ಮಡಿಕೇರಿ, ಜೂ. 10: ನಿನ್ನೆ ಬೆಳಗಿನ ಜಾವ ಸುರಿದ ಮಳೆ ಹಾಗೂ ಗಾಳಿಯಿಂದಾಗಿ ರಸ್ತೆ ಬದಿ ಮರ ವೊಂದು ಮುರಿದು ಬಿದ್ದ ಪರಿಣಾಮ ವಿದ್ಯುತ್ ತಂತಿ ತುಂಡಾಗಿ ಬೆಂಕಿ ಹೊತ್ತಿಕೊಂಡ ದುರಂತ ಸಂಭವಿಸಿದೆ. ಹಟ್ಟಿಹೊಳೆ-ಹಮ್ಮಿಯಾಲ ಮಾರ್ಗದ ಹಚ್ಚಿನಾಡುವಿನಲ್ಲಿ ಈ ಭಯಾನಕ ದೃಶ್ಯ ಕಂಡುಬಂದಿದೆ.

ವಿದ್ಯುತ್ ಮಾರ್ಗ ಹರಿದು ಹೋಗಿರುವ ರಸ್ತೆ ಬದಿ ಹಸಿ ಮರವೊಂದು ತುಂಡಾಗಿ ತಂತಿಯ ಮೇಲೆ ಬಿದ್ದಿದೆ. ಈ ವೇಳೆ ತುಂಡರಿ ಸಲ್ಪಟ್ಟಿರುವ ವಿದ್ಯುತ್ ಹರಿಯುತ್ತಿದ್ದ ತಂತಿ ನೆಲದಲ್ಲಿ ಹರಡಿಕೊಂಡು ಕ್ಷಣ ಮಾತ್ರದಲ್ಲಿ ಬೆಂಕಿ ಉರಿಯತೊಡಗಿದೆ. ಈ ಬಗ್ಗೆ ಗ್ರಾಮಸ್ಥರು ನೀಡಿರುವ ಮಾಹಿತಿ ಮೇರೆಗೆ ಚೆಸ್ಕಾಂನ ಸಹಾಯಕ ಕಾರ್ಯಪಾಲಕ ಅಭಿಯಂತರ ಸಂಪತ್‍ಕುಮಾರ್ ಗಮನ ಹರಿಸಿದ್ದಾರೆ.

ಮಳೆಯ ನಡುವೆ ಚೆಸ್ಕಾಂ ಸಿಬ್ಬಂದಿಗಳಾದ ರವಿಕುಮಾರ್ ತಂಡ ಸ್ಥಳಕ್ಕೆ ಧಾವಿಸಿದೆ. ತಂತಿ ಮೇಲೆ ಬಿದ್ದಿದ್ದ ಹಸಿ ಮರವನ್ನು ತೆರವುಗೊಳಿಸಿದೆ. ಅಲ್ಲದೆ ಮುಂದೆ ಎದುರಾಗಲಿದ್ದ ಹೆಚ್ಚಿನ ಅನಾಹುತ ವನ್ನು ತಪ್ಪಿಸಿದ್ದಾರೆ. ಇದರೊಂದಿಗೆ ಹಚ್ಚಿನಾಡು, ಹಮ್ಮಿಯಾಲ, ಮುಟ್ಲು ವ್ಯಾಪ್ತಿಯ ಗ್ರಾಮೀಣ ಜನತೆಗೆ ಎದುರಾಗಿದ್ದ ಕತ್ತಲೆಯನ್ನು ದೂರಗೊಳಿಸಿ, ಬದಲಿ ವಿದ್ಯುತ್ ತಂತಿ ಅಳವಡಿಸುವ ಮುಖಾಂತರ ಅಲ್ಲಿನ ಜನತೆಯ ಪ್ರಶಂಸೆಗೆ ಭಾಜನರಾಗಿದ್ದಾರೆ.

ಮಾತ್ರವಲ್ಲದೆ ಈ ಮಾರ್ಗದಲ್ಲಿ ಗ್ರಾಮಸ್ಥರು, ಜಾನುವಾರುಗಳು ಸುಳಿದಾಡಿದ್ದರೆ ಎದುರಾಗಲಿದ್ದ ಪ್ರಾಣಾಪಾಯವನ್ನು ತಪ್ಪಿಸಿ ನಿಟ್ಟುಸಿರು ಬಿಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿ ಸಂಪತ್ ಅವರು, ಯಾವುದೇ ಸಂದರ್ಭ ವಿದ್ಯುತ್ ತಂತಿ ತುಂಡಾಗಿ ಅಥವಾ ಕಂಬ ಮುರಿದಿರುವ ಸನ್ನಿವೇಶ ಎದುರಾದರೆ, ಸಾರ್ವಜನಿಕರು ಅತ್ತ ಹೋಗದೆ, ತುರ್ತಾಗಿ ಚೆಸ್ಕಾಂ ಕಚೇರಿಗೆ ಮಾಹಿತಿ ನೀಡುವಂತೆ ಸಲಹೆ ನೀಡಿದ್ದಾರೆ.