಹೊಂದಿರುವ ನಂಜುಂಡ ನಾಪತ್ತೆ ಪ್ರಕರಣ, ಪೊಲೀಸರಿಗೆ ಸವಾಲಾಗಿ ಪರಿಣಮಿಸಿದರೆ; ಕಿಟ್ಟಿ ಜಾನಕಿ ಪತಿಯ ಬಗ್ಗೆ ನಿಖರ ಮಾಹಿತಿಗಾಗಿ ಪರಿತಪಿಸುತ್ತಾ, ಕಣ್ಣೀರಿನೊಂದಿಗೆ ದಿನ ಕಳೆಯುತ್ತಿದ್ದಾರೆ.