ಮಡಿಕೇರಿ, ಜೂ. 10: ಕೊಡಗು ಜಿಲ್ಲೆಗೆ ಮುಂಗಾರು ಪ್ರವೇಶಿಸಿರುವ ಮಾಹಿತಿ ಲಭ್ಯವಿದ್ದರೂ ಅಷ್ಟಾಗಿ ಮಳೆ ಕಂಡುಬಂದಿಲ್ಲ. ಅಲ್ಲಲ್ಲಿ ರಾತ್ರಿ ಮಳೆಯಾಗಿದ್ದರೂ ಮೋಡ ಮುಸುಕಿದ ವಾತಾವರಣದೊಂದಿಗೆ ಇಂದು ಹಗಲು ಜಿಲ್ಲಾ ಕೇಂದ್ರ ಸಹಿತ ಅಲ್ಲಲ್ಲಿ ಪಿರಿಪಿರಿ ಎಂಬಂತೆ ಅಲ್ಪ ಮಳೆಯಾಗಿದೆ. ಹಿಂದಿನ 24 ಗಂಟೆಗಳಲ್ಲಿ ತಲಕಾವೇರಿ ವ್ಯಾಪ್ತಿಯಲ್ಲಿ 1.8 ಇಂಚು ಮಳೆಯಾದರೆ, ಭಾಗಮಂಡಲಕ್ಕೆ 0.90 ಇಂಚು ಮಳೆ ಬಿದ್ದಿದೆ.
ಗ್ರಾಮೀಣ ಪ್ರದೇಶಗಳಾದ ಹಮ್ಮಿಯಾಲ, ಮುಟ್ಲು ಇತರೆಡೆ 1.12 ಇಂಚು ಮಳೆಯಾಗಿದ್ದು, ಗೋಣಿಕೊಪ್ಪಲು ವ್ಯಾಪ್ತಿಗೆ 0.66 ಇಂಚು ದಾಖಲಾಗಿದೆ. ವೀರಾಜಪೇಟೆ ಸುತ್ತಮುತ್ತ 0.48 ಇಂಚು ಹಾಗೂ ಜಿಲ್ಲಾ ಕೇಂದ್ರ ಮಡಿಕೇರಿ ಸರಹದ್ದಿನಲ್ಲಿ 0.30 ಇಂಚು ಮಳೆ ಕಂಡುಬಂದಿದೆ.
ದಕ್ಷಿಣ ಕೊಡಗಿನ ಇತರೆಡೆಗಳಲ್ಲಿ ಹಾಗೂ ಉತ್ತರ ಕೊಡಗಿನ ಸೋಮವಾರಪೇಟೆ, ಕುಶಾಲನಗರ, ಕೊಡ್ಲಿಪೇಟೆ ವ್ಯಾಪ್ತಿ ಮಳೆಯಾಗದೆ, ಮೋಡದ ವಾತಾವರಣ ಗೋಚರಿಸಿದೆ.